ಸಾರಾಂಶ
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ: ಜೀವ ವೈವಿಧ್ಯ ಸಂರಕ್ಷಣಾ ಕ್ಷೇತ್ರದ ನೊಬೆಲ್ ಎಂದೇ ಪ್ರಸಿದ್ಧಿ ಪಡೆದಿರುವ ಯುಎನ್‍ಡಿಪಿ (ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ) ನೀಡುವ ‘ಈಕ್ವೇಟರ್ ಇನಿಷಿಯೇಟಿವ್’ ಪ್ರಶಸ್ತಿಗೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ ಬೀಬಿ ಫಾತಿಮಾ ಮಹಿಳಾ ಸಂಘ ಪಾತ್ರವಾಗಿದೆ.ಪ್ರಶಸ್ತಿ ಮೊತ್ತ 10 ಸಾವಿರ ಡಾಲರ್ (₹8.5 ಲಕ್ಷ). ದೇಶದಲ್ಲಿಯೇ ಇಷ್ಟೊಂದು ಮೊತ್ತದ ಪ್ರಶಸ್ತಿ ಪಡೆದ ಮಹಿಳಾ ಸಂಘ ಎಂಬ ಕೀರ್ತಿಗೆ ಬೀಬಿ ಫಾತಿಮಾ ಸಂಘ ಪಾತ್ರವಾಗಿದೆ.
''''ನಿಸರ್ಗ ಆಧಾರಿತ ತಾಪಮಾನ ನಿಯಂತ್ರಣಕ್ಕೆ ಮಹಿಳೆ ಹಾಗೂ ಯುವಜನರ ನಾಯಕತ್ವ'''' ಎಂಬ ವಿಷಯ ಆಧರಿಸಿ ನಡೆದ ಈ ವರ್ಷದ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತ, ಅರ್ಜೆಂಟೀನಾ, ಬ್ರೆಝಿಲ್, ಪೆರು, ಇಂಡೋನೇಷ್ಯಾ, ಕೆನ್ಯಾ, ತಾಂಜಾನಿಯಾ, ಈಕ್ವೆಡಾರ್ ಸೇರಿದಂತೆ 103 ದೇಶಗಳ ಸುಮಾರು 700ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇದರಲ್ಲಿ ಭಾರತದ ಅದರಲ್ಲೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ ‘ಬೀಬಿ ಫಾತಿಮಾ ಮಹಿಳಾ ಸಂಘ’ಈ ಅತ್ಯುನ್ನತ ಪುರಸ್ಕಾರಕ್ಕೆ ಭಾಜನವಾಗಿದೆ.ಸಂಘದ ಸಾಧನೆ: 2018ರಲ್ಲಿ ಸಹಜ ಸಮೃದ್ಧ ಬಳಗದ ಸಹಯೋಗದಲ್ಲಿ ತೀರ್ಥ ಗ್ರಾಮದಲ್ಲಿ ಕೇವಲ 14 ಮಹಿಳೆಯರಿಂದ ಸ್ಥಾಪನೆಯಾದ ಬೀಬಿ ಫಾತಿಮಾ ಮಹಿಳಾ ಸಂಘವು ಹಲವು ಸಾಧನೆಗಳಿಗೆ ಪಾತ್ರವಾಗಿದೆ. ಮಳೆಯಾಶ್ರಿತ ಜಮೀನುಗಳಲ್ಲಿ ಪರಿಸರ ಸ್ನೇಹಿ ಕೃಷಿ ವಿಧಾನ ಅಳವಡಿಕೆ, ಸಮುದಾಯ ಬೀಜ ಬ್ಯಾಂಕ್, ಆಹಾರ- ಪೋಷಕಾಂಶ ಭದ್ರತೆ, ಸಿರಿಧಾನ್ಯ ಬೇಸಾಯ, ಸಂಸ್ಕರಣಾ ಘಟಕ ನಿರ್ವಹಣೆ ಹಾಗೂ ಮೌಲ್ಯವರ್ಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಜತೆಗೆ ಸುಮಾರು 30 ಗ್ರಾಮಗಳಲ್ಲಿ ನೈಸರ್ಗಿಕ ವಿಧಾನದಲ್ಲಿ ಸಿರಿಧಾನ್ಯ ಆಧಾರಿತ ಮಿಶ್ರ ಬೆಳೆ ಬೇಸಾಯವನ್ನು ಮರಳಿ ಚಾಲ್ತಿಗೆ ತಂದಿರುವುದು ಸಂಘದ ಹೆಗ್ಗಳಿಕೆ.
