ಬೀದರ್‌: ರಸ್ತೆ ಬದಿ ಅತಿಕ್ರಮಣ ತೆರವಿಗೆ ಚುರುಕು

| Published : Jul 03 2024, 12:16 AM IST

ಬೀದರ್‌: ರಸ್ತೆ ಬದಿ ಅತಿಕ್ರಮಣ ತೆರವಿಗೆ ಚುರುಕು
Share this Article
  • FB
  • TW
  • Linkdin
  • Email

ಸಾರಾಂಶ

ಸಂಚಾರ ದಟ್ಟಣೆ, ಪಾದಚಾರಿಗಳಿಗೆ ಕಿರಿ ಕಿರಿ ಹಿನ್ನೆಲೆ ನಗರಸಭೆಯಿಂದ ರಸ್ತೆ ಅತಿಕ್ರಮಿತ ಶೆಡ್‌, ಠಿಕಾಣಿ ಹೂಡಿದ ಬಂಡಿಗಳ ತೆರವು. ನಗರದ ಗುಂಪಾ ರಸ್ತೆ, ಮೈಲೂರು ರಸ್ತೆ, ಉದಗೀರ್‌ ರಸ್ತೆ (ಪಾಪನಾಶ ವರೆಗೆ), ಚಿದ್ರಿ ವೃತ್ತದ ಮಾರ್ಗದಲ್ಲಿನ ಅತಿಕ್ರಮಣವನ್ನು ತೆರವುಗೊಳಿಸಲಾಗಿದ್ದು ಇನ್ನು ನೌಬಾದ್‌ ಪ್ರದೇಶ ಹಾಗೂ ಓಲ್ಡ್‌ ಸಿಟಿಯಲ್ಲಿನ ಅತಿಕ್ರಮಣ ತೆರವು ಬಾಕಿಯಿದೆ ಎಂದು ನಗರಸಭೆ ಆಯುಕ್ತರಾದ ಶಿವರಾಜ ರಾಠೋಡ್‌ ಕನ್ನಡಪ್ರಭಕ್ಕೆ ಮಾತನಾಡಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯಾದ್ಯಂತ ರಸ್ತೆಯನ್ನು, ಸಾರ್ವಜನಿಕ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡಿದ್ದ ಶೆಡ್‌ಗಳು, ಮೇಲ್ಛಾವಣಿಗಳನ್ನು ತೆರವುಗೊಳಿಸುವಲ್ಲಿ ಸ್ಥಳೀಯ ಸಂಸ್ಥೆಗಳು ಚುರುಕಾಗಿ ಕಾರ್ಯನಿರ್ವಹಿಸಿದ್ದು ಬೀದರ್‌ ನಗರದಲ್ಲಿಯೇ ನೂರಾರು ಅತಿಕ್ರಮಣ ತೆರವುಗೊಳಿಸುವ ಮೂಲಕ ನಗರಸಭೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಬೀದರ್‌ ನಗರದ ಗುಂಪಾ ರಸ್ತೆ, ಮೈಲೂರು ರಸ್ತೆ, ಉದಗೀರ್‌ ರಸ್ತೆ (ಪಾಪನಾಶ ವರೆಗೆ), ಚಿದ್ರಿ ವೃತ್ತದ ಮಾರ್ಗದಲ್ಲಿನ ಅತಿಕ್ರಮಣವನ್ನು ತೆರವುಗೊಳಿಸಲಾಗಿದ್ದು ಇನ್ನು ನೌಬಾದ್‌ ಪ್ರದೇಶ ಹಾಗೂ ಓಲ್ಡ್‌ ಸಿಟಿಯಲ್ಲಿನ ಅತಿಕ್ರಮಣ ತೆರವು ಬಾಕಿಯಿದೆ ಎಂದು ನಗರಸಭೆ ಆಯುಕ್ತರಾದ ಶಿವರಾಜ ರಾಠೋಡ್‌ ಕನ್ನಡಪ್ರಭಕ್ಕೆ ಮಾತನಾಡಿ ತಿಳಿಸಿದ್ದಾರೆ.

