ಪ್ರಸಕ್ತ ವರ್ಷ ಬಿದರಿ ಉತ್ಸವ ಹಾಗೂ ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬರುವ ಡಿಸೆಂಬರ್ 12 ಮತ್ತು 13ರಂದು ಇಲ್ಲಿನ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲು ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆ ನಿರ್ಧರಿಸಿದೆ.
ಕನ್ನಡಪ್ರಭ ವಾರ್ತೆ ಬೀದರ್
ಪ್ರಸಕ್ತ ವರ್ಷ ಬಿದರಿ ಉತ್ಸವ ಹಾಗೂ ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬರುವ ಡಿಸೆಂಬರ್ 12 ಮತ್ತು 13ರಂದು ಇಲ್ಲಿನ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲು ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆ ನಿರ್ಧರಿಸಿದೆ.ಈ ಕುರಿತಂತೆ ನಡೆದ ಸಭೆಯಲ್ಲಿ ನಿರ್ದಾರ ಕೈಗೊಳ್ಳಲಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಬಿದರಿ ಉತ್ಸವ ಹಾಗೂ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸುತ್ತಾ ಬಂದಿರುವ ಬಿದರಿ ಸಾಂಸ್ಕೃತಿಕ ವೇದಿಕೆಯು ಪ್ರಸಕ್ತ ವರ್ಷಾಂತ್ಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬಿದರಿ ಉತ್ಸವ -2026 ಆಯೋಜಿಸಲು ಯೋಜಿಸಲಾಗಿದೆ ಎಂದು ಬಿದರಿ ವೇದಿಕೆಯ ಅಧ್ಯಕ್ಷೆ ರೇಖಾ ಸೌದಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಲೇಖಕಿ ಭಾರತಿ ವಸ್ತ್ರದ್ ಹಾಗೂ ಪುಣ್ಯವತಿ ವಿಸಾಜಿ ಅವರು, ಬಿದರಿ ಉತ್ಸವ ಜಿಲ್ಲೆಯ ಹೆಮ್ಮೆಯಾಗಿ ಮಾರ್ಪಟ್ಟಿದೆ, ಹಿರಿಯ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲು ನಿರ್ಧರಿಸಿರುವುದು ಸೂಕ್ತವಾಗಿದೆ ಎಂದರು.ಬಿದರಿ ಉತ್ಸವದ ಅಂಗವಾಗಿ 16ರಿಂದ 20 ವರ್ಷದೊಳಗಿನ ವಯೋಮಿತಿಯೊಳಗಿನವರಿಗೆ ಸುಗಮ ಸಂಗೀತ ಸ್ಪರ್ಧೆಯನ್ನು ಆಯೋಜಿಸುವ ಕುರಿತಾಗಿ ಜನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಅವರು ಪ್ರಸ್ತಾಪಿಸಿದಾಗ ಅದಕ್ಕೆ ಬಾಬುರಾವ್ ದಾನಿ, ಶಿವಕುಮಾರ ಕಟ್ಟೆ, ಶರಣಪ್ಪ ಬಿರಾದರ್, ಓಂಪ್ರಕಾಶ ದಡ್ಡೆ, ಅರವಿಂದ ಕುಲಕರ್ಣಿ ಹಾಗೂ ಪೃಥ್ವಿರಾಜ್ ಅವರು ಸಹಮತ ವ್ಯಕ್ತಪಡಿಸಿದರು.
ಇನ್ನು ಬಿದರಿ ರಾಜ್ಯ ಮಟ್ಟದ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿ ಶೀಘ್ರದಲ್ಲಿ ಸಂಭಾವ್ಯರ ಪಟ್ಟಿಯನ್ನು ನೀಡಲಿದ್ದು, ತದನಂತರ ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ವೇದಿಕೆಯು ತಿಳಿಸಿದಾಗ, ಸಭೆಯಲ್ಲಿ ಉಪಸ್ಥಿತರಿದ್ದ ಸುಬ್ರಹ್ಮಣ್ಯ ಪ್ರಭು, ದೇವಿದಾಸ ಜೋಷಿ, ಸುನೀಲ ಕುಲಕರ್ಣಿ, ಶಿವಕುಮಾರ ಕೋತ್ಮೀರ್ ಹಾಗೂ ರತೀನ್ ಕಮಲ, ವೀರಭದ್ರಪ್ಪ ಉಪ್ಪಿನ ಅವರುಗಳು ಶೀಘ್ರದಲ್ಲಿ ಅದಕ್ಕೆ ಅಂತಿಮ ರೂಪ ನೀಡಬೇಕು, ಹಿರಿಯ ಕಲಾವಿದರನ್ನು ಆಯ್ಕೆ ಮಾಡಲು ಮುಂದಾಗುವಂತೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ಪತ್ರಕರ್ತರ ಸಂಘಧ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಅವರು ಮಾತನಾಡಿ, ಈ ಬಾರಿಯ ಬಿದರಿ ಉತ್ಸವದಲ್ಲಿ ಸಂಗೀತ ಸಂಜೆಗೆ ಮತ್ತಷ್ಟು ಮೆರಗು ತರುವಂಥ ಕಲಾವಿದರನ್ನು ಕರೆಯಿಸಲು ಸಲಹೆಯಿತ್ತರು. ಸಭೆಯಲ್ಲಿ ಶಿಖರೇಶ್ವರ, ಮುಕ್ರಂಖಾನ್, ರಾಜು ಮಣಿಗೇರಿ ಅವರು ಉಪಸ್ಥಿತರಿದ್ದರು.