ಮಹಿಳಾ ಸಂಘವು ಸುಸ್ಥಿರ ಕೃಷಿಯ ಮೂಲಕ ಸಣ್ಣ ಮತ್ತು ಅತಿ ಸಣ್ಣ ಕೃಷಿ ಕುಟುಂಬಗಳ ಜೀವನೋಪಾಯವನ್ನು ಸುಧಾರಿಸುವ ಪ್ರಯತ್ನ ಆರಂಭಿಸಿತು. ಮಳೆಯಾಶ್ರಿತ ಜಮೀನುಗಳಲ್ಲಿ ಸಿರಿಧಾನ್ಯ ಆಧಾರಿತ ಮಿಶ್ರಬೆಳೆ ವಿಧಾನ ಅಳವಡಿಕೆ, ಮಹಿಳಾ ಸಬಲೀಕರಣ, ಹವಾಮಾನ ಸಹಿಷ್ಣು ಬೇಸಾಯ ಪದ್ಧತಿಗಳ ಪಾಲನೆ, ಪಶು ಸಂಗೋಪನೆ, ತೋಟಗಾರಿಕೆ ಜತೆಗೆ ಪ್ರಮುಖವಾಗಿ ಸಿರಿಧಾನ್ಯಗಳನ್ನು ಹಳ್ಳಿಮಟ್ಟದಲ್ಲಿ ಜನಪ್ರಿಯಗೊಳಿಸುವ ಕೆಲಸಗಳನ್ನು ಕೈಗೊಂಡಿತು.ಸಿರಿಧಾನ್ಯ ಸಂಸ್ಕರಣಾ ಘಟಕ: ಸಿರಿಧಾನ್ಯಗಳ ಸಂಸ್ಕರಣೆ ಸವಾಲು ಎದುರಾದಾಗ, ಸಹಜ ಸಮೃದ್ಧ’ಮಾರ್ಗದರ್ಶನದಲ್ಲಿ ಹೈದರಾಬಾದಿನ ‘ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ’ (ಐಐಎಂಆರ್) ನೆರವಿನೊಂದಿಗೆ ತೀರ್ಥ ಗ್ರಾಮದಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಯಿತು. ಈ ಘಟಕವನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿರುವುದು ವಿಶೇಷ. ಜತೆಗೆ ಈ ಘಟಕವು ಸಂಪೂರ್ಣವಾಗಿ ಸೌರಶಕ್ತಿ ಆಧಾರಿತವಾಗಿರುವುದು ಮತ್ತೊಂದು ವಿಶೇಷ.
