ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಕಳೆದ ಹಲವು ವರ್ಷಗಳಿಂದಲೂ ಬಾಡಿಗೆ ಮಹದೇಶ್ವರಪುರದ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಸೇರಿದ್ದ ಕಟ್ಟಡದಲ್ಲಿ ನಡೆಯುತ್ತಿದೆ. ಈ ಕಟ್ಟಡದಲ್ಲಿ ವಿದ್ಯಾರ್ಥಿಗಳು ಮೂಲ ಸೌಕರ್ಯಗಳ ಕೊರತೆ ಇದ್ದ ಕಾರಣ ಸ್ವಂತಕ್ಕೆ ಎಲ್ಲರ ಸಹಕಾರದಿಂದ 22 ಕೋಟಿ ರು. ಅನುದಾನ ಬಿಡುಗಡೆ ಮಾಡಿಸಿ ಭೂಮಿಪೂಜೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ 22 ಕೋಟಿ ರು. ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುರುವಾರ ಭೂಮಿಪೂಜೆ ನೇರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಕಳೆದ ಹಲವು ವರ್ಷಗಳಿಂದಲೂ ಬಾಡಿಗೆ ಮಹದೇಶ್ವರಪುರದ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಸೇರಿದ್ದ ಕಟ್ಟಡದಲ್ಲಿ ನಡೆಯುತ್ತಿದೆ. ಈ ಕಟ್ಟಡದಲ್ಲಿ ವಿದ್ಯಾರ್ಥಿಗಳು ಮೂಲ ಸೌಕರ್ಯಗಳ ಕೊರತೆ ಇದ್ದ ಕಾರಣ ಸ್ವಂತಕ್ಕೆ ಎಲ್ಲರ ಸಹಕಾರದಿಂದ 22 ಕೋಟಿ ರು. ಅನುದಾನ ಬಿಡುಗಡೆ ಮಾಡಿಸಿ ಭೂಮಿಪೂಜೆ ಮಾಡಲಾಗಿದೆ ಎಂದರು.

ಉತ್ತಮ ಗುಣಮಟ್ಟದ ಕಟ್ಟಡವನ್ನು ಒಂದು ವರ್ಷದ ಅವಧಿಯಲ್ಲಿ ನಿರ್ಮಿಸಲು ಗುತ್ತಿಗೆದಾರನಿಗೆ ಸೂಚಿಸಲಾಗಿದೆ. ಮುಂದಿನ ವರ್ಷ ಅಂಬೇಡ್ಕರ್ ಜಯಂತಿಯಂದು ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ವಸತಿ ಶಾಲೆ ಉದ್ಘಾಟಿಸಲಾಗುವುದು ಎಂದು ಭರವಸೆ ನೀಡಿದರು.

ವಸತಿ ಶಾಲೆ ಶಿಕ್ಷಣ ಸಂಸ್ಥೆಗಳ ಸಂಘದ ನಿರ್ದೇಶಕ ಎಸ್.ನಿಂಗರಾಜು ಮಾತನಾಡಿ, 2016-17ರಲ್ಲಿ ಪ್ರಾರಂಭವಾದ ಈ ವಸತಿ ಶಾಲೆ ಅಂದಿನಿಂದಲೂ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದೆ. ಶಾಸಕರ ಪ್ರಯತ್ನದಿಂದ ನೂತನ ಕಟ್ಟಡ ಕಾಮಗಾರಿಗೆ ಪೂಜೆ ನೆರವೇರಿಸಲಾಗಿದೆ ಎಂದರು.

ಐದು ಎಕರೆ ವಿಸ್ತೀರ್ಣವಿರುವ ಜಾಗದಲ್ಲಿ ಆರು ಕಟ್ಟಡ ನಿರ್ಮಿಸಲಾಗುತ್ತಿದೆ. ಇದರಲ್ಲಿ ಪ್ರತಿಯೊಂದು ಶಾಲಾ ಸಂಕೀರ್ಣ, ಗಣಕ ಯಂತ್ರ ಕೊಠಡಿ, ಪ್ರಾಂಶುಪಾಲರ ಕೊಠಡಿ, ಸಿಬ್ಬಂದಿ ಕೊಠಡಿ, ಅಡುಗೆ ಮನೆ, ಸಂಗ್ರಾಹಲಯ, ರಂಗಮಂದಿರ ಸೇರಿದಂತೆ ಅಗತ್ಯ ಎಲ್ಲಾ ರೀತಿಯ ಸೌಕರ್ಯಗಳು ಇರಲಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಎಲ್ಲಾ ವಸತಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದರು. ಇದೇ ವೇಳೆ ವಸತಿ ಶಾಲೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 18 ವಿದ್ಯಾರ್ಥಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ರೈತಸಂಘ ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ಬಿಜೆಪಿ ಅಧ್ಯಕ್ಷ ಧನಂಜಯ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಜೆ.ಕೋಮಲ, ಚಂದ್ರಶೇಖರ್, ರವಿಕುಮಾರ್, ರತ್ನ, ಗುತ್ತಿಗೆದಾರರಾದ ನಾಗೇಶ್, ಮೆಡಿಕಲ್ ವಿಶ್ವನಾಥ್, ಕೇಶವಮೂರ್ತಿ, ಪ್ರಾಂಶುಪಾಲ ಪ್ರಕಾಶ್, ದೇವಸ್ಥಾನದ ಸಮಿತಿ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ಚಂದ್ರಶೇಖರ್, ಸೊಸೈಟಿ ಅಧ್ಯಕ್ಷ ರವಿಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಹಾಳಯ್ಯ, ದಸಂಸ ಮುಖಂಡರಾದ ಶ್ರೀಮೂರ್ತಿ, ಕಣಿವೆರಾಮು, ಎಂ.ವಿ.ಕೃಷ್ಣ, ಅಂಕಯ್ಯ, ಎಂಜಿನಿಯರ್ ಲಿಂಗರಾಜು ಸೇರಿದಂತೆ ಹಲವರು ಇದ್ದರು.