ಸಾರಾಂಶ
ಭೂಮಿಕಾ ಹಾರಾಡಿ ಸಂಸ್ಥೆಯ 10ನೇ ವರ್ಷದ ನಾಟಕೋತ್ಸವ ‘ಬಣ್ಣ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ರಂಗ ಗೌರವ ಸಮರ್ಪಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಇಲ್ಲಿನ ಎಸ್.ಎಂ.ಎಸ್. ಶಿಕ್ಷಣ ಸಂಸ್ಥೆಯ ಮಕ್ಕಳ ಮಂಟಪದಲ್ಲಿ ಮಂಗಳವಾರ ಸಾಂಸ್ಕೃತಿಕ ಸಂಘಟನೆ ಭೂಮಿಕಾ ಹಾರಾಡಿ ಸಂಸ್ಥೆಯ 10ನೇ ವರ್ಷದ ನಾಟಕೋತ್ಸವ ‘ಬಣ್ಣ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ರಂಗ ಗೌರವ ಸಮರ್ಪಣೆ ನಡೆಯಿತು.ಈ ಸಂದರ್ಭ ಮಾತನಾಡಿದ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಸಮಾಜದ ಕರ್ತವ್ಯವಾಗಬೇಕು ಎಂದರು.
ಕಳೆದ 6 ವರ್ಷಗಳಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷನಾಗಿ ನಾಡಿನಾದ್ಯಂತ ೨೭ಕ್ಕೂ ಅಧಿಕ ಜಾನಪದ ವೈಭವ ಕಾರ್ಯಕ್ರಮಗಳನ್ನು ನಡೆಸಿದ್ದೇನೆ. ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ೬೦ನೇ ವರ್ಷದಲ್ಲಿ ಯಕ್ಷಗಾನವನ್ನು ಕಲಿತು ೪೦೦ಕ್ಕೂ ಅಧಿಕ ಬಾರಿ ಪಾತ್ರಗಳನ್ನು ನಿರ್ವಹಿಸಿದ ತೃಪ್ತಿ ನನಗಿದೆ. ಅಲ್ಲದೆ ರಾಜಾಂಗಣದಲ್ಲಿ ಚಿಟ್ಟಾಣಿ, ಧಾರೇಶ್ವರ, ಗೋವಿಂದ ಭಟ್ಟ, ಸಾಮಗ ಮೊದಲಾದ ಮೇರು ಕಲಾವಿದರ ಸಪ್ತಾಹಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದಲ್ಲದೆ ಸಾಧಕ ಯಕ್ಷಗಾನ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವ ನನ್ನ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮೂಲಕ ನಡೆಸಿದ್ದೇನೆ ಎಂದ ಅವರು, ಕಲೆ ನನ್ನನ್ನು ಒಪ್ಪಿಕೊಂಡು ನಾನು ಕಲೆಯನ್ನು ಅಪ್ಪಿಕೊಂಡು ಮುನ್ನಡೆಯುವ ಈ ಪಯಣದಲ್ಲಿ ಕಲಾಭಿಮಾನಿಗಳಿಂದ ನಾನು ಮಾಡಿದ ಉತ್ತಮ ಕಾರ್ಯಗಳಿಗೆ ಉತ್ತರ ರೂಪದಲ್ಲಿ ಸಿಗುತ್ತಿರುವ ಈ ಗೌರವ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಮಾತನಾಡಿ, ಡಾ.ತಲ್ಲೂರು ಅವರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಯಕ್ಷಗಾನ ಕಲೆ ಹಾಗೂ ಕಲಾವಿದರ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಭೂಮಿಕಾ ಹಾರಾಡಿ ಸಂಸ್ಥೆಯ ಸಂಸ್ಥಾಪಕ ಬಿ.ಎಸ್. ರಾಮ್ ಶೆಟ್ಟಿ ಅವರು, ಡಾ.ತಲ್ಲೂರು ಅವರು ರಂಗಭೂಮಿಯ ಬೆಳವಣಿಗೆಗಾಗಿ ಅವರು ನೀಡುತ್ತಿರುವ ಪ್ರೋತ್ಸಾಹ ಮಾದರಿಯಾಗಿದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ರಂಗಕರ್ಮಿಗಳಿಗೂ ಸಮಾಜದಲ್ಲಿ ಒಳ್ಳೆಯ ಗೌರವ ಸಿಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಯುವಜನತೆಯನ್ನು ರಂಗಭೂಮಿ ತನ್ನತ್ತ ಸೆಳೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಕಾಂತಾರ ಖ್ಯಾತಿಯ ಯುವ ಚಿತ್ರನಟ ಪ್ರಮೋದ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಐವನ್ ಸುವಾರಿಸ್ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಭೂಮಿಕಾ ಹಾರಾಡಿ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.