ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಕರ್ನಾಟಕದ ಶೈಕ್ಷಣಿಕ ಪ್ರಗತಿಯಲ್ಲಿ ಬೀದರ್ ಜಿಲ್ಲೆಯ ಪಾತ್ರ ಅತ್ಯಮೂಲ್ಯವಾಗಿದೆ ಎಂಬುವದೀಗ ಸ್ಪಷ್ಟವಾಗಿದ್ದು ನೀಟ್ ಪರೀಕ್ಷೆಯಲ್ಲಿ ಜಿಲ್ಲೆಯ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿರುವದು ಸಾಕ್ಷಿಯಾಗಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್ ಖದೀರ್ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ನೀಟ್‌ನಲ್ಲಿ 600ಕ್ಕಿಂತ ಹೆಚ್ಚು ರ್‍ಯಾಂಕ್ ಪಡೆದಿರುವ ಅತೀ ಹೆಚ್ಚು ವಿದ್ಯಾರ್ಥಿಗಳ ಪಟ್ಟಿಯಲ್ಲಿ ಬೀದರ್ ಮೂರನೇ ಸ್ಥಾನ ಪಡೆದಿರುವ ಕುರಿತಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರುಗಳು ಸಂಯುಕ್ತವಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅತೀ ಹೆಚ್ಚು ನೀಟ್ ಪ್ರತಿಭಾನ್ವಿತರ ಪೈಕಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದರೆ ಮಂಗಳೂರು ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನ ಬೀದರ್ ಜಿಲ್ಲೆಗೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಮತ್ತಷ್ಟು ಒತ್ತು ಕೊಟ್ಟು ಬೀದರ್ ನಂಬರ್ ಒನ್ ಮಾಡುವ ಪ್ರಯತ್ನ ಮಾಡುತ್ತೇವೆ ಎಂದರು.600ರಿಂದ 720 ಶ್ರೇಣಿಯಲ್ಲಿ ಅಂಕಗಳನ್ನು ಗಳಿಸಿದ 4302 ವಿದ್ಯಾರ್ಥಿಗಳ ಪೈಕಿ 1457 ವಿದ್ಯಾರ್ಥಿಗಳು ಬೆಂಗಳೂರು ನಗರದಿಂದ ಬಂದಿದ್ದಾರೆ. ಎರಡನೇ ಸ್ಥಾನದಲ್ಲಿ ಮಂಗಳೂರು ಜಿಲ್ಲೆಯ 621 ವಿದ್ಯಾರ್ಥಿಗಳು ಹಾಗೂ ಮೂರನೇ ಸ್ಥಾನದಲ್ಲಿ ಬೀದರ್ ಜಿಲ್ಲೆ ಇದ್ದು ಇಲ್ಲಿನ ಸುಮಾರು 309 ವಿದ್ಯಾರ್ಥಿಗಳು ಇದ್ದಾರೆ. ಇದು ಹೆಮ್ಮೆಯ ವಿಷಯವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಕಲ್ಪಿಸುವಲ್ಲಿ ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಅಲ್ಲದೆ ಬೀದರ್ ಶಾಹೀನ್ ಶಿಕ್ಷಣ ಸಂಸ್ಥೆಯು ವೈದ್ಯಕೀಯ ಶಿಕ್ಷಣಕ್ಕಷ್ಟೇ ಅಲ್ಲ ಇತರ ಶೈಕ್ಷಣಿಕ ಕೋರ್ಸಗಳನ್ನೂ ಆರಂಭಿಸಿದ್ದು ಎಲ್ಲ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಪ್ರಗತಿಯತ್ತ ಸಾಗಲಿ ಎಂಬ ಚಿಂತನೆ ಹೊಂದಿದೆ ನಕಲು ರಹಿತ ಪರೀಕ್ಷೆಗೆ ಎಲ್ಲ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿ ಪಾಲಕರು ಪಣ ತೊಟ್ಟಲ್ಲಿ ಇದು ಸಾಧ್ಯ ಎಂದು ಅಬ್ದುಲ್ ಖದೀರ್ ತಿಳಿಸಿದರು.ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ ಮಾತನಾಡಿ, ನಮ್ಮ ಕರ್ನಾಟಕ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕಡಿಮೆ ಶುಲ್ಕದಲ್ಲಿ ಉತ್ತಮ ಸೌಲಭ್ಯಗಳೊಂದಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ಪದವಿ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನ್ಯಾಕ್ ಕಮಿಟಿಯಿಂದ ಎ+ ಪಡೆದ ಕಾಲೇಜು ಇದಾಗಿದೆ. ಹೆಚ್ಚು ಹಣ ನೀಡುತ್ತೇವೆ ಗೈರಾಗಿದ್ದರೂ ಪ್ರವೇಶ ಕೊಡಿ ಎಂದು ವಿದ್ಯಾರ್ಥಿಗಳು ಬೇಡಿಕೊಂಡಡರೂ ಅದಕ್ಕೆ ನಾವು ಒಪ್ಪುವುದಿಲ್ಲ ಎಂದರು.
