ಸಾರಾಂಶ
ಮಾದಕ ವಸ್ತುಗಳ ಸೇವನೆಯಿಂದ ದೂರ ಇದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು.
ಮರಿಯಮ್ಮನಹಳ್ಳಿ: ಯುವ ಜನಾಂಗ ಆರಂಭದಲ್ಲಿ ಸಂತೋಷ, ವಿನೋದಕ್ಕಾಗಿ ಮಾದಕ ದ್ರವ್ಯ ಸೇವನೆ ಆರಂಭಿಸುತ್ತಾರೆ. ಅದು ಮುಂದೆ ಚಟವಾಗಿ ಬದುಕನ್ನೇ ನಾಶ ಮಾಡುವ ಮಟ್ಟಕ್ಕೆ ಬೆಳೆದು ನಿಲ್ಲುತ್ತದೆ. ಈ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಸೇವನೆಯಿಂದ ದೂರ ಇದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ಮೌನೇಶ್ ರಾಥೋಡ್ ಹೇಳಿದರು.
ಇಲ್ಲಿನ ಜಿಟಿಟಿಸಿ ಕಾಲೇಜಿನಲ್ಲಿ ಪೋಲಿಸ್ ಠಾಣೆಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ದೇಶದ ಆಧಾರಸ್ತಂಭಗಳಂತಿರುವ ಯುವಜನತೆ ಜಾಗೃತರಾಗಿರಬೇಕು. ಮಾದಕ ದ್ರವ್ಯ ವ್ಯಸನದಿಂದ ನಾನಾ ರೋಗಗಳು ಬರುತ್ತವೆ. ದುಶ್ಚಟಗಳಿಂದ ಯುವಕರು ದೂರವಿರಬೇಕು. ಮಾದಕ ದ್ರವ್ಯ ಸೇವನೆ ಮಾಡದಂತೆ ಜನರಿಗೆ ತಿಳಿವಳಿಕೆ ನೀಡಬೇಕು ಎಂದು ಅವರು ಹೇಳಿದರು.
ಉತ್ತಮ ಸಮಾಜ ಕಟ್ಟಲು ವಿದ್ಯಾರ್ಥಿಗಳ ಪಾತ್ರ ದೊಡ್ಡದು. ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಯುವಕರ ಮೇಲೆ ಸಮಾಜದ ದೊಡ್ಡ ಜವಾಬ್ದಾರಿ ಇದೆ. ಜನರು ಮೆಚ್ಚುವಂತಹ ಕೆಲಸದಲ್ಲಿ ಯುವಕರು ತೊಡಗಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಮಾಜಕ್ಕೆ ಮಾರಕವಾಗದ ರೀತಿಯಲ್ಲಿ ಬದುಕು ಸಾಗಿಸುವ ಮೂಲಕ ಉತ್ತಮ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಅವರು ಹೇಳಿದರು.ಕಾಲೇಜಿನ ಪ್ರಾಚಾರ್ಯ ಅಂಜನಕುಮಾರ್, ಉಪನ್ಯಾಸಕರಾದ ವಿನುತಾ, ಹರೀಶ್ ಉಪಸ್ಥಿತರಿದ್ದರು.
ನಂತರ ಪಿಎಸ್‌ಐ ಬೀಬಿ ಮರೇಮ್ ನೇತೃತ್ವದಲ್ಲಿ ಪಟ್ಟಣದ ವಿವಿಧ ಶಾಲೆಗಳ ವಿಧ್ಯಾರ್ಥಿಗಳಿಂದ ಪಟ್ಟಣದ ಮುಖ್ಯಬೀದಿಗಳಲ್ಲಿ ಅಂತರ ರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆಯ ಜಾಗೃತಿ ಜಾಥಾ ನಡೆಸಿದರು.