ಶೀಘ್ರದಲ್ಲೆ ಹೊಸ ಕಟ್ಟಡಕ್ಕೆ ಭೂಮಿಪೂಜೆ: ಎಚ್.ಜೆ.ಪುರುಷೋತ್ತಮ್

| Published : Sep 18 2024, 01:55 AM IST

ಸಾರಾಂಶ

ಗ್ರಾಹಕರ ಅನುಕೂಲಕ್ಕಾಗಿ ಪಟ್ಟಣದ ಡೂಮ್ ಲೈಟ್ ವೃತ್ತದ ಬಳಿ ಅತಿ ಶೀಘ್ರದಲ್ಲೇ ಒಂದು ಕೋಟಿ ರು. ವೆಚ್ಚದಲ್ಲಿ ಕೋ ಆಪರೇಟಿವ್ ಸೊಸೈಟಿ ನೂತನ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ದಿ ಭಾರತ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಎಚ್.ಜೆ.ಪುರುಷೋತ್ತಮ್ ಹೇಳಿದರು. ಮಾಗಡಿಯಲ್ಲಿ ಭಾರತ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ 2023-24ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

ವಾರ್ಷಿಕ ಸಭೆ । ಭಾರತ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ 2023-24ನೇ ಸಾಲಿನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮಾಗಡಿ

ಗ್ರಾಹಕರ ಅನುಕೂಲಕ್ಕಾಗಿ ಪಟ್ಟಣದ ಡೂಮ್ ಲೈಟ್ ವೃತ್ತದ ಬಳಿ ಅತಿ ಶೀಘ್ರದಲ್ಲೇ ಒಂದು ಕೋಟಿ ರು. ವೆಚ್ಚದಲ್ಲಿ ಕೋ ಆಪರೇಟಿವ್ ಸೊಸೈಟಿ ನೂತನ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ದಿ ಭಾರತ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಎಚ್.ಜೆ.ಪುರುಷೋತ್ತಮ್ ಹೇಳಿದರು.

ಪಟ್ಟಣದ ಕೆಂಪೇಗೌಡ ಶಾಲಾ ಆವರಣದಲ್ಲಿ ದಿ ಭಾರತ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ 2023-24ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ದಿ. ಬಿ.ಎಲ್.ಲಕ್ಕೇಗೌಡ ಸ್ಥಾಪಿಸಿರುವ ಕ್ರೆಡಿಟ್ ಸೊಸೈಟಿ ಉತ್ತಮವಾಗಿ ನಡೆಯುತ್ತಿದ್ದು 2023- 24ನೇ ಸಾಲಿನಲ್ಲಿ 17.50 ಲಕ್ಷ ರು. ನಿವ್ವಳ ಲಾಭ ಬಂದಿದೆ.ಒಟ್ಟು 6106 ಜನ ಸದಸ್ಯರನ್ನು ಹೊಂದಿದೆ ಎಂದರು.

