ಮಾರುಕಟ್ಟೆ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ

| Published : Feb 08 2024, 01:32 AM IST

ಸಾರಾಂಶ

ಮೂರು ರಾಜ್ಯಗಳ ಗಡಿ ಭಾಗದಲ್ಲಿ ೨೫ ಎಕರೆ ಪ್ರದೇಶದಲ್ಲಿ ಬೃಹತ್ ಎಪಿಎಂಸಿ ಮಾರುಕಟ್ಟೆ ಪ್ರಾರಂಭಿಸಲು ಕಳೆದ ಎರಡು ವರ್ಷಗಳಿಂದ ಶಾಸಕರ ಅವಿರತ ಪ್ರಯತ್ನದಿಂದ ೨೫ ಎಕರೆ ಪ್ರದೇಶದ ಸಮತಟ್ಟು ಹಾಗೂ ಕಾಂಪೌಂಡ್ ನಿರ್ಮಾಣದ ಕಾಮಗಾರಿ ನಡೆಯಲಿದೆ.

ಕೆಜಿಎಫ್‌ನ ಕದರಿಗಾನಕುಪ್ಪದ ಬಳಿ ಕಾಮಗಾರಿ । ೨೫ ಎಕರೆಯಲ್ಲಿ ಪ್ರದೇಶದಲ್ಲಿ ಬೃಹತ್ ಮಾರುಕಟ್ಟೆ ನಿರ್ಮಾಣಕ್ಕೆ ಅಡಿಗಲ್ಲು । ಸಾವಿರಾರು ರೈತರಿಗೆ ಅನುಕೂಲ

ಕನ್ನಡಪ್ರಭ ವಾರ್ತೆ ಕೆಜಿಎಫ್

ತಾಲೂಕಿನ ಬಹುದಿನಗಳ ಬೇಡಿಕೆಯಾಗಿದ್ದ ಎಪಿಎಂಸಿ ಮಾರುಕಟ್ಟೆಗೆ ೨ ಕೋಟಿ ರು.ಗಳ ಮೊದಲ ಹಂತದ ಕಾಮಗಾರಿಗೆ ಶಾಸಕಿ ರೂಪಕಲಾ ಶಶಿಧರ್ ಭೂಮಿ ಪೂಜೆ ನೇರವೇರಿಸಿದರು.

ಮೂರು ರಾಜ್ಯಗಳ ಗಡಿ ಭಾಗದಲ್ಲಿ ೨೫ ಎಕರೆ ಪ್ರದೇಶದಲ್ಲಿ ಬೃಹತ್ ಎಪಿಎಂಸಿ ಮಾರುಕಟ್ಟೆ ಪ್ರಾರಂಭಿಸಲು ಕಳೆದ ಎರಡು ವರ್ಷಗಳಿಂದ ಶಾಸಕರ ಅವಿರತ ಪ್ರಯತ್ನದಿಂದ ೨೫ ಎಕರೆ ಪ್ರದೇಶದ ಸಮತಟ್ಟು ಹಾಗೂ ಕಾಂಪೌಂಡ್ ನಿರ್ಮಾಣದ ಕಾಮಗಾರಿ ನಡೆಯಲಿದೆ.

ಬಂಗಾರಪೇಟೆ ತಾಲೂಕಿನಿಂದ ಕೆಜಿಎಫ್ ತಾಲೂಕು ಪ್ರತ್ಯೇಕಗೊಂಡ ನಂತರ ಎಪಿಎಂಸಿ ಮಾರುಕಟ್ಟೆಗೆ ಆಂಧ್ರ ಗಡಿ ಭಾಗದ ಕದರಿಗಾನಕುಪ್ಪದ ಬಳಿ ೨೫ ಎಕರೆ ಪ್ರದೇಶ ಗುರುತಿಸಲಾಗಿತ್ತು.

