ಇಂದಿನಿಂದ ಬೀದರ್‌ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ

| Published : Mar 09 2024, 01:34 AM IST

ಇಂದಿನಿಂದ ಬೀದರ್‌ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಲಿಂಗ ಪಟ್ಟದ್ದೇವರ ಸರ್ವಾಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಿದ್ಧತೆಯನ್ನು ಕಸಾಪ ಪೂರ್ಣಗೊಳಿಸಿದೆ. ಬಸವಲಿಂಗ ಪಟ್ಟದ್ದೇವರ ಜೀವನ ಮತ್ತು ಸಾಧನೆ ಛಾಯಾಚಿತ್ರ ಪ್ರದರ್ಶನಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಬೀದರ್‌

ಬೀದರ್‌ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನವು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರ ಸರ್ವಾಧ್ಯಕ್ಷತೆಯಲ್ಲಿ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಮಾ.9 ಮತ್ತು 10 ರಂದು ನಡೆಯಲಿದ್ದು ಕನ್ನಡ ಸಾಹಿತ್ಯ ಪರಿಷತ್ತು ಸರ್ವ ಸಿದ್ಧತೆ ಪೂರ್ಣಗೊಳಿಸಿದೆ.

ಸಮ್ಮೇಳನದ ವಿವಿಧ ಸಮಿತಿ, ಪರಿಷತ್‌ ಪದಾಧಿಕಾರಿಗಳು, ಸದಸ್ಯರು ಹಾಗೂ ಕನ್ನಡಾಭಿಮಾನಿಗಳು ಸಮ್ಮೇಳನವನ್ನು ಸರ್ವ ರೀತಿಯಿಂದಲೂ ಯಶಸ್ವಿಗೊಳಿಸಲು ಅಣಿಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.

ಪುಸ್ತಕ ಸಂತೆ, ಚಿತ್ರ ಸಂತೆ, ಚಿತ್ರಕಲಾ ಸ್ಪರ್ಧೆ, ಉದ್ಯೋಗ ಮೇಳ, ಆರೋಗ್ಯ ಶಿಬಿರ:

ಸಮ್ಮೇಳನ ಅರ್ಥಪೂರ್ಣವಾಗಿಸುವ ದಿಸೆಯಲ್ಲಿ ಬಸವಲಿಂಗ ಪಟ್ಟದ್ದೇವರ ಜೀವನ ಮತ್ತು ಸಾಧನೆ ಛಾಯಾಚಿತ್ರ ಪ್ರದರ್ಶನ, ಪುಸ್ತಕ ಸಂತೆ, ಚಿತ್ರ ಸಂತೆ, ಚಿತ್ರಕಲಾ ಸ್ಪರ್ಧೆ, ಉದ್ಯೋಗ ಮೇಳ, ಆರೋಗ್ಯ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಮುಖ್ಯ ವೇದಿಕೆಗೆ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ, ಮಂಟಪಕ್ಕೆ ಡಾ.ಚನ್ನಬಸವ ಪಟ್ಟದ್ದೇವರು, ಮಹಾದ್ವಾರಕ್ಕೆ ಡಾ. ಜಯದೇವಿ ತಾಯಿ ಲಿಗಾಡೆ ಹಾಗೂ ಪ್ರಭುರಾವ್‌ ಕಂಬಳಿವಾಲೆ ಅವರ ಹೆಸರು ಇಡಲಾಗಿದೆ ಎಂದು ತಿಳಿಸಿದ್ದಾರೆ.

ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಭಜ್ಜಿ, ಕುಟ್ಟಿದ ಗೋಧಿ ಹುಗ್ಗಿಯ ಸವಿರುಚಿ ಊಟ:

ಸಮ್ಮೇಳನದಲ್ಲಿ ಪಾಲ್ಗೊಳ್ಳುವವರಿಗೆ ಎರಡು ದಿನ ವಿಭಿನ್ನ ಖಾದ್ಯಗೊಳಗೊಂಡ ಊಟದ ವ್ಯವಸ್ಥೆ ಇರಲಿದೆ. ಒಂದು ದಿನ ಬಿಳಿ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಭಜ್ಜಿ, ಕುಟ್ಟಿದ ಗೋಧಿ ಹುಗ್ಗಿ, ಅನ್ನ, ಸಾಂಬಾರು, ಮಿರ್ಚಿ, ಹಪ್ಪಳ ಮಜ್ಜಿಗೆ ಇರಲಿದ್ದರೆ, ಮಿಕ್ಸ್‌ ಪಲ್ಯ, ಚಪಾತಿ, ಅನ್ನ, ಸಾಂಬಾರು, ಲಡ್ಡು, ಅಂಬಲಿ ಇನ್ನೊಂದು ದಿನದ ಭೋಜನದ ಭಾಗವಾಗಿರಲಿವೆ ಎಂದು ಹೇಳಿದ್ದಾರೆ.

