ಬೀದರ್‌ ಜಿಲ್ಲಾ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನ

| Published : Sep 07 2024, 01:37 AM IST

ಬೀದರ್‌ ಜಿಲ್ಲಾ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಅಲಂಕೃತ ಸಾರೋಟದಲ್ಲಿ ಸರ್ವಾಧ್ಯಕ್ಷೆಯ ಅದ್ಧೂರಿ ಮೆರವಣಿಗೆ

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲಾ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನದ ನಿಮಿತ್ತ ನಗರದಲ್ಲಿ ಶುಕ್ರವಾರ ಅಲಂಕೃತ ಸಾರೋಟದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರದ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಪೂರ್ಣಿಮಾ ಜಾರ್ಜ್ ಅವರ ಅದ್ಧೂರಿ ಮೆರವಣಿಗೆ ನಡೆಯಿತು.

ಪೊಲೀಸ್‌ ಬ್ಯಾಂಡ್‌, ಮಾಣಿಕ ಪಬ್ಲಿಕ್‌ ಸ್ಕೂಲ್‌ ಬ್ಯಾಂಡ್‌ ಸೇರಿ ನಾಲ್ಕು ಬಗೆಯ ಬ್ಯಾಂಡ್‌ಗಳು, ಹಲಗೆ, ಲಂಬಾಣಿ ನೃತ್ಯ, ಲೇಜಿಮ್‌ ಮೊದಲಾದ ಕಲಾ ತಂಡಗಳು ಮೆರವಣಿಗೆಗೆ ಕಳೆ ನೀಡಿದವು.

ರಾಷ್ಟ್ರಧ್ವಜ ಹಾಗೂ ನಾಡ ಧ್ವಜದ ಬಣ್ಣಗಳ ವಸ್ತ್ರ ಧರಿಸಿದ್ದ ಶಿಕ್ಷಕರು ಹಾಗೂ ಮಕ್ಕಳು ಸಾರ್ವಜನಿಕರ ಗಮನ ಸೆಳೆದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕೈಯಲ್ಲಿ ಕನ್ನಡ ಘೋಷವಾಕ್ಯಗಳ ಫಲಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, ಕನ್ನಡ ಬಾವುಟಗಳನ್ನು ಹಿಡಿದುಕೊಂಡಿದ್ದರು. ಕೆಂಪು ಹಳದಿ ಬಣ್ಣದ ಕೊರಳ ಪಟ್ಟಿ ಹಾಕಿಕೊಂಡಿದ್ದ ಪರಿಷತ್‌ ಪದಾಧಿಕಾರಿಗಳು, ಸದಸ್ಯರು ಹಾಗೂ ಕನ್ನಡ ಅಭಿಮಾನಿಗಳು ಕನ್ನಡ ತಾಯಿ ಭುವನೇಶ್ವರಿಗೆ ಜಯವಾಗಲಿ, ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಮತ್ತಿತರ ಘೋಷಣೆಗಳನ್ನು ಹಾಕಿದರು.

ಡಿಜೆದಲ್ಲಿ ಮೊಳಗಿದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ‘ಅವ್ವ ಕಣೋ ಕನ್ನಡ’ ಮೊದಲಾದ ಕನ್ನಡ ಗೀತೆಗಳ ತಾಳಕ್ಕೆ ತಕ್ಕಂತೆ ವಿದ್ಯಾರ್ಥಿಗಳು, ಯುವಕರು ಕುಣಿದು ಕುಪ್ಪಳಿಸಿದರು. ಪರಿಷತ್‌ ಪದಾಧಿಕಾರಿಗಳು, ಗಣ್ಯರೂ ಹೆಜ್ಜೆ ಹಾಕಿ ಸಾಥ್‌ ನೀಡಿದರು.