ಕಂದಾಯ ಅಧಿಕಾರಿಗಳ ತಂಡ ಕಳೆದ ಎರಡು ತಿಂಗಳಿನಿಂದ ಸ್ಯಾಟಲೈಟ್ ಸರ್ವೇ ಮುಖಾಂತರ ಎಪಿಎಂಸಿ ಮಾರುಕಟ್ಟೆಯ ಜಾಗದ ಬೌಂಡರಿ ಗುರುತಿಸಿ ಕದಿರಗಾನಕುಪ್ಪದ ಸರ್ವೇ ನಂ.೩ ರಲ್ಲಿ ೨೦ ಎಕರೆ, ಸರ್ವೇ ನಂ.೭೧ ರಲ್ಲಿ ೫ ಎಕರೆ ಭೂಮಿ ಗುರುತಿಸಿ ಸರಕಾರದಿಂದ ಅನುಮತಿ ಪಡೆಯಲಾಗಿದೆ.

ಮೂರು ರಾಜ್ಯಗಳ ರೈತರಿಗೆ ಬೃಹತ್ ಮಾರುಕಟ್ಟೆ:

ರಾಜ್ಯದ ಕೆಜಿಎಫ್ ತಾಲೂಕು, ಮುಳಬಾಗಿಲು ತಾಲೂಕು, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ರೈತರಿಗೆ ಈ ಮಾರುಕಟ್ಟೆ ಅನುಕೂಲಕರವಾಗಿದ್ದು, ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದು ಮಾರಲು ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶಾಸಕಿ ರೂಪಕಲಾ ಶಶಿಧರ್ ಟೊಂಕಕಟ್ಟಿ ನಿಂತಿದ್ದರು. ದಕ್ಷಿಣದ ಮೂರು ರಾಜ್ಯಗಳ ಬೃಹತ್ ಎಪಿಎಂಸಿ ಮಾರುಕಟ್ಟೆ ಇದಾಗಲಿದ್ದು, ಬಹುತೇಕ ರೈತರು ಚನ್ನೈ ಮತ್ತು ಆಂಧ್ರ ಪ್ರದೇಶದ ಮಾರುಕಟ್ಟೆಗೆಳಿಗೆ ಬೆಳೆದ ತರಕಾರಿ, ಹಣ್ಣು, ಹೂಗಳನ್ನು ತೆಗೆದುಕೊಂಡು ಹೋಗಿ ಮಾರಿಕೊಂಡು ಬರುತ್ತಿದ್ದರು. ಮಾರುಕಟ್ಟೆ ಪ್ರಾರಂಭವಾಗುವದರಿಂದ ಇಲ್ಲಿಯೇ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಿ ಕೊಡಲಾಗುತ್ತಿದೆ.

ಬೆಂಗಳೂರು-ಚನ್ನೈ ಎಕ್ಸಪ್ರೆಸ್ ಕಾರಿಡಾರ್ ಪಕ್ಕದಲ್ಲಿ ಮಾರುಕಟ್ಟೆ:

ರೈತರು ಬೆಳೆದ ತರಕಾರಿ ಸಾಗಾಟ ಮಾಡಲು ಎಕ್ಷಪ್ರೆಸ್ ಕಾರಿಡಾರ್ ಪಕ್ಕದಲ್ಲೇ ಎಪಿಎಂಸಿ ಮಾರುಕಟ್ಟೆ ಸ್ಥಾಪನೆ ಮಾಡುತ್ತಿರುವುರಿಂದ ರೈತರು ಬೆಳೆದಿರುವ ತರಕಾರಿ ಕೊಳ್ಳಲು ಸಗಟು ವ್ಯಾಪಾರಿಗಳು ಮೂರು ರಾಜ್ಯಗಳಿಂದಲೂ ಬರಲಿದ್ದಾರೆ, ಇದರಿಂದ ರೈತರು ಬೆಳೆದ ಉತ್ಸನ್ನಗಳನ್ನು ಸಾಗಾಟ ಮಾಡಲು ಅನುಕೂಲವಾಗಲಿದ್ದು, ಸಾವಿರಾರು ರೈತರಿಗೆ ಈ ಮಾರುಕಟ್ಟೆ ಸಂಜೀವಿನಿಯಾಗಲಿದೆ.