ಬೀಜಬ್ಯಾಂಕ್ ಸ್ಥಾಪನೆ: ಸಂಘವು ವಿವಿಧ ಸಿರಿಧಾನ್ಯಗಳ ನೂರಾರು ತಳಿಗಳನ್ನು ಸಂರಕ್ಷಿಸಿದೆ. ಇಂತಹ ದೇಸಿ ತಳಿಗಳ ಬೀಜಗಳನ್ನು ಆಸಕ್ತ ರೈತರಿಗೆ ಉಚಿತವಾಗಿ ವಿತರಿಸಲು ‘ಸಮುದಾಯ ಬೀಜ ಬ್ಯಾಂಕ್’ ಸ್ಥಾಪಿಸಿದೆ. ಮುಂಗಾರು ಮತ್ತು ಹಿಂಗಾರು ಹಂಗಾಮುಗಳಲ್ಲಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರತಿ ವರ್ಷವೂ ‘ಸಹಜ ಸಮೃದ್ಧ’ ಏರ್ಪಡಿಸುವ ‘ಬೀಜ ಮೇಳ’ಗಳಲ್ಲಿ ಕ್ವಿಂಟಲ್‌ಗಟ್ಟಲೇ ದೇಸಿ ಬೀಜಗಳನ್ನು ಸಾವಯವ ಕೃಷಿಕರಿಗೆ ಈ ಸಂಘವು ನೀಡುತ್ತಿದೆ. ಇದರ ಜತೆಗೆ, ಸೌರಶಕ್ತಿ ಆಧಾರಿತ ಯಂತ್ರಗಳ ಮೂಲಕ ರೊಟ್ಟಿ, ಶಾವಿಗೆ ತಯಾರಿಕೆ ಮತ್ತು ಇತರೆ ಮೌಲ್ಯವರ್ಧನೆ ಪದಾರ್ಥಗಳನ್ನು ಉತ್ಪಾದಿಸಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ.ಅಕ್ಟೋಬರ್ 9ಕ್ಕೆ ಪ್ರಶಸ್ತಿ ಪ್ರದಾನ: ಈಕ್ವೇಟರ್ ಇನಿಷಿಯೇಟಿವ್ ಪ್ರಶಸ್ತಿಯನ್ನು ಅಕ್ಟೋಬರ್ 9ರಂದು ಬ್ರೆಜಿಲ್‌ನಲ್ಲಿ ಆನ್‌ಲೈನ್ ಮೂಲಕ ಪ್ರದಾನ ಮಾಡಲಾಗುತ್ತಿದೆ. ಬಳಿಕ ದೆಹಲಿಯಲ್ಲಿರುವ ಯುಎನ್‌ಡಿಪಿ ಸಂಸ್ಥೆ ಮೂಲಕ ಕಾರ್ಯಕ್ರಮ ಹಮ್ಮಿಕೊಂಡು ಮತ್ತೊಮ್ಮೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
‘ಸಹಜ ಸಮೃದ್ಧ’ಬಳಗದ ಬೀಬಿ ಫಾತಿಮಾ ಸಂಘವು ಮಾಡಿದ ಸಾಧನೆ ಗುರುತಿಸಿ ಯುಎನ್‌ಡಿಪಿ ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಭಾರತದಲ್ಲಿ ಇಷ್ಟೊಂದು ಮೊತ್ತದ ಪ್ರಶಸ್ತಿ ಪಡೆದ ಮಹಿಳಾ ಸಂಘ ಬೇರೆಲ್ಲೂ ಇಲ್ಲ ಎಂಬುದು ಖುಷಿ ತಂದಿದೆ ಎಂದು ಸಹಜ ಸಮೃದ್ಧದ ಮುಖ್ಯಸ್ಥ ಜಿ. ಕೃಷ್ಣಪ್ರಸಾದ್ ಹರ್ಷ ವ್ಯಕ್ತಪಡಿಸಿದರು.ಗ್ರಾಮೀಣ ಭಾಗದಲ್ಲಿರುವ ಸಣ್ಣ ಮಹಿಳಾ ಸಂಘದ ಕಾರ್ಯ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇನ್ನೂ ಹೆಚ್ಚಿನ ಕಾರ್ಯಚಟುವಟಿಕೆ ಕೈಗೊಳ್ಳಲು ಈ ಪ್ರಶಸ್ತಿಯು ಉತ್ತೇಜನ ನೀಡಿದೆ. ಇದಕ್ಕೆಲ್ಲ ರೈತರ, ಸಹಜ ಸಮೃದ್ಧ ಬಳಗದ ಸಹಕಾರ ಕಾರಣ ಎಂದು ಬೀಬಿ ಫಾತಿಮಾ ಮಹಿಳಾ ಸಂಘದ ಅಧ್ಯಕ್ಷೆ ಬೀಬಿಜಾನ ಹಳೇಮನಿ ಹೇಳಿದರು.