ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆಯ ಅಂತಿಮ ಹಂತದ ನೋಟಿಫಿಕೇಷನ್ ಗೆ ಸಿದ್ಧತೆಗಳು ನಡೆದಿರುವ ಬೆನ್ನ ಹಿಂದೆಯೇ ಮತ್ತೊಮ್ಮೆ ರಾಜಕೀಯ ನಾಯಕರು ಸವಾಲಿಗೆ ಪ್ರತಿ ಸವಾಲು ಹಾಕುತ್ತಿರುವುದು ಇಡೀ ಯೋಜನೆ ರಾಜಕೀಯ ತಿರುವು ಪಡೆದುಕೊಳ್ಳುವಂತೆ ಮಾಡಿದೆ.

ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವ್ಯಾಪ್ತಿಯ 26 ಗ್ರಾಮಗಳ ರೈತರು ಸರದಿ ಪ್ರಕಾರ ಕಳೆದ 437 ದಿನಗಳಿಂದ ರಸ್ತೆ ಬದಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಯೋಜನೆ ಪರವಾಗಿ ರೈತರು ಭೂ ಸ್ವಾಧೀನಪಡಿಸಿಕೊಂಡು ಪರಿಹಾರ ಹಣ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.

ಈ ಮಧ್ಯೆ ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆ ಭೂಸ್ವಾಧೀನಕ್ಕಾಗಿ ಮೂರು ಮೂರು ಹಳ್ಳಿಗಳನ್ನು ಒಟ್ಟುಗೂಡಿಸಿ ಪ್ರತ್ಯೇಕವಾದ ಅಂತಿಮ ಅಧಿಸೂಚನೆಗಳನ್ನು ಪ್ರಕಟಿಸಲಿದೆ. ಅಲ್ಲದೆ, ಭೂಮಿ ನೀಡಿದ ರೈತರಿಗೆ ಜೂನ್ 1 ರಿಂದಲೇ ಪರಿಹಾರ ಹಣ ಬಿಡುಗಡೆ ಮಾಡಲು ಕೂಡ ನಿರ್ಧರಿಸಿದೆ.


ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಶತಾಯ ಗತಾಯ ಈ ಯೋಜನೆಯನ್ನು ಜಾರಿ ಮಾಡಲು ಪಣತೊಟ್ಟಿದ್ದಾರೆ. ಮತ್ತೊಂದೆಡೆ ಜೆಡಿಎಸ್ ಡಿ.ಕೆ.ಶಿವಕುಮಾರ್ ಅವರಿಗೆ ಠಕ್ಕರ್ ಕೊಡಲು ಸಿದ್ಧತೆ ನಡೆಸಿದೆ. ಈ ಯೋಜನೆ ವಿಚಾರವಾಗಿ ಜೆಡಿಎಸ್ ನ ಮಿತ್ರ ಪಕ್ಷ ಬಿಜೆಪಿ ಸದ್ಯಕ್ಕೆ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.

ಸಿಎಂ ಸಿದ್ದುಗೆ ಎಚ್ ಡಿಡಿ ಪತ್ರ:

ಟೌನ್ ಶಿಪ್ ಯೋಜನೆ ರೈತರ ಭೂಮಿಯನ್ನು ಕಸಿದುಕೊಳ್ಳುವ ಪ್ರಾಯೋಜಿತ ಹಗರಣ. ರೈತರ ತೀವ್ರ ವಿರೋಧದ ನಡುವೆಯೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯೋಜನೆ ಜಾರಿಗೊಳಿಸಲು ಏಕೆ ಹಠ ಹಿಡಿದಿದ್ದಾರೆ ಎಂಬುದು ಗೊತ್ತಿಲ್ಲ. ತಾವು ಬಿಡದಿಗೆ ಬಂದು ರೈತರ ಪರಿಸ್ಥಿತಿ ನೋಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ರ ಬರೆದಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಎಚ್ ಡಿಕೆ - ಡಿಕೆಶಿ ಚರ್ಚೆಗೆ ಪಂಥಾಹ್ವಾನ:

ಮತ್ತೊಂದೆಡ ಈ ಟೌನ್ ಶಿಪ್ ಯೋಜನೆ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಚರ್ಚೆಗೆ ಪಂಥಾಹ್ವಾನ ಕೊಡುತ್ತಿದ್ದಾರೆ. ಇದರಿಂದ ಕೆರಳಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಸಹ ವಾಕ್ಸಮರದಲ್ಲಿ ಮುಳುಗಿ ಈ ಯೋಜನೆ ಜಟಾಪಟಿ ತಾರಕಕ್ಕೇರುವಂತೆ ಮಾಡಿದ್ದಾರೆ.

