ಸಾರಾಂಶ
ಗುಣಮಟ್ಟದ ಶಿಕ್ಷಣದಲ್ಲಿ ಹೆಸರು ಮಾಡಿರುವ ಬೀದರ್ ಶಾಹೀನ್ ಗ್ರೂಪ್ ವತಿಯಿಂದ ಮಂಗಳೂರಿನಲ್ಲಿ ಶೆಫರ್ಡ್ ಸಂಸ್ಥೆಯ ಸಹಯೋಗದಲ್ಲಿ ತನ್ನ ಪ್ರಥಮ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲಿದೆ.
ಕನ್ನಡಪ್ರಭ ವಾರ್ತೆ ಮಂಗಳೂರುಗುಣಮಟ್ಟದ ಶಿಕ್ಷಣದಲ್ಲಿ ಹೆಸರು ಮಾಡಿರುವ ಬೀದರ್ ಶಾಹೀನ್ ಗ್ರೂಪ್ ವತಿಯಿಂದ ಮಂಗಳೂರಿನಲ್ಲಿ ಶೆಫರ್ಡ್ ಸಂಸ್ಥೆಯ ಸಹಯೋಗದಲ್ಲಿ ತನ್ನ ಪ್ರಥಮ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲಿದೆ ಎಂದು ಶಾಹೀನ್ ಗ್ರೂಪ್ ಸ್ಥಾಪಕ ಡಾ.ಅಬ್ದುಲ್ ಖಾದರ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮಂಗಳೂರಿನ ಅರ್ಕುಳದ 3.6 ಎಕರೆ ಪ್ರದೇಶದಲ್ಲಿ ಶೆಫರ್ಡ್ಸ್ ಶಾಹೀನ್ ಸಂಸ್ಥೆ ಕಾರ್ಯಾಚರಿಸಲಿದೆ. ಹೊಸ ಕ್ಯಾಂಪಸ್‌ನಲ್ಲಿ ಪರಿಸರ ಸ್ನೇಹಿ ವ್ಯವಸ್ಥೆಯಲ್ಲಿ ಉನ್ನತ ದರ್ಜೆ, ಆಧುನಿಕ ಸೌಲಭ್ಯಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು.ಕರ್ನಾಟಕದ ಬೀದರ್‌ನಲ್ಲಿ 1989 ರಲ್ಲಿ 17 ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಶಾಹೀನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಇಂದು, ಭಾರತದ 13 ರಾಜ್ಯಗಳಲ್ಲಿ ಹಲವಾರು ಶಾಲೆಗಳು, ಪಿಯು ಕಾಲೇಜುಗಳು ಮತ್ತು ಪದವಿ ಕಾಲೇಜುಗಳನ್ನು ನಿರ್ವಹಿಸುತ್ತದೆ ಮತ್ತು ಸೌದಿ ಅರೇಬಿಯಾದಲ್ಲಿ ಶಾಖೆಯನ್ನು ಹೊಂದಿದೆ. ಭಾರತ ಮತ್ತು ವಿದೇಶದಾದ್ಯಂತ 105 ಶಾಖೆಗಳನ್ನು ಹೊಂದಿರುವ ಶಾಹೀನ್ 40,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.ಶಾಹೀನ್ ಗ್ರೂಪ್ ವಿಶೇಷವಾಗಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಲ್ಲಿ 2008 ರಿಂದ, 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿ ಬೀಸ್ ಸೀಟುಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಅನೇಕ ಎಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಲ್ಲಿ ಪ್ರವೇಶವನ್ನು ಪಡೆದುಕೊಂಡಿದ್ದಾರೆ. ಪ್ರತಿ ವರ್ಷ, ಶಾಹೀನ್ ವಿದ್ಯಾರ್ಥಿಗಳು ಭಾರತದಲ್ಲಿನ ಒಟ್ಟು ಸರ್ಕಾರಿ ಎಂಬಿಬಿಎಸ್ ಸೀಟುಗಳಲ್ಲಿ ಶೇ.1 ಮತ್ತು ಕರ್ನಾಟಕದಲ್ಲಿ ಶೇ. 15 ಸರ್ಕಾರಿ ಎಂಬಿಬಿಎಸ್ ಸೀಟುಗಳನ್ನು ಪಡೆದುಕೊಳ್ಳುತ್ತಾರೆ ಎಂದವರು ವಿವರಿಸಿದರು.
ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ನಿಸಾರ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಿಜ್ವಾನ್, ಕೋಶಾಧಿಕಾರಿ ಸಾಜಿದ್ ಎ. ಕೆ., ಟ್ರಸ್ಟಿಗಳಾದ ಮೊಹಮ್ಮದ್ ಫಾರೂಕ್, ನೌಶಾದ್ ಎ. ಕೆ., ಶಾಹೀನ್ ಗ್ರೂಪ್‌ನ ರೀಜಿನಲ್ ಮುಖ್ಯಸ್ಥ ಶೇಕ್ ಶಫೀಕ್ ಇದ್ದರು.