ಕೆರೆತೊಣ್ಣೂರಿನಲ್ಲಿ ಭಕ್ತರು ತಂಗಲು ಹೈಟೆಕ್ ತಾತ್ಕಾಲಿಕ ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ

| Published : Dec 15 2024, 02:00 AM IST

ಕೆರೆತೊಣ್ಣೂರಿನಲ್ಲಿ ಭಕ್ತರು ತಂಗಲು ಹೈಟೆಕ್ ತಾತ್ಕಾಲಿಕ ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್, ಟ್ಯಾಬ್ ಹಾಗೂ ಕಂಪ್ಯೂಟರ್, ಟ್ರಾಕ್ ಶೂಟ್ ಗಳನ್ನು ನೀಡುವ ಜೊತೆಗೆ ಪರಿಣಿತ ಇಂಗ್ಲಿಷ್ ಬಲ್ಲ ತಜ್ಞರಿಂದ ಸುತ್ತಲಿನ ಸರ್ಕಾರಿ ಶಾಲಾ ಮಕ್ಕಳಿಗೆ ಆನ್ ಲೈನ್ ಇಂಗ್ಲಿಷ್ ಕಲಿಕಾ ತರಬೇತಿ ಕಲಿಸುವ ಮೂಲಕ ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಕಲಿಕೆಗೆ ಪ್ರೋತ್ಸಾಹಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಕೆರೆತೊಣ್ಣೂರಿನ ಜೀಯರ್ ಅವರ ಶಾಖಾ ಮಠದ ಆವರಣದಲ್ಲಿ ಭಕ್ತಾದಿಗಳು ತಂಗಲು ಎರಡು ಹೈಟೆಕ್ ತಾತ್ಕಾಲಿಕ ಮನೆಗಳ ನಿರ್ಮಾಣಕ್ಕೆ ಜೀಯರ್ ಮಹಾ ಸ್ವಾಮೀಜಿ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.

ಈ ವೇಳೆ ಸುತ್ತಲಿನ ಗ್ರಾಮಗಳ ವಿಶೇಷ ಚೇತನರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಮಠದ ಭಕ್ತಾದಿಗಳಾದ ಭಗವಾನ್ ಅವರ ನೇತೃತ್ವದ ಸಂಸ್ಥೆಯಿಂದ ಗಾಲಿ ಚಕ್ರ, ಊರುಗೋಲು, ಶೌಚಾಲಯದ ಸಾಧನ (ಕಮೋಡ್), ವಾಕರ್, ನಿದ್ರಿಸಲು ಅನುಕೂಲವಾಗುವ ಹಾಸಿಗೆ ಸೇರಿದಂತೆ ಇತರೆ ಸಾಧನ ಶೇಖರಿಸಿರುವ ಕೊಠಡಿ ಉದ್ಘಾಟಿಸಲಾಯಿತು.

ಬಳಿಕ ರಾಮಾನುಜ ಭಕ್ತನಂದ ಪ್ರತಿಮೆ ಬಳಿ ಸುಂದರ ಸಸ್ಯ ಅಲಂಕಾರಿಕ‌ ಹೂಗಿಡಗಳು ಮತ್ತು ಔಷಧಿಯ ಗಿಡಗಳು ಹಾಗೂ ಪವಿತ್ರ ಗಿಡಗಳ ಸಸ್ಯಕಾಶಿಯನ್ನು ಪಾರಿಜಾತ ಗಿಡ ನೆಡುವ ಮೂಲಕ ಜೀಯರ್ ನೇತೃತ್ವದಲ್ಲಿ ‌ಚಾಲನೆ ನೀಡಲಾಯಿತು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀಜೀಯರ್ ಮಹಾ ಸ್ವಾಮೀಜಿ ಮಾತನಾಡಿ, ರಾಮಾನುಜರ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಮಾಜದ ಮುನ್ನೆಲೆಗೆ ಬರಬೇಕೆಂಬ ಅಭಿಲಾಷೆಯಂತೆ ಪ್ರಸ್ತುತ ಶ್ರೀಮಠವು ಭಕ್ತಾದಿಗಳ ನೆರವಿನಿಂದ ಹಲವು ವರ್ಷಗಳಿಂದ ಗ್ರಾಮೀಣ ಪ್ರದೇಶದ ಆಯ್ದ ಹಳ್ಳಿಗಳ ಹಿರಿಯ ಚೇತನಗಳಿಗೆ ಅವರ ಜೀವನಕ್ಕೆ ಪ್ರತಿ ತಿಂಗಳು ಪ್ರೋತ್ಸಾಹ ಧನ ನೀಡುತ್ತಿದೆ ಎಂದರು.

