ಬಿಡದಿ ಪುರಸಭೆ ಆಡಳಿತ ಜೆಡಿಎಸ್ ತೆಕ್ಕೆಗೆ

| Published : Sep 20 2024, 01:31 AM IST

ಸಾರಾಂಶ

ರಾಮನಗರ: ತೀವ್ರ ಕುತೂಹಲ ಕೆರಳಿಸಿದ್ದ ಬಿಡದಿ ಪುರಸಭೆಯನ್ನು ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ರಾಮನಗರ: ತೀವ್ರ ಕುತೂಹಲ ಕೆರಳಿಸಿದ್ದ ಬಿಡದಿ ಪುರಸಭೆಯನ್ನು ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಪುರಸಭೆ ನೂತನ ಅಧ್ಯಕ್ಷರಾಗಿ ಎಂ.ಎನ್.ಹರಿಪ್ರಸಾದ್ ಹಾಗೂ ಉಪಾಧ್ಯಕ್ಷರಾಗಿ ಮಂಜುಳಾ ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.

ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನಿಂದ ಹರಿಪ್ರಸಾದ್, ಕಾಂಗ್ರೆಸ್‌ನಿಂದ ಬಿ.ರಾಮಚಂದ್ರಯ್ಯ ಹಾಗೂ ಬಿಸಿಎಂ(ಎ) ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ನಿಂದ ಮಂಜುಳಾ, ಕಾಂಗ್ರೆಸ್‌ನಿಂದ ಬಿಂದ್ಯಾ ನಾಮಪತ್ರ ಸಲ್ಲಿಸಿದ್ದರು.

ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹರಿಪ್ರಸಾದ್ 15 ಮತ ಪಡೆದರೆ, ಪ್ರತಿಸ್ಪರ್ಧಿ ರಾಮಚಂದ್ರಯ್ಯ (9 ಮತ) ವಿರುದ್ಧ 6 ಮತ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುಳಾ 15 ಮತ ಪಡೆದು ಪ್ರತಿಸ್ಪರ್ಧಿ ಬಿಂದ್ಯಾ (9 ಮತ)ಅವರನ್ನು 6 ಮತಗಳ ಅಂತರದಿಂದ ಪರಾಭವಗೊಳಿಸಿದರು.

ಈ ಚುನಾವಣೆಯಲ್ಲಿ ಬಿಜೆಪಿ ಸಂಸದ ಡಾ.ಮಂಜುನಾಥ್ ಜೆಡಿಎಸ್ ಪರ ಮತ ಚಲಾಯಿಸಿದರೆ, ಕಾಂಗ್ರೆಸ್ ಶಾಸಕ ಬಾಲಕೃಷ್ಣ ಗೈರಾಗಿದ್ದರು. ಫಲಿತಾಂಶ ಹೊರ ಬೀಳುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ತಹಸೀಲ್ದಾರ್ ತೇಜಸ್ವಿನಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಫಲ ಕೊಡದ ಕೈ ರಣತಂತ್ರ:

ಬಿಡದಿ ಪುರಸಭೆ ಅಧಿಕಾರ ಹಾಲಿ ಶಾಸಕ ಬಾಲಕೃಷ್ಣ ಮತ್ತು ಮಾಜಿ ಶಾಸಕ ಎ.ಮಂಜುನಾಥ್ ಅವರಿಗೆ ಪ್ರತಿಷ್ಠೆ ಪ್ರಶ್ನೆಯಾಗಿತ್ತು. ಜೆಡಿಎಸ್ ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ ಮೂವರಿಗೆ ತಲಾ 10 ತಿಂಗಳು ಅಧಿಕಾರ ಹಂಚಿಕೆ ಮಾಡಲಾಗಿದೆ. ಈ ಆಕಾಂಕ್ಷಿಗಳ ಪೈಕಿ ಯಾರಾದರು ಬಂಡಾಯ ಅಭ್ಯರ್ಥಿಯಾದಲ್ಲಿ ಅವರನ್ನು ಬೆಂಬಲಿಸಲು ಅಥವಾ ಅವರು ತಟಸ್ಥರಾಗಿ ಉಳಿದು ಕಾಂಗ್ರೆಸ್ ಅಭ್ಯರ್ಥಿಗೆ ಪರೋಕ್ಷವಾಗಿ ಬೆಂಬಲಿಸುವಂತೆ ಮಾಡಲು ಕಾಂಗ್ರೆಸ್ ರಣತಂತ್ರ ರೂಪಿಸಿತ್ತು. ಇದರ ಸುಳಿವು ಅರಿತ ಜೆಡಿಎಸ್ ನಾಯಕರು ಅಧಿಕಾರ ಹಂಚಿಕೆ ಸೂತ್ರ ಅನುಸರಿಸಿ ಸದಸ್ಯರಲ್ಲಿ ಯಾರೂ ಬಂಡಾಯ ಏಳದಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.

