ಸುಳೇಭಾವಿ ಮಹಾಲಕ್ಷ್ಮೀ ದೇವಿಯ ಮಹಾದ್ವಾರ ನಿರ್ಮಾಣಕ್ಕೆ ಭೂಮಿಪೂಜೆ

| Published : Jun 25 2024, 12:50 AM IST

ಸುಳೇಭಾವಿ ಮಹಾಲಕ್ಷ್ಮೀ ದೇವಿಯ ಮಹಾದ್ವಾರ ನಿರ್ಮಾಣಕ್ಕೆ ಭೂಮಿಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿ ತಾಲೂಕಿನ ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿಯ ಮಹಾದ್ವಾರ ನಿರ್ಮಾಣಕ್ಕೆ ಬೆಳಗಾವಿ-ಗೋಕಾಕ ರಾಜ್ಯ ಹೆದ್ದಾರಿಯ ಖನಗಾಂವ ಬಿ.ಕೆ. ಗ್ರಾಮದ ಸುಳೇಭಾವಿ ಕ್ರಾಸ್‌ನಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ತಾಲೂಕಿನ ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿಯ ಮಹಾದ್ವಾರ ನಿರ್ಮಾಣಕ್ಕೆ ಬೆಳಗಾವಿ-ಗೋಕಾಕ ರಾಜ್ಯ ಹೆದ್ದಾರಿಯ ಖನಗಾಂವ ಬಿ.ಕೆ. ಗ್ರಾಮದ ಸುಳೇಭಾವಿ ಕ್ರಾಸ್‌ನಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.

ದೇವಿಯ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ವತಿಯಿಂದ ನಿರ್ಮಾಣವಾಗುತ್ತಿರುವ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಮಹಾದ್ವಾರ ನಿರ್ಮಾಣಕ್ಕೆ ಟ್ರಸ್ಟ್ ಅಧ್ಯಕ್ಷರು, ಸದಸ್ಯರು ಹಾಗೂ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಅರ್ಚಕರು, ಶ್ರೀ ಕಲ್ಮೇಶ್ವರ ದೇವಸ್ಥಾನದ ಅರ್ಚಕರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಭೂಮಿಪೂಜೆ ನೆರವೇರಿಸಿ ಮಾತನಾಡಿದ ಟ್ರಸ್ಟ್ ಚೇರಮನ್ ದೇವಣ್ಣ ಬಂಗೇನ್ನವರ, ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜಾಗೃತ ತಾಣವಾಗಿದ್ದು, ದೇವಿಯ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ದಿನೇದಿನೇ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. 2025 ಮಾರ್ಚ್ ನಲ್ಲಿ ನಡೆಯುವ ಜಾತ್ರೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಈ ಮಹಾದ್ವಾರ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸುಳೇಭಾವಿ ಗ್ರಾಮಕ್ಕೆ ಆಗಮಿಸಲು ಅನೇಕ ರಸ್ತೆ ಸಂಪರ್ಕಗಳಿದ್ದು, ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯಿಂದ ಸುಳೇಭಾವಿಗೆ ಭಕ್ತರು ಬರುತ್ತಾರೆ. ಅದೇ ರೀತಿ ಬೆಳಗಾವಿ-ಗೋಕಾಕ ರಾಜ್ಯ ಹೆದ್ದಾರಿಯಿಂದಲೂ ಭಕ್ತರು ಬರುತ್ತಾರೆ. ಈ ರಸ್ತೆ ಮಾರ್ಗದ ಖನಗಾಂವ ಬಿ.ಕೆ. ಗ್ರಾಮದ ಬಳಿ ಭಕ್ತರು ನೇರವಾಗಿ ದೇವಸ್ಥಾನಕ್ಕೆ ಬರಲು ಅನುಕೂಲ ಆಗಲಿ ಎಂಬ ಕಾರಣಕ್ಕೆ ಮಹಾದ್ವಾರ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಮಹಾದ್ವಾರ ನಿರ್ಮಾಣ ವೇಳೆ ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಪಕ್ಕದಲ್ಲಿಯೇ ತಾತ್ಕಾಲಿಕವಾಗಿ ಮಣ್ಣಿನ ರಸ್ತೆ ನಿರ್ಮಿಸಲಾಗುತ್ತಿದೆ. ಈ ಮೂಲಕ ವಾಹನ ಸವಾರರು ಈ ಮಾರ್ಗವನ್ನು ಬಳಸಬಹುದಾಗಿದೆ ಎಂದು ತಿಳಿಸಿದರು.

ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರೆ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುತ್ತದೆ. 2025 ಮಾರ್ಚನಲ್ಲಿ ನಡೆಯುವ ಜಾತ್ರೆಗೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಜಾತ್ರೆ 9 ದಿನಗಳ ಕಾಲ ಸಂಪ್ರದಾಯ, ವಿಧಿವಿಧಾನಗಳಂತೆ ನೆರವೇರುತ್ತದೆ. ಭಕ್ತರಿಗೆ ಸಕಲ ಸೌಕರ್ಯಗಳನ್ನು ಒದಗಿಸಲು ಈಗಾಗಲೇ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀಣೋದ್ಧಾರ ಟ್ರಸ್ಟ್ ಕಮಿಟಿ ಸದಸ್ಯರು, ಅರ್ಚಕರು, ಗ್ರಾಮದ ಹಿರಿಯರು, ಸುಳೇಭಾವಿ, ಖನಗಾಂವ ಬಿ.ಕೆ., ಚಂದೂರ ಹಾಗೂ ಯದ್ದಲಬಾವಿಹಟ್ಟಿ ಗ್ರಾಮಸ್ಥರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.