ರಸ್ತೆ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಿಕೊಡಲಿ: ತಳ್ಳು ಬಂಡಿಗಳ ವ್ಯಾಪಾರಿಗಳಿಗಾಗಿ ನಗರದಲ್ಲಿ ಪ್ರತ್ಯೇಕ ಸ್ಥಳ ಗುರುತಿಸಿ ಅವರಿಗೂ ವ್ಯಾಪಾರೋದ್ಯಮ ನಡೆಸಲು ಅನುಕೂಲ ಕಲ್ಪಿಸಬೇಕಿದೆ. ತಳ್ಳುಬಂಡಿಗಳನ್ನು ನಿತ್ಯವೂ ತಮ್ಮ ತಮ್ಮ ಮನೆಗೆ ವಾಪಸ್‌ ಕೊಂಡೊಯ್ಯುವದು ಕಷ್ಟದ ಕೆಲಸವೇನೋ ಹೌದು ಹೀಗಾಗಿ ಅಂಥ ವ್ಯಾಪಾರಸ್ಥರಿಗಾಗಿಯೇ ಮಹಾನಗರಗಳ ಮಾದರಿಯಲ್ಲಿ ಫುಡ್‌ ಕೋರ್ಟ್‌ಗಳಂತೆ ಸ್ಥಳ ನಿಗದಿಪಡಿಸಿ ಅದಕ್ಕೆ ಇಂತಿಷ್ಟು ಶುಲ್ಕ ವಿಧಿಸಿದಲ್ಲಿ ಅವರಿಗೂ ಅನುಕೂಲ ಸಾರ್ವಜನಿಕರಿಗೂ ಅನುಕೂಲವಾಗುವುದು.

ಅಕ್ರಮವಾಗಿ ಅತಿಕ್ರಮಣದಿಂದಲೋ ಚಪ್ಪಲಿ ರಿಪೇರಿ, ಸಿಹಿತಿನಿಸು, ಜ್ಯೂಸ್‌ ಅಂಗಡಿ, ಪಾನಿಪುರಿ, ಹಣ್ಣುಗಳ ವ್ಯಾಪಾರದಂಥ ಸಣ್ಣ ಪುಟ್ಟ ವ್ಯಾಪಾರಿಗಳು ನಿತ್ಯದ ಹೊಟ್ಟೆಪಾಡಿಗಾಗಿ ಹಾಕಿಕೊಂಡಿರುವ ಚಿಕ್ಕ ಚಿಕ್ಕ ಶೆಡ್‌ಗಳು, ತಳ್ಳುಬಂಡಿಗಳ ನಿತ್ಯದ ವಹಿವಾಟು ಇಲ್ಲದಿದ್ದಲ್ಲಿ ಊಟಕ್ಕೂ ಪರದಾಡುವ ಸ್ಥಿತಿ ಬಂದಲ್ಲಿ ಅಚ್ಚರಿಯಿಲ್ಲ. ಇಂಥವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವತ್ತ ನಗರಸಭೆ ಚಿಂತನೆ ನಡೆಸಬೇಕಿದೆ.

ಹುಮನಾಬಾದ್‌ ಫುಟ್ಪಾತ್‌ ಅತಿಕ್ರಮಣ ತೆರವು ಕಾರ್ಯಾಚರಣೆ: ರಸ್ತೆ ಬದಿಗಳಲ್ಲಿನ ಪಾದಚಾರಿ ರಸ್ತೆ ಅತಿಕ್ರಮಿಸಿಕೊಂಡಿದ್ದ ಅಂಗಡಿಗಳನ್ನು, ಶೆಡ್‌ ಹಾಗೂ ಠಿಕಾಣಿ ಹೂಡಿದ್ದ ತಳ್ಳು ಗಾಡಿಗಳನ್ನು ಮಂಗಳವಾರ ಬೆಳ್ಳಂಬೆಳಗ್ಗೆ ತೆರವುಗೊಳಿಸುವ ಕಾರ್ಯಾಚರಣೆ ಹುಮನಾಬಾದ್‌ ಪಟ್ಟಣದಲ್ಲಿ ಜರುಗಿತು.