ರಾಷ್ಟ್ರ ಧ್ವಜಾರೋಹಣದೊಂದಿಗೆ 21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ:

ಮಾ.9ರಂದು ಬೆಳಗ್ಗೆ 8ಕ್ಕೆ ರಂಗಮಂದಿರದಲ್ಲಿ ರಾಷ್ಟ್ರ ಧ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ. ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ರಾಷ್ಟ್ರ ಧ್ವಜಾರೋಹಣವನ್ನು, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ನಾಡ ಧ್ವಜಾರೋಹಣ ಹಾಗೂ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಪರಿಷತ್‌ ಧ್ವಜಾರೋಹಣ ಮಾಡುವರು.

ತಾಯಿ ಭುವನೇಶ್ವರಿ, ಸರ್ವಾಧ್ಯಕ್ಷ ಬಸವಲಿಂಗ ಪಟ್ಟದ್ದೇವರ ಭವ್ಯ ಮೆರವಣಿಗೆ:

ಬೆಳಗ್ಗೆ 8.30ಕ್ಕೆ ಜಿಲ್ಲಾ ಕನ್ನಡ ಭವನದಲ್ಲಿ ಕನ್ನಡ ತಾಯಿ ಭುವನೇಶ್ವರಿ ಪೂಜೆ, ಬಸವಣ್ಣ, ಡಾ. ಚನ್ನಬಸವ ಪಟ್ಟದ್ದೇವರು ಹಾಗೂ ಜಯದೇವಿ ತಾಯಿ ಲಿಗಾಡೆ ಪ್ರತಿಮೆಗಳ ಅನಾವರಣ ನಡೆಯಲಿದೆ. ಬೆಳಗ್ಗೆ 9ಕ್ಕೆ ಅಲಂಕೃತ ರಥದಲ್ಲಿ ಗುಂಪಾ ಸಮೀಪದ ಕರ್ನಾಟಕ ಪದವಿಪೂರ್ವ ಕಾಲೇಜಿನಿಂದ ರಂಗಮಂದಿರ ವರೆಗೆ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನ ಸರ್ವಾಧ್ಯಕ್ಷ ಬಸವಲಿಂಗ ಪಟ್ಟದ್ದೇವರ ಭವ್ಯ ಮೆರವಣಿಗೆ ಜರುಗಲಿದೆ.

ರಂಗ ಮಂದಿರದಲ್ಲಿ ಬೆಳಗ್ಗೆ 11.30ಕ್ಕೆ ನಡೆಯುವ ಸಮಾರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಮನು ಬಳಿಗಾರ ಸಮ್ಮೇಳನ ಉದ್ಘಾಟಿಸುವರು. ಹುಲಸೂರಿನ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ, ಹಾರಕೂಡದ ಚನ್ನವೀರ ಶಿವಾಚಾರ್ಯರ ನೇತೃತ್ವ, ಭಾಲ್ಕಿ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸುವರು. ಬಸವಲಿಂಗ ಪಟ್ಟದ್ದೇವರು ಸರ್ವಾಧ್ಯಕ್ಷರ ನುಡಿ ಆಡುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು.

ಪೌರಾಡಳಿತ ಹಾಗೂ ಹಜ್‌ ಸಚಿವ ರಹೀಮ್‌ಖಾನ್‌ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಶಾಸಕ ಪ್ರಭು ಚವ್ಹಾಣ್‌ ಚಿತ್ರ ಸಂತೆ ಉದ್ಘಾಟಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಪರಿಷತ್‌ ಧ್ವಜ ಹಸ್ತಾಂತರಿಸುವರು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಪುಸ್ತಕ ಬಿಡುಗಡೆ ಮಾಡುವರು. ಶಾಸಕ ಶರಣು ಸಲಗರ ಪುಸ್ತಕ ಮಳಿಗೆ ಉದ್ಘಾಟಿಸುವರು. ಶಾಸಕ ಡಾ. ಸಿದ್ಧಲಿಂಗಪ್ಪ ಪಾಟೀಲ್‌ ವಸ್ತು ಪ್ರದರ್ಶನ ಉದ್ಘಾಟಿಸುವರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಆಶಯ ನುಡಿ ಆಡುವರು.

ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸೊದ್ದಿನ್, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಹಂಗರಗಿ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಪಂ ಸಿಇಒ ಡಾ.ಗಿರೀಶ ದಿಲೀಪ ಬದೋಲೆ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಗುರುನಾಥ ಕೊಳ್ಳೂರ, ಕೋಶಾಧ್ಯಕ್ಷ ಬಾಬುವಾಲಿ, ಪ್ರಮುಖರಾದ ಮಲ್ಲಮ್ಮ ಆರ್. ಪಾಟೀಲ, ರಾಜೇಂದ್ರಕುಮಾರ ಗಂದಗೆ, ರವೀಂದ್ರ ರೆಡ್ಡಿ ಮಾಲಿಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಜಿಲ್ಲೆಯ ಸಾಹಿತ್ಯ ಆಸಕ್ತರು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಮನವಿ ಮಾಡಿದ್ದಾರೆ.