ಸಾರಾಂಶ
ಬೀದರ್‌ನಲ್ಲಿ ಎಟಿಎಂಗೆ ತುಂಬಲು ಒಯ್ಯುತ್ತಿದ್ದ 93 ಲಕ್ಷ ರು. ಹಣ ಲೂಟಿ ಮಾಡಿದ್ದಲ್ಲದೆ, ಆ ಹಣದ ಬಗ್ಗೆ ಕೇಳಿದ್ದ ಹೈದರಾಬಾದ್‌ನ ಸಾರಿಗೆ ಸಂಸ್ಥೆಯೊಂದರ ಮ್ಯಾನೇಜರ್ ಮೇಲೆ ಗುಂಡು ಹಾರಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲು ತೆಲಂಗಾಣ ಪೊಲೀಸರು ತಂಡ ರಚಿಸಿ ಶೋಧ ಆರಂಭಿಸಿದ್ದಾರೆ.
ಹೈದರಾಬಾದ್ : ಬೀದರ್‌ನಲ್ಲಿ ಎಟಿಎಂಗೆ ತುಂಬಲು ಒಯ್ಯುತ್ತಿದ್ದ 93 ಲಕ್ಷ ರು. ಹಣ ಲೂಟಿ ಮಾಡಿದ್ದಲ್ಲದೆ, ಆ ಹಣದ ಬಗ್ಗೆ ಕೇಳಿದ್ದ ಹೈದರಾಬಾದ್‌ನ ಸಾರಿಗೆ ಸಂಸ್ಥೆಯೊಂದರ ಮ್ಯಾನೇಜರ್ ಮೇಲೆ ಗುಂಡು ಹಾರಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲು ತೆಲಂಗಾಣ ಪೊಲೀಸರು ತಂಡ ರಚಿಸಿ ಶೋಧ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಬಿಹಾರದವರು ಎಂದು ತಿಳಿದುಬಂದಿದೆ.
ಜ.16ರಂದು ಬೀದರ್‌ನಲ್ಲಿ ಎಸ್‌ಬಿಐ ಎಟಿಎಂಗೆ ಹಣ ತುಂಬಲು ಬಂದಿದ್ದ ಇಬ್ಬರ ಮೇಲೆ ಲೂಟಿಕೋರರು ಗುಂಡು ಹಾರಿಸಿ 93 ಲಕ್ಷ ರು. ಕೊಳ್ಳೆ ಹೊಡೆದಿದ್ದರು. ಗುಂಡೇಟು ತಿಂದಿದ್ದ ಇಬ್ಬರ ಪೈಕಿ ಒಬ್ಬರು ಮೃತಪಟ್ಟಿದ್ದರು. ಬೀದರ್‌ನಲ್ಲಿ ಲೂಟಿ ಬಳಿಕ ಹೈದರಾಬಾದ್‌ನಲ್ಲಿ ಇವರು ಪತ್ತೆಯಾಗಿದ್ದರು. ಅಲ್ಲಿಂದ ಛತ್ತೀಸ್‌ಗಢದ ರಾಯ್‌ಪುರಕ್ಕೆ ಪರಾರಿ ಆಗಲು ಬಸ್ ಬುಕ್ ಮಾಡಿದ್ದರು. ಆಗ ಇವರ ಬ್ಯಾಗ್‌ನಲ್ಲಿನ ಹಣವನ್ನು ಸಾರಿಗೆ ಸಂಸ್ಥೆ ಮ್ಯಾನೇಜರ್ ಗಮನಿಸಿದಾಗ, ಅವರ ಮೇಲೂ ಗುಂಡು ಹಾರಿಸಿ ಪರಾರಿಯಾಗಿದ್ದರು.
ಇದರ ಬೆನ್ನಲ್ಲೇ ಬೀದರ್ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ತಂಡ ಹೈದರಾಬಾದ್ ತಲುಪಿದ್ದು, ತನಿಖೆಯಲ್ಲಿ ಸಹಕರಿಸುತ್ತಿದೆ. ನಗರ ಪೊಲೀಸರು 10 ತಂಡ ರಚಿಸಿ ರಾಜ್ಯಾದ್ಯಂತ ಶೋಧ ನಡೆಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಅಲರ್ಟ್ ಘೋಷಿಸಲಾಗಿದೆ. ಛತ್ತೀಸಗಢ ಪೊಲೀಸರಿಗೂ ಶಂಕಿತರ ಫೋಟೋಗಳನ್ನು ಒದಗಿಸಿ ಮಾಹಿತಿ ನೀಡಲಾಗಿದೆ.