ನಗರದಲ್ಲಿ ಧರೆಗೆ ದೊಡ್ಡವರ ಕೊಂಡೋತ್ಸವ

| Published : May 03 2025, 12:18 AM IST

ಸಾರಾಂಶ

ಚಾಮರಾಜನಗರದ ಉಪ್ಪಾರ ಬಡಾವಣೆಯಲ್ಲಿ ಧರೆಗೆ ದೊಡ್ಡವರು ಮಂಟೇಸ್ವಾಮಿ ದೇವಸ್ಥಾನದ ಮುಂಭಾಗ ಕೊಂಡೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ಉಪ್ಪಾರ ಬಡಾವಣೆಯಲ್ಲಿ ಧರೆಗೆ ದೊಡ್ಡವರು ಮಂಟೇಸ್ವಾಮಿ ದೇವಸ್ಥಾನದ ಮುಂಭಾಗ ಶುಕ್ರವಾರ ಧರೆಗೆ ದೊಡ್ಡವರ ಮಂಟೇಸ್ವಾಮಿ ಕೊಂಡೋತ್ಸವ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ನಡೆಯಿತು.

ಕೊಂಡೋತ್ಸವಕ್ಕೆ ದೇವಸ್ಥಾನದ ಮುಂಭಾಗ ಇರುವ ಕೊಂಡದ ಗುಂಡಿಯ ಬಳಿ ಜೋಡಿಸಲಾಗಿದ್ದ ಭಾರಿ ಸೌದೆಗೆ ಗುರುವಾರ ರಾತ್ರಿ ಬೆಂಕಿ ಹಾಕಲಾಯಿತು. ಶುಕ್ರವಾರ ೧೨.೨೦ ರಿಂದ ೧-೧೫ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ದೇವರ ಕಂಡಾಯ ಹೊತ್ತವರು ಕೊಂಡ ಹಾಯುತ್ತಿದ್ದಂತೆ ಭಕ್ತ ಸಮೂಹ ಧರೆಗೆ ದೊಡ್ಡವರ ಪಾದಕ್ಕೆ ನಮೋ ಎಂದು ಹರ್ಷದ್ಗೋರ ವ್ಯಕ್ತಪಡಿಸಿದರು.

ಕಳೆದ ಮೂರು ವರ್ಷಗಳಿಂದ ಕೊಂಡೋತ್ಸವ ನಡೆದಿರಲಿಲ್ಲ, ಆದ್ದರಿಂದ ಈ ಬಾರಿ ಅದ್ಧೂರಿಯಿಂದ ಕೊಂಡೋತ್ಸವ ನಡೆಸಲಾಯಿತು. ಶಾಸಕ ಸಿ.ಪುಟ್ಟರಂಗಶೆಟ್ಟಿ ಬಡಾವಣೆಗೆ ಭೇಟಿ ನೀಡಿ, ದೇವರ ದರ್ಶನ ಪಡೆದರು. ದೇವಸ್ಥಾನದ ಮುಂಭಾಗ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನುಗಳನ್ನು ಆಧುನಿಕ ವಿದ್ಯುತ್ ದೀಪಗಳಿಂದ ಅಲಂಕರಿಸಿ ರಾತ್ರಿ ವೇಳೆ ಕಂಗೊಳಿಸುವಂತೆ ಮಾಡಲಾಗಿತ್ತು,

ಗುರುವಾರ ಸಂಜೆ ಸಮಾಜದ ಕುಲಸ್ಥರು ಮತ್ತು ಸತ್ತಿಗೆ ಸೂರ ಪಾನಿಗಳನ್ನು ಭವ್ಯವಾಗಿ ಸ್ವಾಗತಿಸಿದರು, ಶುಕ್ರವಾರ ಬೆಳಗ್ಗೆ ಕಂಡಾಯಗಳನ್ನು ಹೊತ್ತು, ಡೊಡ್ಡರಸಿನ ಕೊಳದ ಬಳಿ ತೆರಳೀ, ಅಲ್ಲಿ ವಿಶೇಷ ಪೂಜೆ ಸಲ್ಲಿಸಿಸಲಾಯಿತು. ವಿವಿಧ ಜಾನಪದ ಕಲಾತಂಡಗಳು, ಮಂಟೇಸ್ವಾಮಿ ಗುಡ್ಡರು, ಸತ್ತಿಗೆ ಸೂರಪಾನಿ, ನಾದಸ್ವಾರಗಳೊಂದಿಗೆ ಕಂಡಾಯ ಮೆರವಣಿಗೆ ನಡೆಯಿತು,

ಮೆರವಣಿಗೆಯು ಕೊಳದ ಬೀದಿ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ ಮೂಲಕ ಮಂಟೇಸ್ವಾಮಿ ದೇವಸ್ಥಾನದ ಬಳಿ ಇರುವ ಕೊಂಡದ ಗುಳಿ ಬಳಿ ಬರುತ್ತಿದ್ದಂತೆ ಅಲ್ಲಿ ಕಂಡಾಯ ಹೊತ್ತವರು ಕೊಂಡ ಹಾಯ್ದರು, ನಂತರ ದೇವಸ್ಥಾನದಲ್ಲಿ ಮಹಾಮಂಗಳಾರತಿ ನಡೆದು, ನೆಂಟರಿಷ್ಟರಿಗೆ ವಿವಿಧ ಬಗೆಯ ಅಡುಗೆ ಮಾಡಿ ಬಡಿಸಲಾಯಿತು. ಸಂಜೆ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಯಿತು.