ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಪರಿಶಿಷ್ಟ ಪಂಗಡ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ಕಾಮಗಾರಿ ಆರಂಭಕ್ಕೆ ಕುಟ್ಟದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು. ಭೂಮಿ ಪೂಜೆಯನ್ನು ನೆರವೇರಿಸಿ ಶುಭ ಕೋರಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಮಾತನಾಡಿ, ಈ ಭಾಗದಲ್ಲಿ ಶತಮಾನಗಳಿಂದ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ನೂರಾರು ಕುಟುಂಬಗಳಿವೆ. ಇಲ್ಲಿಯ ಮಕ್ಕಳ ಉತ್ತಮ ವಿದ್ಯಾಭ್ಯಾಸ ಹಾಗೂ ಆಧುನಿಕ ಸೌಲಭ್ಯಗಳೊಂದಿಗೆ ಉತ್ತಮ ವ್ಯಾಸಂಗ ಮಾಡಲು ಸರ್ಕಾರ ಅನೇಕ ಸವಲತ್ತುಗಳನ್ನು ಕಲ್ಪಿಸುತ್ತಿದೆ. ಇದರ ಸದುಪಯೋಗವನ್ನು ಸಮಾಜದ ಬಾಂಧವರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಈ ಕಾಮಗಾರಿಗೆ 1 ಕೋಟಿ 56 ಲಕ್ಷ ರು. ಅನುದಾನ ಒದಗಿ ಬಂದಿದ್ದು ಇದರಿಂದ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ಹಿರಿಯರಾದ ಪೆಮ್ಮಂಡ ಪೊನ್ನಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಕುಟ್ಟ ವಲಯ ಅಧ್ಯಕ್ಷ ರಾಮಕೃಷ್ಣ, ಮಾಜಿ ಪಂಚಾಯಿತಿ ಸದಸ್ಯರು ಹಾಗೂ ಮಾಜಿ ವಲಯ ಅಧ್ಯಕ್ಷರಾದ ಮುಕ್ಕಾಟೀರ ನವೀನ್ ಅಯ್ಯಪ್ಪ, ಯುವ ಕಾಂಗ್ರೆಸ್ ನ ಫಾರ್ದಿನ್, ಕೆ. ಬಾಡಗ ವಲಯ ಅಧ್ಯಕ್ಷ ಚಿಮ್ಮಣಮಾಡ ರವಿ, ನಾಲ್ಕೇರಿ ವಲಯ ಅಧ್ಯಕ್ಷ ತೀತಿರ ಕಟ್ಟಿ ಕಾರ್ಯಪ್ಪ, ಅಣ್ಣಳಮಾಡ ಹರೀಶ್ ಪೂವಯ್ಯ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ರಶೀದ್, ಕುಂಡಚ್ಚಿರ ಮಂಜು ದೇವಯ್ಯ, ಮನು, ಐಟಿಡಿಪಿ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.