ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಬಂಟಿಂಗ್‌ಗಳನ್ನು ಸಂಪೂರ್ಣ ನಿಷಿದ್ಧ. ರ್ಯಾಲಿಯಲ್ಲಿ ಪಾಲ್ಗೊಳ್ಳುವ ಜೀಪು, ಕಾರುಗಳಷ್ಟೇ ಅಲ್ಲ ದ್ವಿಚಕ್ರ ವಾಹನ ಬೈಕ್‌ಗಳಿಗೂ ಪರವಾನಗಿ ಪಡೆಯಬೇಕು. ಕೇವಲ ಒಂದೇ ವಾಹನಕ್ಕೆ ಮಾತ್ರ ಚುನಾವಣಾ ಪ್ರಚಾರ ಪರವಾನಗಿ, ಸಮಾರಂಭ, ಸಮಾರಂಭಗಳಲ್ಲಿ ಊಟಕ್ಕೂ ಇಲ್ಲ ಪರವಾನಗಿ, ನೀರು ಮಜ್ಜಿಗೆ ಮಾತ್ರ ಕೊಡಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಸೇನಾ ಸಿಬ್ಬಂದಿಗೆ ಮಾತ್ರ ಅಂಚೆ ಮತ ಮೂಲಕ ಮತದಾನಕ್ಕೆ ಅವಕಾಶ: ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಹೊರತುಪಡಿಸಿ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸ್ಥಳೀಯ ಅಧಿಕಾರಿ, ಅಗತ್ಯ ಸೇವಾ ಸಿಬ್ಬಂದಿಗೆ ಪೋಸ್ಟಲ್ ಮತಪತ್ರ ಇಲ್ಲ. ಸೇನಾ ಸಿಬ್ಬಂದಿಗೆ ಮಾತ್ರ ಅಂಚೆ ಮೂಲಕ ಮತ ಪತ್ರ ಕಳುಹಿಸಿ ತರಿಸಿಕೊಳ್ಳಲಾಗುವುದು.
ಇನ್ನು ಹೊರ ಜಿಲ್ಲೆಯಿಂದ ಚುನಾವಣಾ ಕರ್ತವ್ಯಕ್ಕೆ ಆಗಮಿಸಿರುವ ಸಿಬ್ಬಂದಿಗೆ ಮತದಾನಕ್ಕೂ ಪೂರ್ವದ 2 ದಿನಗಳ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದ್ದು ಅವರ ಅಂಚೆ ಮತಪತ್ರಗಳನ್ನು ತರಿಸಿಕೊಂಡು ಸಿಬ್ಬಂದಿ ಸೌಲಭ್ಯ ಕೇಂದ್ರದಲ್ಲಿಯೇ ಇಡಲಾಗುವ ಮತಪೆಟ್ಟಿಗೆಯಲ್ಲಿ ಮತದಾನದ ಅವಕಾಶ ಇರುತ್ತದೆ. ಮತದಾನ ಮಾಡದೇ ಇರುವವರ ಮತ ಪತ್ರಗಳನ್ನು ವಾಪಸ್ ಕಳುಹಿಸಲಾಗುವುದು ಎಂದು ತಿಳಿಸಿದರು.ಸಾರ್ವಜನಿಕ, ಖಾಸಗಿ ಸ್ಥಳಗಳಲ್ಲಿ ಕಟೌಟ್, ಬ್ಯಾನರ್ ಅಳವಡಿಸುವಂತಿಲ್ಲ: ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಸಮಾರಂಭ, ಸಮಾವೇಶ ಆಯೋಜಿಸುವ ಸ್ಥಳದಲ್ಲಿ ಮಾತ್ರ ಕಟೌಟ್, ಬ್ಯಾನರ್, ಬಂಟಿಂಗ್‌ಗಳನ್ನು ಅಳವಡಿಸಿಕೊಳ್ಳಬಹುದು. ಸಮಾವೇಶದ ಒಂದು ಗಂಟೆ ಮುಂಚೆ ಅಳವಡಿಸಿ ಕಾರ್ಯಕ್ರಮ ಮುಗಿದ ಒಂದು ಗಂಟೆಯೊಳಗಾಗಿ ಅವುಗಳನ್ನು ತೆರವುಗೊಳಿಸಬೇಕು.