ಹಿರಿಯ ನಾಗರಿಕರ ಠೇವಣಿ ಮೇಲೆ ಶೇ. ಒಂದು ಬಡ್ಡಿ ಹೆಚ್ಚಿಸಲಾಗುತ್ತಿದ್ದು ನಮ್ಮಲ್ಲಿ ಕಟ್ಟಡ ನಿರ್ಮಾಣ ಸಾಲ, ಜಮೀನು ಸಾಲ, ವಾಹನ ಸಾಲ, ಠೇವಣಿ ಸಾಲ, ಚಿನ್ನಾಭರಣ ಸಾಲ ಸೇರಿದಂತೆ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿದ್ದು ವಾಣಿಜ್ಯ ಬ್ಯಾಂಕ್‌ಗಳ ರೀತಿಯಲ್ಲೇ ವಹಿವಾಟು ನಡೆಸುತ್ತಿದೆ. ಸೊಸೈಟಿ ನಡೆಯುತ್ತಿದ್ದು ಪ್ರತಿಭಾ ಪುರಸ್ಕಾರ ನೆರವೇರಿಸುತ್ತಿದೆ. ಸದಸ್ಯರೆಲ್ಲರ ಒತ್ತಾಯದ ಮೇರೆಗೆ ಸಾವನಪ್ಪಿದ್ದ ಸದಸ್ಯರಿಗೆ 3 ಸಾವಿರ ರು. ನೀಡಲು ತೀರ್ಮಾನಿಸಲಾಗಿದ್ದು ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಬಡ್ಡಿ ದರ ಕಡಿಮೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಕ್ರೆಡಿಟ್ ಸೊಸೈಟಿ ಕಾರ್ಯದರ್ಶಿ ಟಿ.ಜಯರಾಂ ಮಾತನಾಡಿ, ಹೊಸದಾಗಿ ಆರ್‌ಟಿಜಿಎಸ್ ಮೂಲಕ ಸದಸ್ಯರ ಖಾತೆಗೆ ಹಣ ನೇರವಾಗಿ ವರ್ಗಾವಣೆ ಮಾಡಲು ವ್ಯವಸ್ಥೆ ಮಾಡುತ್ತಿದ್ದು ಹೊಸ ಬೈಲಾ ತಿದ್ದುಪಡಿ ಮಾಡಿಕೊಂಡಿದ್ದು ಒಂದು ಲಕ್ಷದಿಂದ ಎರಡು ಲಕ್ಷ ರು.ವರೆಗೆ ಮಧ್ಯಮಾವಧಿ ಸಾಲ ಮಂಜೂರಾತಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದ್ದು ಸದಸ್ಯರ ಕೋರಿಕೆ ಮೇರೆಗೆ ಕಟ್ಟಡ ನಿರ್ಮಾಣ ಸಾಲವನ್ನು 25 ಲಕ್ಷದಿಂದ 50 ಲಕ್ಷ ರು.ವರೆಗೆ ವಾಣಿಜ್ಯ ಉದ್ದೇಶಕ್ಕೆ ಮಾತ್ರ ಹೆಚ್ಚುವರಿ ಮಾಡಲು ತೀರ್ಮಾನಿಸಲಾಗಿದೆ. ಚಿನ್ನಾಭರಣ ಸಾಲದ ಬಡ್ಡಿ ದರವನ್ನು ಶೇ.14 ರಿಂದ 12ಕ್ಕೆ ಇಳಿಸಲು ತೀರ್ಮಾನಿಸಲಾಗಿದ್ದು ಸೊಸೈಟಿಯ ವ್ಯವಹಾರವನ್ನು ಪೂರ್ಣ ಪ್ರಮಾಣದಲ್ಲಿ ಕಂಪ್ಯೂಟರ್ ರೈಸ್ ಮಾಡಲಾಗಿದ್ದು ಕಳೆದ ಎರಡು ವರ್ಷಗಳಿಂದ ಸೊಸೈಟಿಯು ಸಾಲ ವಸೂಲಿ ಕಾರ್ಯಕ್ರಮವನ್ನು ಚುರುಕುಗೊಳಿಸಿ ಲಾಭವೂ ಹೆಚ್ಚುವರಿಯಾಗಿ ಬರುವಂತೆ ಮಾಡಲಾಗಿದೆ. ಸೊಸೈಟಿಯು ಉನ್ನತ ಮಟ್ಟಕ್ಕೇರಿಸಲು ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ಸೊಸೈಟಿಯ ಷೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸೊಸೈಟಿ ಉಪಾಧ್ಯಕ್ಷ ಜಿ.ಸಿ.ನಾಗರಾಜು, ನಿರ್ದೇಶಕರಾದ ಶ್ರೀನಿವಾಸಯ್ಯ, ಸಿಬೇಗೌಡ, ಬಿ.ಎನ್.ಕೋಟಪ್ಪ, ಎಚ್.ಆರ್.ರಮೇಶ್, ಕೆ.ಕಿರಣ್ ಕುಮಾರ್, ಎಚ್.ಜಿ.ವೆಂಕಟೇಶ್ ಮೂರ್ತಿ, ಎಸ್.ಶಾಂತಕುಮಾರ್, ಟಿ.ಕೆ.ರಾಮು, ಪಿ.ಎನ್.ಯತೀಶ್, ಪ್ರೇಮಾ, ಜಯಮ್ಮ, ಎಚ್.ವಿ.ಶ್ರುತಿ ಸೇರಿ ಬ್ಯಾಂಕ್ ನ ಸಿಬ್ಬಂದಿ ಭಾಗವಹಿಸಿದ್ದರು.