ಹೈದ್ರಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ ವಾಲಿ ಮಾತನಾಡಿ, ಬಿವಿಬಿ ಕಾಲೇಜಿನಲ್ಲಿ ಸೈನಿಕ ಶಾಲೆ ಆರಂಭ ಮಾಡಲಾಗಿದೆ. ಈ ಶಾಲೆಯ ಮೂಲಕ ಬೀದರ್ ಜಿಲ್ಲೆಯನ್ನು ರಾಷ್ಟ್ರದಲ್ಲಿ ನಂ.1 ಸ್ಥಾನಕ್ಕೆ ತರು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಪೂರ್ಣೀಮಾ ಜಾರ್ಜ್ ಮಾತನಾಡಿ, ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆಯಲು ಬೇರುಮಟ್ಟದ ಶಿಕ್ಷಣ ಅತ್ಯಂತ ಪ್ರಮುಖ ಪಾತ್ರಧಾರಿ. ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣದ ಹಂತದಲ್ಲಿಯೇ ಜ್ಞಾನಸುಧಾ ವಿದ್ಯಾಲಯ ಅತ್ಯುತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುತ್ತಿರುವದು ಹೆಮ್ಮೆಯ ವಿಚಾರ. ನಮ್ಮಲ್ಲಿ ಅಭ್ಯಶಿಸಿದ ವಿದ್ಯಾರ್ಥಿನಿ ಲಂಡನ್ ಸ್ಕೂಲ್‌ನಲ್ಲಿ ಪ್ರವೇಶ ಪಡೆದಿದ್ದು ನಮಗೆಲ್ಲ ಹೆಮ್ಮೆ. ಹೀಗೆಯೇ ಜಿಲ್ಲೆಯ ಹಲವಾರು ಶಿಕ್ಷಣ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಇದಕ್ಕೆ ಈಗ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗಿದೆ ಎಂದರು.
ನೀಟ್ ಅಕ್ರಮವನ್ನ ಎನ್‌ಟಿಎ ಹಾಗೂ ಕೇಂದ್ರ ಸರ್ಕಾರ ಹೊರಬೇಕು:ವಿಜಡಂ ಸಂಸ್ಥೆಯ ಅಧ್ಯಕ್ಷ ಆಸಿಫೋದ್ದಿನ್ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಉತ್ತಮವಾಗಿ ಶಿಕ್ಷಣ ನೀಡಿದರೆ ಕಾಲೇಜು ವಿಭಾಗದಲ್ಲಿ ಉತ್ತಮ ಫಲಿತಾಂಶ ತೆಗೆಯಲು ಅನುಕೂಲವಾಗುತ್ತದೆ. ಈ ಕುರಿತು ಚಿಂತನ ಮಂಥನ ಆಗುವ ಅವಶ್ಯಕತೆ ಇದೆ. ನೀಟ್ ಪರೀಕ್ಷೆಯಲ್ಲಿ ಆಗಿರುವ ಅಕ್ರಮದ ಹೊಣೆಯನ್ನು ಕೇಂದ್ರ ಸರ್ಕಾರ ಹೊರಬೇಕು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆಗ್ರಹಿಸಿದರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಅನುಭವ ಮಂಟಪ ಬಸವಕಲ್ಯಾಣದ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಶೈಕ್ಷಣಿಕ ಪ್ರಗತಿಗೆ ವಿದ್ಯಾರ್ಥಿಗಳಲ್ಲಿ ತುಡಿತ ಹೆಚ್ಚಾಗಬೇಕು, ಪ್ರತಿಯೊಂದು ಶಿಕ್ಷಣ ಸಂಸ್ಥೆಯ ಗುರಿ ವಿದ್ಯಾರ್ಥಿಯ ಅತ್ಯುತ್ತಮ ಜ್ಞಾನಾರ್ಜನೆ ಆಗಬೇಕು ಎಂದು ತಿಳಿಸಿದರು.