ಬೈಕ್‌ಗಳಿಗೂ ಪರವಾನಗಿ ಬೇಕು: ರ್‍ಯಾಲಿಯಲ್ಲಿ ಪಾಲ್ಗೊಳ್ಳುವ ಜೀಪು, ಕಾರುಗಳಷ್ಟೇ ಅಲ್ಲ, ಬೈಕ್‌ಗಳಿಗೂ ಪರವಾನಗಿ ಪಡೆಯಬೇಕು. 10ಕ್ಕಿಂತ ಹೆಚ್ಚು ವಾಹನಗಳಿಗೆ ರ್‍ಯಾಲಿಯಲ್ಲಿ ಪಾಲ್ಗೊಳ್ಳಬೇಕಿದ್ದಲ್ಲಿ 100 ಮೀ. ಅಂತರ ಬಿಟ್ಟು ಮತ್ತೇ 10 ವಾಹನಗಳನ್ನು ಬಳಸಬಹುದು. ಹಾಗೆಯೇ ಈ ಬಾರಿ ಬೈಕ್‌ಗಳಿಗೂ ಪರವಾನಗಿ ಪಡೆಯಬೇಕು. ವಾಹನಗಳ ಮೇಲೆ ರಾಜಕೀಯ ವ್ಯಕ್ತಿಗಳ ಫೋಟೋ, ಚಿಹ್ನೆ ಮತ್ತಿತರವನ್ನು ಬಳಸಿದ್ದರೆ ತೆಗೆದು ಹಾಕಬೇಕು.ಸಭೆ, ಸಮಾರಂಭಗಳಲ್ಲಿ ಊಟ ನೀಡುವಂತಿಲ್ಲ, ನೀರು, ಮಜ್ಜಿಗೆಗೆ ಅಡ್ಡಿಯಿಲ್ಲ: ಸಭೆ, ಸಮಾರಂಭಗಳಲ್ಲಿ ಊಟಕ್ಕೂ ಇಲ್ಲ ಪರವಾನಗಿ, ನೀರು ಮಜ್ಜಿಗೆ ಮಾತ್ರ ಕೊಡಬಹುದು. ತಮ್ಮ ಪಕ್ಷದ ಕಚೇರಿ ಮತ್ತು ಮನೆಗಳಲ್ಲಿ ಅಂದರೆ ನಾಲ್ಕು ಗೋಡೆಗಳ ಮಧ್ಯೆ ಊಟಕ್ಕೆ ಪರವಾನಗಿ ಇದೆ.
ಪ್ರಯಾಣದಲ್ಲಿ, 50ಸಾವಿರ ನಗದು, 10ಸಾವಿರ ಮೌಲ್ಯದ ಚಿನ್ನಕ್ಕೆ ಮಾತ್ರ ಓಕೆ: ಇನ್ನು ಒಬ್ಬ ವ್ಯಕ್ತಿ 50 ಸಾವಿರ ರು.ಗಳಿಗಿಂತ ಹೆಚ್ಚಿನ ನಗದು ಮತ್ತು 10 ಸಾವಿರ ರು.ಗಳಿಗಿಂತ ಹೆಚ್ಚಿನ ಚಿನ್ನದ ಸಾಮಗ್ರಿಗಳನ್ನು ಸಾಗಿಸುವಂತಿಲ್ಲ. ಬ್ಯಾಂಕ್‌ಗಳು ತನ್ನ ಹಣ ಸಾಗಾಣಿಕೆ ವಾಹನಗಳಿಗೆ ಕ್ಯೂಆರ್ ಕೋಡ್ ಲಗತ್ತಿಸಿ ಕಳುಹಿಸುವುದು ಕಡ್ಡಾಯ. ಇಲ್ಲವಾದಲ್ಲಿ ಅಂಥ ವಾಹನಗಳನ್ನು ಹಾಗೂ ನಗದನ್ನು ಜಪ್ತಿ ಮಾಡಲಾಗವುದು ಎಂದು ತಿಳಿಸಿದರು.ಮುದ್ರಣ ಮಾಧ್ಯಗಳಲ್ಲಿ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿ ಬೇಕಿಲ್ಲ: ಮುದ್ರಣ ಮಾಧ್ಯಮಗಳಲ್ಲಿ ಮೇ 5ರ ವರೆಗೆ ಜಾಹೀರಾತು ಪ್ರಕಟಿಸಲು ಯಾವುದೇ ಪರವಾನಗಿ ಬೇಕಿಲ್ಲ. ದೃಶ್ಯ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಲು ಆಯಾ ಅಭ್ಯರ್ಥಿಗೆ ಚುನಾವಣಾಧಿಕಾರಿಗಳ ಪೂರ್ವಾನುಮತಿ ಅಗತ್ಯ. ಇನ್ನು ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವ ಮೇ 7ರ ಸಂಜೆ 6ಕ್ಕಿಂತ 24ಗಂಟೆ ಮೊದಲು ಅಂದರೆ ಮೇ 5ರ ಸಂಜೆ 5ರ ನಂತರ ಮುದ್ರಣ ಮಾಧ್ಯಮವೂ ಪೂರ್ವಾನುಮತಿ ಪಡೆದ ಜಾಹೀರಾತನ್ನೇ ಪ್ರಕಟಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್ ಹಾಗೂ ಜಿಪಂ ಸಿಇಒ ಗಿರೀಶ ದಿಲೀಪ ಬದೋಲೆ ಇದ್ದರು.