ಕನ್ನಡಪ್ರಭ ವಾರ್ತೆ ಮಡಿಕೇರಿ
ಡಿ.ಕೆ. ಶಿವಕುಮಾರ್ ಸಿಎಂ ಆಗುವ ಮೊದಲಿನಿಂದಲೂ ಬಿಡದಿ ಟೌನ್ ಶಿಪ್ ಯೋಜನೆ ಇತ್ತು. ಕೆಲವೊಮ್ಮೆ ರೈತರ ದಾರಿ ತಪ್ಪಿಸುವ ಕೆಲಸ ಆಗುತ್ತದೆ. ಬಿಡದಿಯಲ್ಲೂ ಅದೇ ರೀತಿ ಆಗುತ್ತಿದೆ. ರೈತರನ್ನು ರಾಜಕೀಯವಾಗಿ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟಿದ್ದಾರೆ.ವಿರಾಜಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪೊನ್ನಣ್ಣ ಅವರು, ಬಿಡದಿ ಟೌನ್ ಶಿಪ್ ವಿಷಯದಲ್ಲಿ ವಿಜಯೇಂದ್ರ ರಾಹುಲ್ ಗಾಂಧಿಗೆ ಪತ್ರ ಬರೆದ ವಿಚಾರ ಕುರಿತು ಸ್ಪಷ್ಟನೆ ನೀಡಿದ್ದಾರೆ.ವಿಧಾನ ಪರಿಷತ್ ಚುನಾವಣೆ ಮುಗಿಯುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಜೂ. 18ಕ್ಕೆ ಪರಿಷತ್ ಚುನಾವಣೆ ಇದ್ದು, ಅದರ ಬಳಿಕ ಸಂಪುಟ ವಿಸ್ತರಣೆ ನಡೆಯಲಿದೆ. ಹೈಕಮಾಂಡ್, ಸಿಎಂ, ಮಾಜಿ ಸಿಎಂ, ನೂತನ ಕೆಪಿಸಿಸಿ ಅಧ್ಯಕ್ಷರು ಸೇರಿ ನಿರ್ಧರಿಸಲಿದ್ದಾರೆ. ಅವರ ಸಭೆ ಬಳಿಕ ಸಚಿವ ಸಂಪುಟ ವಿಸ್ತರಣೆ ಆಗಬಹುದು. ಕಡಿಮೆ ಅವಧಿ ಇರುವುದರಿಂದ ತಕ್ಷಣದಲ್ಲೇ ಸಚಿವ ಸಂಪುಟ ಆಗಲಿದೆ ಎಂದರು.
ಜಿಲ್ಲೆಗೆ ಪ್ರಾತಿನಿಧ್ಯ ಕೊಡುವಂತೆ ಹಿಂದಿನಿಂದಲೂ ಕೂಗಿದೆ. ಅದಕ್ಕೆ ನಾನೂ ಕೂಡ ಧ್ವನಿಗೂಡಿಸುತ್ತೇನೆ ಎಂದರು.ಆಸ್ತಿ ಬಹಿರಂಗಪಡಿಸಲಿ:ಡಿಕೆಶಿ ಆಸ್ತಿ ಬಗ್ಗೆ ದಾಖಲೆ ನೀಡಲಿ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪೊನ್ನಣ್ಣ, ದೇಶದಲ್ಲಿ ಎಲ್ಲ ರಾಜಕಾರಣಿಗಳು ಆಸ್ತಿ ಎಷ್ಟು ಇದೆ ಎಂದು ಬಹಿರಂಗ ಮಾಡಲಿ. ಮೊದಲು ಎಷ್ಟು ಇತ್ತು ನಂತರ ಎಷ್ಟು ಆಗಿದೆ ಎಂಬುದು ಗೊತ್ತಾಗಲಿದೆ. ಆರಂಭದಲ್ಲಿ ಎಷ್ಟಿತ್ತು ಈಗ ಎಷ್ಟಾಗಿದೆ ಎನ್ನುವುದು ಗೊತ್ತಾಗುತ್ತದೆ. ಹೇಗೆ ಇಷ್ಟು ಆಸ್ತಿ ಆಯ್ತು, ಎಲ್ಲಿಂದ ಬಂತು ಅಂತ ಗೊತ್ತಾಗುತ್ತದೆ. ಡಿಕೆಶಿ ಅವರು ನಾನು ಉದ್ಯಮಿ ಅಂತ ಒಪ್ಪಿಕೊಂಡಿದ್ದಾರೆ. ಸಾಕಷ್ಟು ಉದ್ಯಮಗಳನ್ನು ನಡೆಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಅಂತ ಒಪ್ಪಿಕೊಂಡಿದ್ದಾರೆ. ಪರಿಣಾಮ ಆಸ್ತಿ ಹೆಚ್ಚಾಗಿರುವುದು ಸಹಜ ಎಂದರು.