ಸಾರಾಂಶ
ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದ ಮಗಳನ್ನು ತಂದೆ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಔರಾದ್ ತಾಲೂಕಿನ ವಡಗಾಂವ್ ಸಮೀಪದ ಬರಗೇನ್ ತಾಂಡಾದಲ್ಲಿ ನಡೆದಿದೆ
ಔರಾದ್ : ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದ ಮಗಳನ್ನು ತಂದೆ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಔರಾದ್ ತಾಲೂಕಿನ ವಡಗಾಂವ್ ಸಮೀಪದ ಬರಗೇನ್ ತಾಂಡಾದಲ್ಲಿ ನಡೆದಿದೆ.
ಕುಟುಂಬಸ್ಥರು ತೋರಿಸಿದ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಕೆರಳಿದ ಮೋತಿರಾಮ್ ಜಾಘವ್ ಮನೆಯಲ್ಲಿ ಯಾರೂ ಇರದ ಸಮಯದಲ್ಲಿ ಅಡುಗೆ ಮಾಡುತ್ತಿದ್ದ ಮಗಳು ಮೋನಿಕಾ (19)ಳ ಕತ್ತನ್ನು ಹಗ್ಗದಿಂದ ಬಿಗಿದು, ಕಟ್ಟಿಗೆಯಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಕುಟುಂಬದರು ತಾವು ತೋರಿಸಿದ ಯುವಕನೊಂದಿಗೆ ಮದುವೆ ಮಾಡಿಕೊಳ್ಳಲು ಒತ್ತಡ ಹೇರಿದಾಗ ತಾನೊಬ್ಬ ಯುವಕನ ಪ್ರೀತಿ ಮಾಡುತ್ತಿದ್ದು ಆತನನ್ನೇ ಮದುವೆ ಆಗುವುದಾಗಿ ಮೋನಿಕಾ ಹಠ ಹಿಡಿದಿದ್ದಳೆನ್ನಲಾಗಿದೆ. ಈ ಸಂಬಂಧ ಶುಕ್ರವಾರ ತಂದೆ ಮಗಳೊಂದಿಗೆ ಜಗಳವಾಗಿದೆ. ಕೋಪದಲ್ಲಿ ಮೋತಿರಾಮ್ ಮಾರಣಾಂತಿಕ ಹಲ್ಲೆ ನಡೆಸಿ ಕೊಂದು ಪರಾರಿಯಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಔರಾದ್ ಸಿಪಿಐ ರಘುವೀರ್ ಸಿಂಗ್ ಠಾಕೂರ್, ಸಂತಪೂರ ಪಿಎಸ್‌ಐ ನಂದಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.