ನೂತನ ಅಧ್ಯಕ್ಷ ಹರಿಪ್ರಸಾದ್ ಮಾತನಾಡಿ, ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕಾರ ನೀಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ಸಂಸದ ಮಂಜುನಾಥ್ ಹಾಗೂ ಮಾಜಿ ಶಾಸಕ ಎ.ಮಂಜುನಾಥ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪಕ್ಷದ ವರಿಷ್ಠರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷ - ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಬಾಕ್ಸ್‌..........

ಆನೆ ಬಲ ಬಂದಂತಾಗಿದೆ: ಎ.ಮಂಜುನಾಥ್

ರಾಮನಗರ: ಬಿಡದಿ ಪುರಸಭೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಹಿಡಿದಿರುವುದರಿಂದ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಜನರು ಆಶೀರ್ವಾದ ಮಾಡಿ ಬಿಡದಿ ಪುರಸಭೆ ಆಡಳಿತ ನಡೆಸಲು ಅವಕಾಶ ನೀಡಿದ್ದರು. ಅವರ ನಿರೀಕ್ಷೆಯಂತೆ ಪಟ್ಟಣದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಲಿದ್ದಾರೆ ಎಂದರು.

ಪುರಸಭೆಯ 23 ವಾರ್ಡುಗಳಲ್ಲಿ ನ್ಯಾಯ ಸಮ್ಮತವಾಗಿ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು. ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆಗೆ ಸಹಕರಿಸಿದ ಸಂಸದ ಮಂಜುನಾಥ್ ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.

ಬಾಕ್ಸ್‌..............

ಜನರಿಗೆ ಮೂಲಸೌಕರ್ಯ ಕಲ್ಪಿಸಿ: ಡಾ.ಮಂಜುನಾಥ್

ರಾಮನಗರ: ಬಿಡದಿ ಪುರಸಭೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಜನರಿಗೆ ಮೂಲ ಸೌಲಭ್ಯ ಕಲ್ಪಿಸಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಂಸದ ಡಾ. ಮಂಜುನಾಥ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾಯಿತ ಪ್ರತಿನಿಧಿಗಳು ಆಡಳಿತ ನಡೆಸಿದಲ್ಲಿ ರಸ್ತೆ, ಚರಂಡಿ ನಿರ್ಮಾಣ, ಕುಡಿಯುವ ನೀರು ಪೂರೈಕೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಅನುಕೂಲವಾಗಲಿದೆ ಎಂದರು.

ನೂತನ ಅಧ್ಯಕ್ಷ - ಉಪಾಧ್ಯಕ್ಷರು ಜನೋಪಯೋಗಿ ಕೆಲಸಗಳನ್ನು ಮಾಡುವುದರ ಮೂಲಕ ಜನರ ಪ್ರೀತಿಗೆ ಪಾತ್ರರಾಗಬೇಕು. ಪಟ್ಟಣದ ಅಭಿವೃದ್ಧಿಗೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಮಂಜುನಾಥ್ ಭರವಸೆ ನೀಡಿದರು.

19ಕೆಆರ್ ಎಂಎನ್ 3.ಜೆಪಿಜಿ

ಬಿಡದಿ ಪುರಸಭೆ ನೂತನ ಅಧ್ಯಕ್ಷ ಹರಿಪ್ರಸಾದ್ ಹಾಗೂ ಉಪಾಧ್ಯಕ್ಷೆ ಮಂಜುಳಾ ಅವರನ್ನು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದಿಸಿದರು.