ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ನಗರದಲ್ಲಿ ೨೩ರ ಶುಕ್ರವಾರ ಪಕ್ಷಾತೀತವಾಗಿ ರಾಷ್ಟ್ರೀಯ ರಕ್ಷಣೆಗಾಗಿ ನಾಗರೀಕರು ಎಂಬ ಘೋಷ ವಾಕ್ಯದೊಂದಿಗೆ ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಧುಗಿರಿ ವಿಭಾಗದ ಮಾಜಿ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ನಮ್ಮ ದೇಶದ ಹೆಮ್ಮೆಯ ಸೈನಿಕರು ನಮ್ಮ ಮಾತೆಯರ, ಸಹೋದರಿಯರ ಸಿಂದೂರವನ್ನು ಅಳಿಸಿದ ಪಾಪಿ ಪಾಕಿಸ್ತಾನದ ಭಯೋತ್ಪದಕರನ್ನು ಆಪರೇಷನ್ ಸಿಂಧೂರ ಎಂಬ ಘೋಷ ವಾಕ್ಯದೊಂದಿಗೆ ಪಾಕಿಸ್ತಾನದಲ್ಲಿ ಅಡಗಿದ್ದ ೯ ಅಡಗು ತಾಣಗಳ ಮೇಲೆ ದಾಳಿ ಮಾಡಿ ಸುಮಾರು ೧೦೦ಕ್ಕೂ ಹೆಚ್ಚು ಉಗ್ರರನ್ನು ಸಂಹರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಬೃಹತ್ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಬೆಳಗ್ಗೆ ೧೦ ಗಂಟೆಗೆ ನಗರದ ಅಂಬೇಡ್ಕರ್ ಸರ್ಕಲ್ ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಾಗುವುದು ಎಂದರು. ನಗರ ಬಿಜೆಪಿ ಅಧ್ಯಕ್ಷ ಗಿರಿಧರ್ ಮಾತನಾಡಿ ಭಾರತೀಯ ಹೆಮ್ಮೆಯ ಸೈನಿಕರು ಪಾಕಿಸ್ತಾನದ ವಾಯು ನೆಲೆಗಳನ್ನು ದ್ವಂಸ ಮಾಡಿ ಭಯೋತ್ಪಾದಕರನ್ನು ಸದೆಬಡಿದಿದ್ದಾರೆ. ಭಾರತದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಯೋತ್ಪಾದನೆ ಬೆಂಬಲಿಸುವವರಿಗೆ ಉಳಿಗಾಲವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನಿಡಿದ್ದಾರೆ. ಇಡೀ ವಿಶ್ವಕ್ಕೆ ಭಾರತದ ಶಕ್ತಿ ಸಾಮರ್ಥ್ಯವನ್ನು ಅನಾವರಣಗೊಳಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಭಾರತೀಯ ಸೈನ್ಯದೊಂದಿಗೆ ರಾಷ್ಟ್ರ ರಕ್ಷಣೆಗೆ ನಾವೆಲ್ಲರೂ ಜೊತೆಯಾಗಬೇಕಿದೆ. ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕರು ಭಾಗವಹಿಸಬೇಕೆಂದು ಮನವಿ ಮಾಡಿದರು. ಮಧುಗಿರಿ ವಿಭಾಗದ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ನಗರಸಭಾ ಸದಸ್ಯೆ ಉಮಾ ವಿಜಯರಾಜ್ ಮಾತನಾಡಿ ಬೃಹತ್ ತಿರಂಗಾ ಯಾತ್ರೆಗೆ ಎಲ್ಲಾ ನಾಗರೀಕರೂ ಪಕ್ಷಾತೀತವಾಗಿ ಭಾಗವಹಿಸಿ ಭಾರತೀಯರೆಲ್ಲವೂ ಒಂದೆ ಎಂದು ಭಾರತೀಯ ಯೋಧರಿಗೆ ಸಂದೇಶ ನೀಡಲು ಹಮ್ಮಿಕೊಂಡಿದ್ದೇವೆ. ಇದಕ್ಕೆ ಎಲ್ಲಾ ಸಂಘಟನೆಗಳು, ಸಾರ್ವಜನಿಕರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಧುಗಿರಿ ವಿಭಾಗದ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಮಾಗೋಡು ಪ್ರತಾಪ್, ಶಿರಾ ಗ್ರಾಮಂತರ ಮಂಡಲ ಬಿಜೆಪಿ ಅಧ್ಯಕ್ಷ ಈರಣ್ಣ ಪಟೇಲ್, ಮಾಜಿ ಅಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಕೊಟ್ಟ ಡಿ.ಪಿ. ರಂಗನಾಥ್, ನಗರಸಭಾ ಸದಸ್ಯ ರಂಗರಾಜು, ಮಾಜಿ ಸದಸ್ಯ ಸಂತೇಪೇಟೆ ನಟರಾಜ್, ಶಾರದಾ ಶಿವಕುಮಾರ್, ಮುಖಂಡರಾದ ಮುರುಳಿ, ಶ್ರೀಧರ್, ಚಿಕ್ಕನಕೋಟೆ ಕರಿಯಣ್ಣ, ಲಕ್ಷ್ಮೀನಾರಾಯಣ, ಬೊಪ್ಪರಾಯಪ್ಪ, ಶಿವಣ್ಣ, ನಟರಾಜ್, ಸುರೇಶ್, ಮಹಿಳಾ ಘಟಕದ ಪದ್ಮ ಮಂಜುನಾಥ್, ನಾಗರತ್ನಮ್ಮ ಸೇರಿದಂತೆ ಹಲವರು ಹಾಜರಿದ್ದರು.