ಸಾರಾಂಶ
ಧಾರವಾಡ: ಬೀದರ್‌ನಲ್ಲಿ ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ₹ 93 ಲಕ್ಷ ದರೋಡೆ ಮಾಡುತ್ತಿರುವುದು ಹಾಗೂ ಉಳ್ಳಾಲದಲ್ಲಿ ಬ್ಯಾಂಕ್ ದರೋಡೆ ( ₹ 12 ಕೋಟಿಗೂ ಹೆಚ್ಚು) ನಡೆದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು ಅವಳಿ ನಗರದಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.
ನಗರದ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಎಸಿಪಿ ಪ್ರಶಾಂತ ಸಿದ್ದನಗೌಡರ ನೇತೃತ್ವದಲ್ಲಿ ಬ್ಯಾಂಕ್ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ, ಎಟಿಎಂ ಸೆಕ್ಯೂರಿಟಿ ಗಾರ್ಡ್ ಹಾಗೂ ಎಟಿಎಂ ಹಣ ಹಾಕುವ ಸಿಬ್ಬಂದಿಗಳ ಸಭೆ ನಡೆಯಿತು.
ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರತಿಯೊಬ್ಬರು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಎಟಿಎಂಗೆ ಹಣ ಸಾಗಿಸುವಾಗ ಅನುಸರಿಸಬೇಕಾದ ಜಾಗೃತಿಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಲು ಎಸಿಪಿ ಪ್ರಶಾಂತ ಸಿದ್ದನಗೌಡರ ಸೂಚಿಸಿದರು. ದೊಡ್ಡ ಪ್ರಮಾಣದಲ್ಲಿ ಹಣದ ವರ್ಗಾವಣೆ ನಡೆಯುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ ಸಿಬ್ಬಂದಿ ನಿಯೋಜನೆ ಅಗತ್ಯವಿದ್ದರೆ ನೀಡಲಾಗುವುದು. ಯಾವುದೇ ರೀತಿಯಲ್ಲೂ ಅಧಿಕಾರಿಗಳು ಕರ್ತವ್ಯ ಲೋಪ ಎಸಗದೇ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಎಲ್ಲ ಬ್ಯಾಂಕ್ ಎಟಿಎಂಗಳಿಗೆ ಸೂಕ್ತ ಭದ್ರತಾ ಸಿಬ್ಬಂದಿಯನ್ನು ಬ್ಯಾಂಕ್ ಮಾಡಬೇಕು. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಿಗೆ ಹಣದ ವರ್ಗಾವಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆದು ಮುನ್ನಚ್ಚರಿಕೆ ವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳ ಕುರಿತು ಸದಾ ಜಾಗರೂಕತೆ ಹೊಂದಬೇಕು. ಏನಾದರೂ ಸಮಸ್ಯೆ ಎದುರಾಗುವ ಸಂದರ್ಭದಲ್ಲಿ 112ಗೆ ಕರೆ ಮಾಡಿ ಎಂದು ಜಾಗೃತಿ ಮೂಡಿಸಿದರು.
ಸೆಕ್ಯೂರಿಟಿ ಎಜೆನ್ಸಿ ಹಾಗೂ ಸಿಬ್ಬಂದಿ ಬಹಳಷ್ಟು ಎಚ್ಚರದಿಂದ ಇರಬೇಕು. ಸುರಕ್ಷಾ ಕ್ರಮ ಹಾಗೂ ಸೆಕ್ಯೂರಿಟಿ ಬಳಸುವ ಆಯುಧಗಳ ಕುರಿತು ಬಹಳಷ್ಟು ಗಮನ ಹರಿಸಿ, ಅವರು ಬಳಸುವ ಪಿಸ್ತೂಲ್, ಸಿಬ್ಬಂದಿ ಮೇಲೆ ಇರುವ ದೂರು ಹಾಗೂ ಇನ್ನಿತರ ಮಾಹಿತಿ ಜತೆಗೆ ತಮ್ಮ ವೈಯಕ್ತಿಕ ಎಲ್ಲ ದಾಖಲೆಗಳನ್ನು ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳು ಪೊಲೀಸ್ ಇಲಾಖೆಗೆ ನೀಡಬೇಕು ಎಂದು ತಿಳಿಸಿದರು.
ಈ ವೇಳೆ ಧಾರವಾಡ ಉಪನಗರ ಪೊಲೀಸ್ ಠಾಣೆಯ ಸಿಪಿಐ ದಯಾನಂದ ಶೇಗುಣಸಿ, ವಿದ್ಯಾಗಿರಿ ಸಿಪಿಐ ಸಂಗಮೇಶ ದಿಡದನಾಳ, ಶಹರ ಠಾಣೆಯ ನಾಗೇಶ ಕಾಡದೇವರಮಠ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಬ್ಯಾಂಕ್ ಸಿಬ್ಬಂದಿ ಇದ್ದರು.