ಛಬ್ಬಿ ಗ್ರಾಮದಲ್ಲಿ 200 ವರ್ಷಗಳ ಇತಿಹಾಸ ಹೊಂದಿರುವ ವಿಶಿಷ್ಟ ಸಿಂಧೂರ ಗಣಪತಿ ಉತ್ಸವ ಈ ಬಾರಿ ದ್ವಿಶತಮಾನೋತ್ಸವದ ಸಂಭ್ರಮದಲ್ಲಿದ್ದು, ಸೆ. 14ರಿಂದ ಮೂರು ದಿನಗಳ ಕಾಲ ವೈಭವದಿಂದ ನಡೆಯಲಿದೆ.
ಹುಬ್ಬಳ್ಳಿ:
ತಾಲೂಕಿನ ಛಬ್ಬಿ ಗ್ರಾಮದಲ್ಲಿ 200 ವರ್ಷಗಳ ಇತಿಹಾಸ ಹೊಂದಿರುವ ವಿಶಿಷ್ಟ ಸಿಂಧೂರ ಗಣಪತಿ ಉತ್ಸವ ಈ ಬಾರಿ ದ್ವಿಶತಮಾನೋತ್ಸವದ ಸಂಭ್ರಮದಲ್ಲಿದ್ದು, ಸೆ. 14ರಿಂದ ಮೂರು ದಿನಗಳ ಕಾಲ ವೈಭವದಿಂದ ನಡೆಯಲಿದೆ.ಕುಲಕರ್ಣಿ ಮನೆತನದ ಏಳು ಮನೆಗಳಲ್ಲಿ ಪ್ರತ್ಯೇಕವಾಗಿ ಪ್ರತಿಷ್ಠಾಪಿಸುವ ಕೆಂಪು ಗಣಪತಿ ಜಾಗೃತ ದೇವರೆಂಬ ನಂಬಿಕೆ ಭಕ್ತರಲ್ಲಿದೆ. ಒಂದು ಕೈಯಲ್ಲಿ ತುಂಡಾದ ಹಲ್ಲು, ಮತ್ತೊಂದರಲ್ಲಿ ಲಿಂಗ, ಇನ್ನೊಂದರಲ್ಲಿ ಕೊಡಲಿ ಹಾಗೂ ಮತ್ತೊಂದರಲ್ಲಿ ತ್ರಿಶೂಲ ಹಿಡಿದಿರುವ ಸಿಂಧೂರ ಮೈಬಣ್ಣದ ವಿಶಿಷ್ಟ ಗಣಪತಿಯ ದರ್ಶನಕ್ಕೆ ನಾಡಿನ ವಿವಿಧೆಡೆ ಹಾಗೂ ನೆರೆಯ ರಾಜ್ಯಗಳಿಂದಲೂ ಭಕ್ತರು ಆಗಮಿಸಲಿದ್ದಾರೆ.
ಭಾದ್ರಪದ ಚೌತಿಯಂದು ಸಂಜೆ ಗಣಪತಿಯನ್ನು ಪಲ್ಲಕ್ಕಿಯಲ್ಲಿ ಅದ್ಧೂರಿ ಮೆರವಣಿಗೆಯ ಮೂಲಕ ಕರೆತಂದು ವಿಶೇಷ ಮಂಟಪದಲ್ಲಿ ಪ್ರಾಣಪ್ರತಿಷ್ಠೆ ಮಾಡಲಾಗುತ್ತದೆ. ಮೂರು ದಿನ ಅಭಿಷೇಕ, ಪಾರಾಯಣ, ನೈವೇದ್ಯ, ಕೀರ್ತನೆ, ಗಾಯನ ಹಾಗೂ ಗಣಹೋಮ ನಡೆಯಲಿವೆ. ಮೂರನೇ ದಿನ ಮಧ್ಯರಾತ್ರಿ ಬಳಿಕ ಶಾಸ್ತ್ರೋಕ್ತವಾಗಿ ವಿಸರ್ಜನೆ ನೆರವೇರಲಿದೆ.1827ರಲ್ಲಿ ಶ್ರೀ ಕೃಷ್ಣೇಂದ್ರ ಸ್ವಾಮಿಗಳ ಆಶೀರ್ವಾದದಂತೆ ಶಾನುಭೋಗ ತಮ್ಮಪ್ಪನವರು ಸಿಂಧೂರ ಗಣಪತಿ ಪ್ರತಿಷ್ಠಾಪಿಸಲು ಪ್ರಾರಂಭಿಸಿದರು. ಇದರಿಂದಾಗಿ ಸಂತಾನ ಹೀನರಾದ ತಮ್ಮಪ್ಪನವರಿಗೆ ಪುತ್ರ ಸಂತಾನವಾಯಿತು ಎಂಬ ನಂಬಿಕೆ. ಅಂದು ಆರಂಭಿಸಿದ ಉತ್ಸವವು ಏಳು ತಲೆಮಾರುಗಳಿಂದ ಮುಂದುವರಿದಿದೆ.