ಸಾರಾಂಶ
ರಾಘು ಕಾಕರಮಠ
ಅಂಕೋಲಾ: ತನ್ನ ಪತ್ನಿ ಹಾಗೂ ಮಗಳನ್ನು ಯಾರೋ ಮರ್ಡರ್ ಮಾಡಿದ್ದಾರೆ, ಕೂಡಲೆ ಸ್ಥಳಕ್ಕಾಗಮಿಸಿ ಕೊಲೆಗಡುಕರನ್ನು ಬಂಧಿಸುವಂತೆ 112(ಪೊಲೀಸ್ ಸಹಾಯವಾಣಿ)ಕ್ಕೆ ಕರೆ ಮಾಡಿ ಗೋಗೆರೆದಿದ್ದ ವ್ಯಕ್ತಿಯೊಬ್ಬನ ಮಾತು ನಂಬಿ ಸ್ಥಳಕ್ಕೆ ಹೋದ ಪೊಲೀಸರು ಶವದ ಹುಡುಕಾಟ ನಡೆಸಿದ ಕುತೂಹಲಕಾರಿ ಘಟನೆ ಹಿಲ್ಲೂರಿನ ಬಿಲ್ಲನಬೈಲನಲ್ಲಿ ನಡೆದಿದೆ.ಶುಕ್ರವಾರ ಸಂಜೆ 5.30ರ ಸುಮಾರಿಗೆ 112ಕ್ಕೆ ನಾನು ಹಿಲ್ಲೂರಿನ ಬಿಲ್ಲನಬೈಲನ ಮಂಜುನಾಥ ಬೊಮ್ಮಯ್ಯ ನಾಯಕ ಅಂತಾ. ಇಲ್ಲಿ ನನ್ನ ಪತ್ನಿ ಹಾಗೂ ಮಗಳನ್ನು ಯಾರೋ ಭೀಕರವಾಗಿ ಕೊಲೆ ಮಾಡಿ ತೆರಳಿದ್ದಾರೆ. ನನಗೇಕೋ ಹೆದರಿಕೆ ಆಗತಾ ಇದೆ. ಕೂಡಲೆ ಸ್ಥಳಕ್ಕೆ ಬರುವಂತೆ ವಿನಂತಿಸಿ ಪೋನ್ ಕರೆ ಮಾಡಿದ್ದಾನೆ.
ಕರೆ ಸ್ವೀಕರಿಸಿದ ಪಿಎಸ್‌ಐ ಉದ್ದಪ್ಪ ಧರೆಪ್ಪನವರ್, ಎಎಸ್‌ಐ ಲಲಿತಾ ರಜಪೂತ್ ಹಾಗೂ ಸಿಬ್ಬಂದಿ ಪ್ರವೀಣ ಪೂಜಾರ ಮೇಲಧಿಕಾರಿಗಳಿಗೆ ವಿಷಯ ತಿಳಿಸಿ, ಜೀಪನ್ನೇರಿ ತಾಲೂಕು ಕೇಂದ್ರದಿಂದ 37 ಕಿಮೀ ಅಂತರವಿರುವ ಹಿಲ್ಲೂರಿಗೆ ತೆರಳಿದ್ದರು.ಮುಗುಳುನಗುತ್ತಲೆ ನಿಂತಿದ್ದ ಭೂಪ: ಕರೆ ಬಂದ 25 ನಿಮಿಷದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಮಂಜುನಾಥ ಬೊಮ್ಮಯ್ಯ ನಾಯಕ ಅವರ ಮನೆಯ ಸುತ್ತಮುತ್ತ ಶವದ ಹುಡುಕಾಟ ನಡೆಸಿದ್ದರು. ಆದರೆ 15 ನಿಮಿಷ ಕಳೆದರೂ ಶವ ಪತ್ತೆ ಆಗದೆ ಹೋದಾಗ ಅಲ್ಲಿಯೇ ಮುಗುಳುನಗುತ್ತಲೆ ಬಂದ ಕರೆ ಮಾಡಿದ್ದ ಮಂಜುನಾಥ ನಾಯಕ ನಿಮಗೆ ನನ್ನ ಪತ್ನಿ ಹಾಗೂ ಮಗಳ ಶವ ಸಿಕ್ಕಿತೆ ಎಂದು ಪೊಲೀಸರಲ್ಲಿ ಪ್ರಶ್ನಿಸಿದ್ದಾನೆ. ಅದು ಸಿಗಲ್ಲಾ ಬಿಡಿ, ಅವರು ಮುಂದೆ ಕೊಲೆ ಆದರೂ ಆಗಬಹುದು. ನಾನೇ ಮುನ್ನೆಚ್ಚರಿಕೆಯಾಗಿ ಕರೆ ಮಾಡಿದ್ದೆ. ಅವರು ಮನೆಯಲ್ಲಿ ಕಾಣ್ತಾ ಇಲ್ಲ. ಹಾಗಾಗಿ ಸುಳ್ಳು ಕರೆ ಮಾಡಿದ್ದೆ ಎಂದು ಪೊಲೀಸರ ಮುಂದೆ ಹಲ್ಲು ಕಿರಿದು ನಕ್ಕಿದ್ದಾನೆ. ಈತನ ಮಾತು ಕೇಳಿ ಪಿತ್ತ ನೆತ್ತಿಗೆ ಏರಿದ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಮಾನಸಿಕ ಅಸ್ವಸ್ಥ: ಹಿಲ್ಲೂರು ಗ್ರಾಮದಲ್ಲಿ ಕೊಲೆಯಾಗಿದೆ ಎಂದು ವಿಷಯ ತಿಳಿದ ಕೂಡಲೆ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಆದರೆ ಈತನ ಮನೆಯವರು ಆತ ಮಾನಸಿಕ ಅಸ್ವಸ್ಥನಾಗಿ ಕಳೆದೊಂದು ವರ್ಷದಿಂದ ಹೀಗೆ ಮಾಡುತ್ತಿದ್ದಾನೆ. ಈತನ ಕಿರುಕುಳದಿಂದ ಬೇಸತ್ತು ಪತ್ನಿ- ಮಕ್ಕಳು ಬೇರೆಯವರ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈತ ಮಾನಸಿಕ ಅಸ್ವಸ್ಥ ಎಂದು ತಿಳಿದ ಪೊಲೀಸರು ನಿಟ್ಟಿಸಿರು ಬಿಟ್ಟು ಮತ್ತೆ ಅಂಕೋಲಾ ಠಾಣೆಯತ್ತ ಮುಖ ಮಾಡಿದ್ದಾರೆ.ಪೊಲೀಸರಿಗೆ ತಲೆಬಿಸಿ: ಇದೇನಪ್ಪಾ ಡಬಲ್ ಮರ್ಡರ್ ಪ್ರಕರಣವಾಗಿದೆ ಎಂದು ಪೊಲೀಸರು ಪ್ರಾರಂಭದಲ್ಲಿ ತಲೆಬಿಸಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಕಾರವಾರದಿಂದ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಅಂಕೋಲಾಕ್ಕೆ ವಾಹನದಲ್ಲಿ ಆಗಮಿಸುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಇಂತಹ ಪ್ರಕರಣ ನಡೆದಿಲ್ಲ ಎಂದು ಮರುಮಾಹಿತಿ ಅಂಕೋಲಾ ಪೊಲೀಸರಿಂದ ಬಂದ ಕೂಡಲೆ ಬಿಣಗಾದಿಂದ ಶ್ವಾನದಳ, ಬೆರಳಚ್ಚು ತಜ್ಞರ ತಂಡ ವಾಪಸ್ ತೆರಳಿದ್ದಾರೆ ಎಂದು ಗೊತ್ತಾಗಿದೆ. ಸುಳ್ಳು ಮಾಹಿತಿ: ಅಂಕೋಲಾದ ಹಿಲ್ಲೂರಿನಲ್ಲಿ ಡಬಲ್ ಮರ್ಡರ್ ಆಗಿದೆ ಎಂದು ಮಾಹಿತಿ ಬಂದಿತ್ತು. ಈ ಬಗ್ಗೆ ಕೂಡಲೆ ಕಾರ್ಯಪ್ರವೃತ್ತರಾಗಿದ್ದೇವು. ಆದರೆ ಕರೆ ಮಾಡಿದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಆತ ಸುಳ್ಳು ಮಾಹಿತಿಯನ್ನು 112ಕ್ಕೆ ನೀಡಿದ್ದ ಎಂದು ಅಂಕೋಲಾ ಠಾಣೆಯ ಪಿಎಸ್‌ಐ ಉದ್ದಪ್ಪ ಧರೆಪ್ಪನವರ್ ತಿಳಿಸಿದರು.
;Resize=(128,128))
;Resize=(128,128))
;Resize=(128,128))