ಯುವ ಶಕ್ತಿಯಿಂದಲೇ ಸಮಾಜದಲ್ಲಿ ದೊಡ್ಡ ಪರಿವರ್ತನೆ ಸಾಧ್ಯ

| Published : Jan 13 2024, 01:39 AM IST

ಯುವ ಶಕ್ತಿಯಿಂದಲೇ ಸಮಾಜದಲ್ಲಿ ದೊಡ್ಡ ಪರಿವರ್ತನೆ ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಯುವ ಶಕ್ತಿಯಿಂದಲೇ ಸಮಾಜದಲ್ಲಿ ದೊಡ್ಡ ಪರಿವರ್ತನೆ ಸಾಧ್ಯ. ಯುವಕರು ದೇಶಪ್ರೇಮ ಮೈಗೊಡಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವಿಶ್ವಗುರು ಭಾರತ ಮಾಡಲು ಸಂಕಲ್ಪ ಮಾಡಬೇಕು.

ಬೀದರ್‌: ಯುವ ಶಕ್ತಿಯಿಂದಲೇ ಸಮಾಜದಲ್ಲಿ ದೊಡ್ಡ ಪರಿವರ್ತನೆ ಸಾಧ್ಯ. ಯುವಕರು ದೇಶಪ್ರೇಮ ಮೈಗೊಡಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವಿಶ್ವಗುರು ಭಾರತ ಮಾಡಲು ಸಂಕಲ್ಪ ಮಾಡಬೇಕು ಎಂದು ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕರೂ ಆದ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಶೈಲೇಂದ್ರ ಬೆಲ್ದಾಳೆ ಕರೆ ನೀಡಿದರು.

ಬೀದರ್ ನಗರದ ಶಿವನಗರದಲ್ಲಿರುವ ರಾಮಕೃಷ್ಣನ ವಿವೇಕಾನಂದ ಆಶ್ರಮದ ವಿವೇಕ ಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾಮಿ ವಿವೇಕಾನಂದರ ಚಿಂತನೆಗಳ ಅಳ‍ವಡಿಕೆಯಿಂದ ಅದ್ಭುತ ಸಾಧನೆ ಖಚಿತ. ಚಿಂತನೆಗಳು ಯಾವೊಂದು ಜಾತಿ, ಧರ್ಮ, ಸಮುದಾಯಕ್ಕೆ ಸೀಮಿತವಲ್ಲ. ಹೀಗಾಗಿ ವಿವೇಕಾನಂದರನ್ನು ಜಾತಿಗೆ ಸೀಮಿತಗೊಳಿಸುವುದು ಬೇಡ, ಸಶಕ್ತ ಭಾರತ, ಸಮೃದ್ಧ ಸಮಾಜ ಕಟ್ಟಲು ಅವರ ಮಾರ್ಗದಲ್ಲಿ ಸಾಗೋಣ ಎಂದರು.

ವಿವೇಕಾನಂದರು ಹಾಗೂ ರಾಮಕೃಷ್ಣರು ಅಧ್ಯಾತ್ಮ ಶಕ್ತಿಯ ಕಣ್ಣುಗಳು:

ಸ್ವಾಮಿ ವಿವೇಕಾನಂದರು ಹಾಗೂ ಅವರ ಗುರುಗಳಾದ ರಾಮಕೃಷ್ಣ ಪರಮಹಂಸರು ಎರಡು ಮಹಾಶಕ್ತಿಗಳು ಮಾತ್ರವಲ್ಲ, ಭಾರತದ ಅಧ್ಯಾತ್ಮ ಶಕ್ತಿಯ ಎರಡು ಕಣ್ಣುಗಳಾಗಿದ್ದಾರೆ. ಭಾರತವನ್ನು ಅರಿಯಬೇಕಾದರೆ ಮೊದಲು ಸ್ವಾಮಿ ವಿವೇಕಾನಂದರನ್ನು ತಿಳಿದುಕೊ ಎಂದು ರವೀಂದ್ರನಾಥ ಟ್ಯಾಗೋರ್‌ ಹೇಳಿರುವ ಮಾತು ಇಂದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.

ಭಾವನೆಗೆ ತಕ್ಕಂತೆ ಬುದ್ಧಿ, ಮನಸ್ಸು ಹಾಗೂ ದೇಹ ಕೆಲಸ ಮಾಡುತ್ತದೆ:

ದಿವ್ಯ ಸಾನ್ನಿಧ್ಯ ವಹಿಸಿದ್ದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜರು ಮಾತನಾಡಿ, ಸ್ವಾಮಿ ವಿವೇಕಾನಂದರು ನಮ್ಮ ಶಕ್ತಿಯನ್ನು ಅರಿತು ದೊಡ್ಡ ಸಾಧನೆ ಮಾಡಲು ಸರಳ ಉಪಾಯ ಹೇಳಿಕೊಟ್ಟಿದ್ದಾರೆ ಅವುಗಳನ್ನು ನಾವು ಅರಿಯಬೇಕು. ಭಾವನೆಗೆ ತಕ್ಕಂತೆ ಬುದ್ಧಿ, ಮನಸ್ಸು ಹಾಗೂ ದೇಹ ಕೆಲಸ ಮಾಡುತ್ತದೆ ಎಂದರು.

ಆತ್ಮಶಕ್ತಿ ಎಲ್ಲಕಿಂತ ದೊಡ್ಡದು. ಸಂಘರ್ಷವಿಲ್ಲದ ಬದುಕಿಲ್ಲ. ವಿವೇಕ ಚಿಂತನೆ ಪ್ರತಿಯೊಬ್ಬರಿಗೆ ಹೊಸತನ, ಹೊಸ ಜೀವನ ನೀಡುತ್ತದೆ. ಭಾರತ ಇಂದು ಬದಲಾಗುತ್ತಿರುವುದಕ್ಕೆ ವಿವೇಕ ಚಿಂತನೆಯೇ ಪ್ರೇರಣೆ ಹಾಗೂ ಕಾರಣವಾಗಿದೆ. ವಿವೇಕಾನಂದರ ದೃಷ್ಟಿಯಲ್ಲಿ ಧರ್ಮ ಎಂದರೆ ಯಾವುದೋ ಜಾತಿ, ಪೂಜೆಗೆ ಸೀಮಿತವಲ್ಲ. ನಮಗೆ ಶಕ್ತಿ ತುಂಬಿ, ಉತ್ಸಾಹ ತುಂಬಿ, ಪರರ ಬಗ್ಗೆ ಪ್ರೀತಿ ಕೊಡುವುದೇ ನಿಜವಾದ ಧರ್ಮವಾಗಿದೆ. ವಿವೇಕಾನಂದರ ವಿಚಾರಧಾರೆ ವ್ಯಾಪಕವಾಗಿ ಜನಮಾನಸಕ್ಕೆ ಮುಟ್ಟಿಸುವ ಕೆಲಸ ಆಶ್ರಮ ಮಾಡುತ್ತಿದೆ ಎಂದರು.

ಕಲಬುರಗಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ ಅವರು ಮಾತನಾಡಿ, ಯುವಜನಾಂಗ ಬದಲಾವಣೆಗೆ ಒಗ್ಗಿಕೊಂಡು ಸಕಾರಾತ್ಮಕ ಚಿಂತನೆಯಲ್ಲಿ ಹೆಜ್ಜೆ ಹಾಕಬೇಕು ವಿವೇಕಾನಂದರ ಸಾಹಿತ್ಯ ಓದಿದರೆ ಪ್ರೇರಣೆ ಸಿಗಲಿದೆ. ಬೇಕಾದಂಥ ಸಾಧನೆ ಮಾಡಲು ಸರಳ ಮಾರ್ಗ ದೊರಕಲಿದೆ ಎಂದು ಹೇಳಿದರು.

ನೌಬಾದ್‌ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ.ಜಯಶ್ರೀ ಪ್ರಭಾ, ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಬಗದಲ್‌ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ಚನ್ನಬಸವ ಹೇಡೆ, ಹಿರಿಯ ನ್ಯಾಯವಾದಿ ಅಂಬುಜಾ ವಿಶ್ವಕರ್ಮ, ಹಿರಿಯ ಸಿವಿಲ್‌ ಎಂಜಿನಿಯರ್ ಹಾವಶೆಟ್ಟಿ ಪಾಟೀಲ್‌, ಯುವ ಸಂಘಟನೆಗಳ ಮುಖಂಡ ವಿರೂಪಾಕ್ಷ ಗಾದಗಿ, ಜಯಪ್ರಕಾಶ ಪೊದ್ದಾರ್‌ ಇದ್ದರು. ಹಿರಿಯ ಪತ್ರಕರ್ತ ಸದಾನಂದ ಜೋಶಿ ಸ್ವಾಗತಿಸಿ ಆಶ್ರಮದ ಸ್ವಯಂಸೇವಕ ಶಿವಕಾಂತ ಪಾಟೀಲ್‌, ವಿದ್ಯಾರ್ಥಿ ಸಂದೇಶ ಯುವ ದಿನಾಚರಣೆ ನಿಮಿತ್ತ ಅನಿಸಿಕೆ ಹಂಚಿಕೊಂಡರು. ಮಾದರಿ ಗೋಶಾಲೆಗೆ ಸಹಕಾರ ನೀಡಲು ಬೆಲ್ದಾಳೆ ಕರೆ

ಬೀದರ್‌ನ ರಾಮಕೃಷ್ಣ ವಿವೇಕಾನಂದ ಆಶ್ರಮ ದ್ವಿದಶಮಾನೋತ್ಸವದ ಸಂಭ್ರಮದಲ್ಲಿದೆ. ಆಶ್ರಮದ ಅಧ್ಯಕ್ಷರಾದ ಜ್ಯೋತಿರ್ಮಯಾನಂದ ಮಹಾರಾಜ ಅವರು ಗಡಿ ಜಿಲ್ಲೆಗೆ ನೀಡುತ್ತಿರುವ ಕೊಡುಗೆ ಅಪಾರ ಹಾಗೂ ಅವಿಸ್ಮರಣೀಯವಿದೆ. 6 ವರ್ಷಗಳ ಹಿಂದೆ ಇಲ್ಲಿ ಗೋಶಾಲೆ ಆರಂಭಿಸಿ ಅನೇಕ ಕಷ್ಟ-ನಷ್ಟದ ನಡುವೆಯೂ ಮಾದರಿಯಾಗಿ ನಡೆಸುತ್ತಿರುವುದು ಶ್ಲಾಘನೀಯ. ಎಲ್ಲರೂ ಈ ಪವಿತ್ರ ಕೆಲಸಕ್ಕೆ ಸಹಕಾರ ನೀಡಬೇಕು. ಗೋ ಸೇವೆ ಮಾಡುವ ಮೂಲಕ ಪುಣ್ಯ ಕಟ್ಟಿಕೊಳ್ಳಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮನವಿ ಮಾಡಿದರು.