ಎಪಿಎಂಸಿ ಉಪಾಧ್ಯಕ್ಷರಾದ ಆನಂದ್, ಅ.ಮು.ಲಕ್ಷ್ಮೀ ನಾರಾಯಣ್, ಅಪ್ಪಿರೆಡ್ಡಿ, ಯರ್ರನಗಾನಹಳ್ಳಿ ವಿಜಯರಾಘವರೆಡ್ಡಿ, ಶ್ರೀನಿವಾಸರೆಡ್ಡಿ, ಆನಂದ್, ಪದ್ಮನಾಭರೆಡ್ಡಿ, ಅಯ್ಯಪ್ಪ ಇದ್ದರು.

------

ಕೋಟ್.......

ಕೆಜಿಎಫ್ ತಾಲೂಕಿನ ಎಪಿಎಂಸಿ ಮಾರುಕಟ್ಟೆಗೆ ಅಗತ್ಯವಿರುವ ೨೫ ಎಕರೆ ಭೂಮಿಯನ್ನು ಗುರುತಿಸಿದ್ದು, ಮೊದಲನೇ ಹಂತದಲ್ಲಿ ೨೫ ಎಕರೆ ಜಾಗ ಸಮತಟ್ಟುತೊಳಿಸಿ ೨೫ ಎಕರೆ ಭೂಮಿಗೆ ಕಾಂಪೌಂಡ್ ನಿರ್ಮಾಣದ ಕಾಮಗಾರಿ ನಡೆಯಲಿದೆ, ನಂತರ ಮಾರುಕಟ್ಟೆ ಪ್ರಾರಂಭಿಸಲು ಅಗತ್ಯವಿರುವ ಅನುದಾನದ ಮೂಲಕ ಶಾಸಕರು, ಸರಕಾರದ ಗಮನಕ್ಕೆ ತಂದು ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು.

- ವಿಜಯರಾಘವರೆಡ್ಡಿ, ಎಪಿಎಂಸಿ ಅಧ್ಯಕ್ಷ.

------------

ಕೋಟ್.......

ಕೆಜಿಎಫ್ ತಾಲೂಕು ಪ್ರತ್ಯೇಕಗೊಂಡ ನಂತರ ರೈತರಿಗೆ ಏನಾದರೂ ಮಾಡಬೇಕೆಂದು ಕನಸುಕಟ್ಟಿಕೊಂಡಿದ್ದೆ, ನಾನು ಮಾಡಿದ ಕೆಲಸ ಶಾಶ್ವತವಾಗಿರಬೇಕಾದರೆ ರೈತರಿಗೆ ಎಪಿಎಂಸಿ ಬೃಹತ್ ಮಾರುಕಟ್ಟೆ ಮಾಡಬೇಕೆಂದು ಸರಕಾರಕ್ಕೆ ಹಲವಾರು ಬಾರಿ ಕೃಷಿ ಸಚಿವರ ಭೇಟಿ ಮಾಡಿದಾಗ ಮನವರಿಕೆ ಮಾಡಿದ್ದೆ. ಆದ್ದರಿಂದ ಸರ್ಕಾರ ಎಪಿಎಂಸಿ ಮಾರುಕಟ್ಟೆಗೆ ಅನುಮತಿ ನೀಡಿದ್ದು, ಮೂರು ರಾಜ್ಯಗಳು ಸಂಗಮವಾಗುವ ಜಾಗದಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪನೆ ಮಾಡುತ್ತಿದ್ದು, ಇದರಿಂದ ಸಾವಿರಾರು ರೈತರಿಗೆ ಅನುಕೂಲವಾಗಲಿದೆ.

- ರೂಪಕಲಾ ಶಶಿಧರ್, ಶಾಸಕಿ.

-------------------

ಕದಿರಗಾನಕುಪ್ಪದ ಬಳಿ ೨೫ ಎಕರೆ ಪ್ರದೇಶದಲ್ಲಿ ಎಪಿಎಂಸಿ ಮಾರುಕಟ್ಟೆಗೆ ಮೊದಲನೇ ಹಂತದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುತ್ತಿರುವ ಶಾಸಕಿ ರೂಪಕಲಾ ಶಶಿಧರ್.