ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸರ್ಕಾರಿ ಹಾಗೂ ರೈತರ ಜಮೀನುಗಳನ್ನು ಕಬಳಿಕೆ ಮಾಡುತ್ತಿರುವ ಖಾಸಗಿ ಸಂಸ್ಥೆಗಳ ಜೊತೆ ಕೆಎಐಡಿಬಿ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂದು ಆರೋಪಿಸಿ ಭೂಮಿ ತಾಯಿ ಹೋರಾಟ ಸಮಿತಿ ಸದಸ್ಯರು ಪ್ರತಿಭಟಿಸಿದರು.ಮೈಸೂರು ಬಳಿಯ ಕೆಐಎಡಿಬಿ ಸಂಸ್ಥೆ ಕಚೇರಿ ಮುಂಭಾಗ ಸಮಿತಿ ಹಿರಿಯ ಹೋರಾಟಗಾರ ಕೆ.ಎಸ್. ನಂಜುಂಡೇಗೌಡ ಹಾಗೂ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ ನೃತೃತ್ವದಲ್ಲ್ಲಿಬೀಚನಕುಪ್ಪೆ ಹಾಗೂ ಹೊಸಉಂಡವಾಡಿ ಗ್ರಾಮದ ನೂರಾರು ಕಾರ್ಯಕರ್ತರು ಆಗಮಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬೀಚನಕುಪ್ಪೆ ಗ್ರಾಮದ ಸರ್ವೇ ನಂ.76ರಲ್ಲಿ 133 ಎಕರೆ ಜಮೀನಲ್ಲಿ ಕೆಲವು ರೈತರಿಗೆ ದರಕಾಸು ಮಾಡಿ ಉಳಿದ ಸರ್ಕಾರಿ ಜಮೀನನ್ನು ಸರ್ಕಾರ ಎಂದು ನಮೂದಿಸಿ ಟೌನ್‌ಶಿಪ್ ಮಾಡಲು ಚೇತನ್ ಪಿ. ತಯಾಲ್ ಎಂಬುವವರ ಹೆಸರಿಗೆ ನಮೂದು ಮಾಡಿ ಪಹಣಿ ಕೂರಿಸಲಾಗಿದೆ. ಜೊತೆಗೆ ಸರ್ಕಾರಿ ಜಮೀನು ಇಲ್ಲದಂತೆ ಒಂದೇ ಸಂಸ್ಥೆಯವರಿಗೆ ಮಾಡಲಾಗಿದೆ ಎಂದು ಆರೋಪಿಸಿದರು.ದರಕಾಸು ಆಗಿರುವ ಪೌತಿಯಾಗಿದ್ದರೂ ಪೌತಿ ಖಾತೆ ಮಾಡಿಸದೆ ಆ ಜಮೀನು ಪಡೆದುಕೊಂಡು ಎಲ್ಲವನ್ನು ಒಬ್ಬರ ಹೆಸರಿಗೆ ನಮೂದಿಸಿ ಭೂ ಕಬಳಿಕೆಗೆ ಸ್ಥಳೀಯ ತಾಲೂಕು ಕಚೇರಿ ಅಧಿಕಾರಿಗಳು ಸಾಮೀಲಾಗಿ ರೈತ ವಿರೋಧಿ ನೀತಿ ಅನುಸರಿಸಿರುವುದು ಕಂಡು ಬಂದಿದೆ ಎಂದು ಹೋರಾಟಗಾರ ಕೆ.ಎಸ್ ನಂಜುಂಡೇಗೌಡ ದೂರಿದರು.
ನೂರಾರು ಎಕರೆ ಹುಲಮನಿ, ಗ್ರಾಮಾಠಾಣ ಜಮೀನು, ಗೋಮಾಳ ಇತರೆ ಸರ್ಕಾರಿ ಜಮೀನನ್ನು ಒಬ್ಬರ ಹೆಸರಿಗೆ ನಮೂದಿಸಿ ಬರ್ಗರಿನ್ ಪ್ರಾಪರ್ಟಿಸ್ ಲಿಮಿಟೆಡ್ ಎಂದು ನಮೂದು ಮಾಡಿದ್ದು, ಇದಕ್ಕೆ ಕೆಐಎಡಿಬಿ ಅಧಿಕಾರಿಗಳು ಸಾಮೀಲಾಗಿರುವುದು ದಾಖಲಾತಿಗಳ ಸಾಕ್ಷಾಧಾರಗಳಿಂದ ಕಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಹಿಂದೆ ಇದ್ದ ಸರ್ಕಾರಿ ಜಮೀನುಗಳನ್ನು ಒಟ್ಟುಗೂಡಿಸಿ, ಭೂ ಕಬಳಿಸಿ ಪರಿವರ್ತನೆ ಮಾಡಿ ಟೌನ್‌ಶಿಪ್ ಹೆಸರಿನಲ್ಲಿ ಸರ್ಕಾರಕ್ಕೆ ಅನ್ಯಾಯವಾಗಿದೆ. ಇದರ ಜೊತೆ ರೈತರಿಗೆ ಸೇರಿದ ಜಮೀನುಗಳನ್ನು ವಶ ಪಡೆದು ಖಾಸಗಿ ಸಂಸ್ಥೆಗೆ ನೀಡಿ ಅವರ ಪರ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕೂಡಲೇ ಜಿಲ್ಲಾಡಳಿತ ದಾಖಲಾತಿಗಳ ಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಿ ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಬೆಳಗೊಳ ಬಿ.ವಿ.ಸುರೇಶ್, ಹುಂಡವಾಡಿ ಮಹದೇವು, ಕೆಆರ್‌ಎಸ್ ವಸಂತ, ಬಲ್ಲೇನಹಳ್ಳಿ ಮಂಜುನಾಥ್, ಮಹದೇವಪುರ ಕೃಷ್ಣ, ಬೆಳಗೊಳ ಸುನೀಲ್, ವಿಶಕಂಠು, ಮಹೇಶ್, ರವಿಲಕ್ಷ್ಮಣ್, ರಾಮಕೃಷ್ಣ, ಗ್ರಾಪಂ ಸದಸ್ಯ ಹರೀಶ್, ಸ್ನೇಕ್‌ದೀಪಕ್, ಗಂಜಾಂ ಮರಿಯಪ್ಪ ಸೇರಿದಂತೆ ಕೆಆರ್‌ಎಸ್, ಹೊಂಗಳ್ಳಿ, ಹುಲಿಕೆರೆ, ಬೀಚನಕುಪ್ಪೆ ಸೇರಿದಂತೆ ಇತರ ಗ್ರಾಮಗಳ ರೈತರು ಭಾಗವಹಿಸಿದ್ದರು.