ಸಾರಾಂಶ
ಧರ್ಮಶ್ರೀ ಕಾದಂಬರಿಯಿಂದ ಹಿಡಿದು ಇತ್ತೀಚಿನ ವರ್ಷಗಳಲ್ಲಿ ಮೂಡಿಬಂದ ಉತ್ತರಕಾಂಡದವರೆಗೆ ಜೀವನದ ವಿವಿಧ ಸ್ತರಗಳ ಕುರಿತು ಚಿಂತನೆ ಮಾಡುವ ಬೃಹತ್ ಕಥಾನಕಗಳನ್ನು ಕೊಡುಗೆಯಾಗಿ ನೀಡಿರುವ ಅವರು ಈ ಶತಮಾನ ಕಂಡ ಶ್ರೇಷ್ಠ ಸಾಹಿತಿ.
ನರಗುಂದ: ಭೈರಪ್ಪನವರ ಸಾಹಿತ್ಯವು ಸತ್ಯ ಮತ್ತು ವಾಸ್ತವಕ್ಕೆ ಬದ್ಧವಾಗಿದ್ದು, ಪ್ರಶಸ್ತಿಗಳಿಗಿಂತ ಸತ್ವಯುತ ಬರವಣಿಗೆಗೆ ಆದ್ಯತೆ ನೀಡಿದ ಅವರ ಕೊಡುಗೆ ಕನ್ನಡ ಸಾಹಿತ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತದೆ ಎಂದು ಸರ್ಕಾರಿ ಪ್ರಥಮದರ್ಜೆ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾ. ಆನಂದ ಲಾಳಸಂಗಿ ತಿಳಿಸಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟಿನ ಆಶ್ರಯದಲ್ಲಿ ನಡೆದ ಸಾಹಿತಿ ಎಸ್.ಎಲ್. ಭೈರಪ್ಪನವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.ಧರ್ಮಶ್ರೀ ಕಾದಂಬರಿಯಿಂದ ಹಿಡಿದು ಇತ್ತೀಚಿನ ವರ್ಷಗಳಲ್ಲಿ ಮೂಡಿಬಂದ ಉತ್ತರಕಾಂಡದವರೆಗೆ ಜೀವನದ ವಿವಿಧ ಸ್ತರಗಳ ಕುರಿತು ಚಿಂತನೆ ಮಾಡುವ ಬೃಹತ್ ಕಥಾನಕಗಳನ್ನು ಕೊಡುಗೆಯಾಗಿ ನೀಡಿರುವ ಅವರು ಈ ಶತಮಾನ ಕಂಡ ಶ್ರೇಷ್ಠ ಸಾಹಿತಿ. ಕಾದಂಬರಿಗಳ ಮೂಲಕ ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರರಾಜ್ಯ, ದೇಶಗಳಲ್ಲಿಯೂ ತಮ್ಮದೆಯಾದ ವಿಶಿಷ್ಟ ಶೈಲಿಯೊಂದಿಗೆ ಅತಿ ಹೆಚ್ಚು ಓದುಗ ಬಳಗ ಹೊಂದಿದ ಭೈರಪ್ಪನವರ ಸಾಹಿತ್ಯ ಸರ್ವಕಾಲಿಕವಾಗಿದೆ ಎಂದರು.
ವಿಶ್ರಾಂತ ಉಪನ್ಯಾಸಕ ಪ್ರೊ. ಪ್ರಕಾಶ ಅಣ್ಣಿಗೇರಿ ಮಾತನಾಡಿ, ಕನ್ನಡ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾಗಿದ್ದ ಭೈರಪ್ಪನವರ ಹಲವಾರು ಪುಸ್ತಕಗಳು ಇಂಗ್ಲಿಷ್ ಸೇರಿದಂತೆ ಭಾರತದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ಸರಸ್ವತಿ ಸಮ್ಮಾನ ಪ್ರಶಸ್ತಿ ಪಡೆದ ಮೊದಲಿಗರು. ಇವರ ಪರ್ವ ಕಾದಂಬರಿ ಕನ್ನಡ ಸಾಹಿತ್ಯ ಲೋಕದಲ್ಲಿ ಸಂಚಲನವನ್ನೇ ಮೂಡಿಸಿತ್ತು. ಅವರು ಇಂಗ್ಲಿಷ್‌ನಲ್ಲಿ ರಚಿಸಿದ ಸತ್ಯ ಮತ್ತು ಸೌಂದರ್ಯ ಎಂಬ ಮಹಾಪ್ರಬಂಧಕ್ಕೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಗಳಿಸಿದ್ದು, ಅವರ ಬರವಣಿಗೆಯ ಪ್ರಬುದ್ಧತೆಯನ್ನು ತೋರಿಸುತ್ತದೆ ಎಂದರು.ಈ ವೇಳೆ ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಸಿದ್ದಪ್ಪ ಬಿ. ಚಂಗಳಿ, ಡಾ. ಜಗದೀಶ ತಳವಾರ, ಡಾ. ಫಕ್ಕೀರಬಿ ನದಾಫ್, ಡಾ. ರಾಮು ಎಂ.ಎಸ್., ಪ್ರೊ. ಭೀಮನಗೌಡ ಕೊಣ್ಣೂರ, ಪಿ.ಎಸ್. ಅಣ್ಣಿಗೇರಿ, ಎಸ್.ಬಿ. ಭಜಂತ್ರಿ ಹಾಗೂ ಹೂಗಾರ ಇದ್ದರು. ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.