ಶಾಲಾ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್, ಟ್ಯಾಬ್ ಹಾಗೂ ಕಂಪ್ಯೂಟರ್, ಟ್ರಾಕ್ ಶೂಟ್ ಗಳನ್ನು ನೀಡುವ ಜೊತೆಗೆ ಪರಿಣಿತ ಇಂಗ್ಲಿಷ್ ಬಲ್ಲ ತಜ್ಞರಿಂದ ಸುತ್ತಲಿನ ಸರ್ಕಾರಿ ಶಾಲಾ ಮಕ್ಕಳಿಗೆ ಆನ್ ಲೈನ್ ಇಂಗ್ಲಿಷ್ ಕಲಿಕಾ ತರಬೇತಿ ಕಲಿಸುವ ಮೂಲಕ ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಕಲಿಕೆಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಎಸ್ಸೆಸ್ಸೆಲ್ಸಿ ತೇರ್ಗಡೆ ಹೊಂದಿದ ಬಳಿಕ ಅವರ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಮಠದಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ತಾಲೂಕಿನ ಕೆರೆತೊಣ್ಣೂರಿನ ಶ್ರೀಯಧುಗಿರಿ ನಾರಾಯಣ ಯತಿರಾಜ್ ಜೀಯರ್ ಅವರ ಆಶಯದಂತೆ ಶ್ರೀರಾಮಾನುಜ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ ಸುತ್ತಲಿನ ಗ್ರಾಮಗಳಿಗೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗುತ್ತಿದೆ ಎಂದರು.

ಕೆರೆತೊಣ್ಣೂರಿಗೆ ಬರುವ ಪ್ರವಾಸಿಗರಿಗೆ ರಾಮಾನುಜರ ಭವ್ಯ ದಿವ್ಯ ದರ್ಶನ ರಾತ್ರಿ ವೇಳೆಯೂ ಕಾಣುವಂತೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿ ಬಣ್ಣದ ಕಾರಂಜಿ ನಿರ್ಮಿಸಲಾಗಿದೆ ಎಂದು ಹೇಳಿದರು.

ಹೈಟೆಕ್ ಶಾಲೆಯಾಗಿ ಪರಿವರ್ತನೆ:

ಕೆರೆತೊಣ್ಣೂರಿನ ಸರ್ಕಾರಿ ಶಾಲೆಯನ್ನು ಯೂನಿಯನ್ ಬ್ಯಾಂಕ್ ಸಹಯೋಗದೊಂದಿಗೆ ಹೈಟೆಕ್ ಶಾಲೆಯನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ಸರ್ಕಾರಿ ಶಾಲೆ ಚಿತ್ರಣವೇ ಬದಲಾಗುವ ಜೊತೆಗೆ ಪೋಷಕರು ಮಕ್ಕಳನ್ನು ಸೇರಿಸುವ ಮನೋಭಾವನೆ ಬೆಳೆಯಲಿದೆ ಎಂದರು.

ಇದೇ ವೇಳೆ ಶಾಲಾ ಮಕ್ಕಳು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಮಾತನಾಡುವ ಮೂಲಕ ತಮ್ಮ ವಾಕ್ ಚಾತುರ್ಯವನ್ನು ಹೊರಹಾಕಿದರು. ಆಯ್ದ ವ್ಯಕ್ತಿಗಳಿಗೆ ಉಚಿತವಾಗಿ ಚಾರ್ಚಬಲ್ ಟಾರ್ಚ್ ಹಾಗೂ ಹೊದಿಕೆಗಳನ್ನು ಮತ್ತು ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಕ್ರಿಕೆಟ್, ಪುಟ್ಬಾಲ್ ಸೆಟ್ ಸೇರಿದಂತೆ ಆಟಿಕೆ ಸಾಮಾಗ್ರಿಗಳನ್ನು ನೀಡಿ ಆಶೀರ್ವದಿಸಿದರು.

ಈ ವೇಳೆ ಶ್ರೀರಾಮಾನುಜ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಭಗವಾನ್, ಪುಷ್ಪ ತಜ್ಞ ಗೋಕುಲ್ ಅಯ್ಯಂಗಾರ್, ಶ್ರೀನಿವಾಸನ್, ಕಾವೇರಿ ನೀರಾವರಿ ನಿಗಮದ ಎಚ್ ಎಲ್ ಬಿಸಿ ವಿಭಾಗದ ಕಾರ್ಯಪಾಲಕ ಇಂಜನಿಯರ್ ಸಿ.ಎಂ.ಶ್ರೀನಾಥ್, ಎಂಜಿನಿಯರ್ ರಾಘವೇಂದ್ರ, ಯೂನಿಯನ್ ಬ್ಯಾಂಕ್ ನ ನಂದೀಶ್, ಟಿ.ಎಸ್.ಛತ್ರ ಗ್ರಾಪಂ ಸಿದ್ದಯ್ಯ ಶೆಟ್ಟಿ, ರೈಲ್ವೆ ಇಲಾಖೆ ರವಿ, ಡಾ.ರಘುನಂದನ್, ರಾಜೇಂದ್ರ ರಾಣೆ, ಜನಾರ್ದನರೆಡ್ಡಿ, ಶ್ರೀವಸ್ತ, ರಂಗಣ್ಣ, ಸಂಪತ್, ಎಂಜನಿಯರ್ ಎಂ.ರಾಜೀವ್, ರೋಟರಿ ಕ್ಲಬ್ ಬೆಂಗಳೂರು ಕಂಟೋನ್ಮೆಂಟ್ ಹಾಗೂ ಆರ್ಟ್ಮ ಫೌಂಡೇಶನ್ ಪದಾಧಿಕಾರಿಗಳು ಸೇರಿದಂತೆ ಇತರರಿದ್ದರು.