ಆ ಭಾಗದಲ್ಲಿ ರೈತರೇ ಇಲ್ಲ ಎಂದ ಡಿ.ಕೆ.ಶಿವಕುಮಾರ್ ಅವರಿಗೆ ಕೌಂಟರ್ ಕೊಡಲು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಜ್ಜಾಗಿದ್ದಾರೆ. ಈ ಯೋಜನೆ ವ್ಯಾಪ್ತಿಯ ಹಳ್ಳಿಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡುತ್ತಿರುವುದು ಟೌನ್ ಶಿಪ್ ಯೋಜನೆ ಮತ್ತಷ್ಟು ವಿವಾದದ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆ.

---

ಇಂದು ನಿಖಿಲ್ ರಿಂದ ರಿಯಾಲಿಟಿ ಚೆಕ್

ರಾಮನಗರ:

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ರೈತ ವಿರೋಧಿ ಬಿಡದಿ ಟೌನ್‌ ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೇ 27ರಂದು ಯೋಜನೆ ವ್ಯಾಪ್ತಿಯ 26 ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.

ಬಿಡದಿಯಲ್ಲಿ ರೈತರೇ ಇಲ್ಲ ಎಂದು ಹೇಳುವವರ ಕಣ್ಣು ತೆರೆಸಲು ನಮ್ಮ ಭೂಮಿ - ನಮ್ಮ ಹಕ್ಕು ಘೋಷಣೆಯೊಂದಿಗೆ ನಿಖಿಲ್ ಕುಮಾರಸ್ವಾಮಿರವರು ಮೇ. 27ರಂದು ಬೆಳಗ್ಗೆ 10 ಗಂಟೆಯಿಂದ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 26 ಗ್ರಾಮಗಳಲ್ಲಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.

ಇದು ಬಿಡದಿ ಟೌನ್‌ಶಿಪ್‌ ಪ್ರಶ್ನೆ ಅಲ್ಲ, ಅದು ರೈತರ ಬದುಕಿನ ಪ್ರಶ್ನೆ. ಟೌನ್‌ಶಿಪ್‌ ಮಾಡುತ್ತಿರುವ ಜಾಗದಲ್ಲಿ ರೈತರೇ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳುತ್ತಾರೆ. ರೈತರ ಕಷ್ಟ- ಸುಖ ಆಲಿಸಿ ವಾಸ್ತವ ಸ್ಥಿತಿ ಏನೆಂದು ತೋರಿಸಲು ನಿಖಿಲ್ ಕುಮಾರಸ್ವಾಮಿ ಗ್ರಾಮ ಭೇಟಿ ಹಮ್ಮಿಕೊಂಡಿದ್ದಾರೆ. ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿರವರು ಮಾಜಿ ಶಾಸಕ ಎ.ಮಂಜುನಾಥ್ ಅವರೊಂದಿಗೆ ಬೈರಮಂಗಲದಿಂದ ಆರಂಭಗೊಂಡು 5 ಕೇಂದ್ರಗಳಲ್ಲಿ ನಡೆಯುವ ಈ ಸಂವಾದದಲ್ಲಿ ರೈತರ ಅಳಲನ್ನು ಆಲಿಸುವರು. ಬೈರಮಂಗಲ, ಕಂಚಗಾರನಹಳ್ಳಿ, ಅಳಾಳುಸಂದ್ರ, ಹೊಸೂರು, ಬನ್ನಿಗಿರಿ ಸೇರಿದಂತೆ ಇತರ ಗ್ರಾಮಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ.

---

ಇಡೀ ನಾಡಿಗೆ ಅನ್ನ ನೀಡುವ ಈ ಭೂಮಿ ನಮಗೆ ಬರೀ ಮಣ್ಣಲ್ಲ, ಅದು ನಮ್ಮ ಹೆತ್ತ ತಾಯಿ. ಕೋಟ್ಯಂತರ ರುಪಾಯಿ ತಂದುಕೊಟ್ಟರೂ ಹೆತ್ತ ತಾಯಿಯನ್ನು ಯಾರಾದರೂ ಮಾರಿಕೊಳ್ಳಲು ಸಾಧ್ಯವೇ. 9,600 ಎಕರೆ ಫಲವತ್ತಾದ ಭೂಮಿ ಸ್ವಾಧೀನ, 10 ಲಕ್ಷಕ್ಕೂ ಹೆಚ್ಚು ಮರ ಕಡಿತ, ತಿಂಗಳಿಗೆ 6 ಲಕ್ಷ ಲೀಟರ್ ಹಾಲು ಉತ್ಪಾದನೆಗೆ ಹೊಡೆತ ನೀಡುವ ಈ ಟೌನ್ ಶಿಪ್ ಯೋಜನೆ ಅಭಿವೃದ್ಧಿಯಲ್ಲ, ವಿನಾಶ.

- ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷರು, ಜೆಡಿಎಸ್ ಯುವ ಘಟಕ.