ಸಾರೋಟ್‌ನಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಬೃಹತ್‌ ಭಾವಚಿತ್ರ ಇರಿಸಲಾಗಿತ್ತು. ಮಾರ್ಗ ಮಧ್ಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸರ್ವಾಧ್ಯಕ್ಷೆ ಪೂರ್ಣಿಮಾ ಜಾರ್ಜ್ ಅವರನ್ನು ಸತ್ಕರಿಸಿದರು. ಮೆರವಣಿಗೆ ಮಾರ್ಗದಲ್ಲಿ ಅಲ್ಲಲ್ಲಿ ಬಿಸ್ಕತ್‌ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಬಿ.ವಿ ಭೂಮರಡ್ಡಿ ಕಾಲೇಜಿನಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ ಬದೋಲೆ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಮೆರವಣಿಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಭಗತ್‌ ಸಿಂಗ್ ವೃತ್ತ, ಕನ್ನಡಾಂಬೆ ರೋಟರಿ ವೃತ್ತದ ಮೂಲಕ ಸಾಗಿ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರಕ್ಕೆ ತಲುಪಿ ಸಮಾರೋಪಗೊಂಡಿತು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಎಚ್‌ಕೆಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ್‌ ವಾಲಿ, ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಸಾಹಿತಿ ಡಾ.ಬಸವರಾಜ ಬಲ್ಲೂರ, ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮುನೇಶ್ವರ ಲಾಖಾ, ಪರಿಷತ್ ಜಿಲ್ಲಾ ಘಟಕದ ಉಪಾಧ್ಯಕ್ಷ ಹಾವಶೆಟ್ಟಿ ಪಾಟೀಲ, ಗೌರವ ಕಾರ್ಯದರ್ಶಿಗಳಾದ ಟಿ.ಎಂ.ಮಚ್ಚೆ, ಶಿವಕುಮಾರ ಕಟ್ಟೆ, ಗೌರವ ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಕಾರ್ಯಕಾರಿಣಿ ಸದಸ್ಯರಾದ ಸಿದ್ಧಾರೆಡ್ಡಿ ನಾಗೋರಾ, ದೇವೇಂದ್ರ ಕರಂಜೆ, ನಾಗೇಶ ಪ್ರಭಾ, ಬೀದರ್‌ ತಾಲೂಕು ಅಧ್ಯಕ್ಷ ಎಂ.ಎಸ್‌. ಮನೋಹರ, ಮೆರವಣಿಗೆ ಸಮಿತಿಯ ಧನರಾಜ ಹಂಗರಗಿ, ರಾಜೇಂದ್ರ ಮಣಗೆರೆ, ಚಂದು ಸಪ್ನಾ, ಬಾಬುರಾವ್‌ ದಾನಿ, ಪರಮೇಶ್ವರ ಬಿರಾದಾರ, ಸಂತೋಷಕುಮಾರ ಮಂಗಳೂರೆ, ಅಶೋಕ ದಿಡಗೆ, ಸಿದ್ಧಾರೂಢ ಭಾಲ್ಕೆ, ಚನ್ನಬಸವ ಹೇಡೆ, ಸಂಗಮೇಶ ಜ್ಯಾಂತೆ, ಸಂದೀಪ ಶೆಟಕಾರ, ಸೂರ್ಯಕಾಂತ ರಾಮಶೆಟ್ಟಿ, ವೀರಶೆಟ್ಟಿ ಚನಶೆಟ್ಟಿ, ಬಸವರಾಜ ಬಶೆಟ್ಟಿ, ರೂಪಾ ಪಾಟೀಲ್‌, ವಿದ್ಯಾವತಿ ಬಲ್ಲೂರ, ಶ್ರೀದೇವಿ ವಿ. ಪಾಟೀಲ, ಜಯದೇವಿ ಯದಲಾಪುರೆ, ಲೋಕೇಶ ಪಾಟೀಲ್‌ ಮತ್ತಿತರರು ಪಾಲ್ಗೊಂಡಿದ್ದರು.