ಪೊಲೀಸರ ಸಮ್ಮುಖದಲ್ಲಿ ಪಟ್ಟಣದ ಡಾ. ಅಂಬೇಡ್ಕರ್‌ ವೃತ್ತದಿಂದ ಸರದಾರ ಪಟೇಲ್‌ ವೃತ್ತ, ಬಾಲಾಜಿ ಮಂದಿರ, ಬಸವೇಶ್ವರ ವೃತ್ತದ ವರೆಗೆ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪುರಸಭೆ ಹಾಗೂ ಕಂದಾಯ ಇಲಾಖೆ ಫುಟ್ಪಾತ್‌ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿ ಅವರು ಅಂಗಡಿಗಳ ಮುಂದೆ ನಿರ್ಮಿಸಿಕೊಂಡ ಮೇಲ್ಛಾವಣಿಗಳನ್ನು ಎರಡು ಜೆಸಿಬಿಗಳಿಂದ ತೆರವುಗೊಳಿಸಿದರು. ಜೊತೆಗೆ ಅಂಗಡಿಗಳ ಮುಂದೆ ಹಾಕಿದ್ದ ಶೆಲ್ಟರ್‌ ಮತ್ತಿತರ ವಸ್ತುಗಳನ್ನು ತೆರವುಗೊಳಿಸಿದರು.

ಪಾದಚಾರಿಗಳಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ಅಡ್ಡಲಾಗಿ ಅಂಗಡಿ ಮಾಲೀಕರು ವಸ್ತುಗಳನ್ನು ಇಡುತ್ತಿರುವುದರಿಂದ ಜನರು ತಿರುಗಾಡುವುದು ಕಷ್ಟವಾಗುತ್ತದೆ. ಅಲ್ಲದೆ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಇರುವುದರಿಂದ ವಾಹನ ಸವಾರರಿಗೂ ಕಿರಿಕಿರಿಯಾಗುತ್ತಿದೆ. ಆದ್ದರಿಂದ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಕಿರಿಕಿರಿ ಉಂಟಾಗುವಂತೆ ಹಾಕಿರುವ ಎಲ್ಲಾ ವಸ್ತುಗಳನ್ನು ತೆಗೆಯುವಂತೆ ಸೂಚಿಸಿದರು.

ಈ ಮಧ್ಯೆ ಹುಮನಾಬಾದ್‌ ಪೊಲೀಸ್ ಠಾಣೆಯಿಂದ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇನ್ಮುಂದೆ ಫುಟ್‌ಪಾತ್‌ ಮೇಲೆ ವ್ಯಾಪಾರ ಮಾಡಿದರೆ, ದಂಡ ವಿಧಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮುಖ್ಯಾಧಿಕಾರಿ ಅನೀಲಕುಮಾರ ಕುಲಕರ್ಣಿ ವ್ಯಾಪಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ತಹಸೀಲ್ದಾರ್‌ ಅಂಜುಮ್‌ ತಬಸುಮ್‌, ಮುಖ್ಯಾಧಿಕಾರಿ ಅನೀಲಕುಮಾರ ಕುಲಕರ್ಣಿ, ಸಿಪಿಐ ಗುರುಲಿಂಗಪ್ಪಗೌಡ ಪಾಟೀಲ್‌, ಪಿಎಸ್‌ಐ ತಿಮ್ಮಯ್ಯ, ಸಂಚಾರ ಪಿಎಸ್‌ಐ ಬಸವಲಿಂಗಪ್ಪ, ಕಂದಾಯ ನಿರೀಕ್ಷಕ ರಾಹುಲ್‌ ಪ್ರಸಾದ, ಮಲ್ಲಯ್ಯ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಪೊಲೀಸ್‌ ಸಿಬ್ಬಂದಿ ಇದ್ದರು.