ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಕೆಎಂಸಿ ಆಸ್ಪತ್ರೆ ಆಶ್ರಯದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮಂಗಳೂರು ಶಾಖೆ, ರೋಟರಿ ಕ್ಲಬ್ ಇಂಟರ್‌ನ್ಯಾಷನಲ್ ಮತ್ತು ಕಾರ್ಡಿಯಾಲಜಿ ಸೊಸೈಟಿ ಆಫ್ ಮಂಗಳೂರು ಆಯೋಜನೆಯಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಸೆ.29 ರಂದು ಮಂಗಳೂರಿನಲ್ಲಿ ಬೃಹತ್ ವಾಕಥಾನ್ ಏರ್ಪಡಿಸಲಾಗಿದೆ.ಬೆಳಗ್ಗೆ 6.30ಕ್ಕೆ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆ ಬಳಿಯಿಂದ ವಾಕಥಾನ್ ಹೊರಟು ಬಲ್ಮಠ, ಹಂಪನಕಟ್ಟೆ ಜಂಕ್ಷನ್, ಐಎಂಎ ಹಾಲ್ ಮೂಲಕ ಸಾಗಿ ಕಾಪ್ರಿಗುಡ್ಡ ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಮುಕ್ತಾಯಗೊಳ್ಳಲಿದೆ. ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಾಕಥಾನ್ ಹಾಗೂ ನಗರ ಪೊಲೀಸ್ ಕಮಿಷನರೇಟ್‌ನ ಸಂಚಾರಿ ಡಿಸಿಪಿ ದಿನೇಶ್ ಕುಮಾರ್ ಇವರು ವಾಕಥಾನ್‌ಗೆ ಚಾಲನೆ ನೀಡುವರು. ಖೇಲೋ ಇಂಡಿಯಾ ರಾಷ್ಟ್ರ ಮಟ್ಟದ ಅಥ್ಲೀಟ್ ಆಯುಷ್ ದೇವಾಡಿಗ ವಾಕಥಾನ್ ಜ್ಯೋತಿ ಹಸ್ತಾಂತರಿಸುವರು ಎಂದು ಕೆಎಂಸಿ ಆಸ್ಪತ್ರೆ ಡೀನ್ ಡಾ.ಉನ್ನಿಕೃಷ್ಣನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆಎಂಸಿ ಆಸ್ಪತ್ರೆಯ ಹೃದ್ರೋಗ ವಿಭಾಗ ಮುಖ್ಯಸ್ಥ ಡಾ.ನರಸಿಂಹ ಪೈ ಮಾತನಾಡಿ, ‘ಯೂಸ್ ಹಾರ್ಟ್ ಫಾರ್ ಆ್ಯಕ್ಷನ್’ ಪರಿಕಲ್ಪನೆಯಲ್ಲಿ ಈ ಬಾರಿ ಯುವಕರನ್ನು ಗುರಿಯಾಗಿಸಿ ವಿಶ್ವ ಹೃದಯ ದಿನ ಆಚರಿಸಲಾಗುತ್ತಿದೆ. ಪ್ರಸಕ್ತ 40 ವರ್ಷಕ್ಕಿಂತ ಕಡಿಮೆ ವಯೋಮಾನದವರು ಸಾವಿಗೀಡಾಗುವುದು ಕಂಡುಬರುತ್ತಿವೆ. ಇದಕ್ಕೆ ಒತ್ತಡವೇ ಮೊದಲಾದ ಕಾರಣಗಳಿದ್ದು, ಈ ಬಗ್ಗೆ ತಿಳವಳಿಕೆ ಮೂಡಿಸಲು ವಾಕಥಾನ್ ನಡೆಸಲಾಗುತ್ತಿದೆ. ಸೇವಿಸಿದ ಆಹಾರದ ಕ್ಯಾಲರಿ ವಿನಿಯೋಗ ಆಗಬೇಕು. ಅದಕ್ಕಾಗಿ ನಿತ್ಯವೂ ನಡೆಯುವುದನ್ನು ರೂಢಿಸಿಕೊಳ್ಳಬೇಕು ಎಂದರು.ವಾಕಥಾನ್‌ನಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಭಾಗವಹಿಸುವವರಿಗೆ ಕ್ಯಾಪ್ ಮತ್ತು ಕೆಂಪು ಬಣ್ಣದ ಟೀಶರ್ಟ್ ನೀಡಲಾಗುತ್ತದೆ. ಭಾಗವಹಿರುವವರು 9008167071 ನಂಬರಿಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು ಎಂದರು.
ಇದಕ್ಕೆ ಪೂರ್ವಭಾವಿಯಾಗಿ ಸೆ.28ರಂದು ನಗರದ ಹೊಟೇಲ್ ಅವತಾರ್‌ನಲ್ಲಿ ನಿತ್ಯದ ಆಹಾರ ಪದ್ಧತಿ ಬಗ್ಗೆ ಅರಿವು ಮೂಡಿಸುವ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 4ರಿಂದ ಪೋಸ್ಟರ್ ರಚನೆ, ರೀಲ್ಸ್ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಬಹುಮಾನ ಕೂಡ ನೀಡಲಾಗುವುದು ಎಂದರು.ಹಿರಿಯ ಕಾರ್ಡಿಯಾಲಜಿಸ್ಟ್ ಡಾ.ರಾಜೇಶ್ ಭಟ್ ಮಾತನಾಡಿ, ಹೃದಯದ ಆರೋಗ್ಯಕ್ಕೆ ವ್ಯಾಯಾಮ ಮುಖ್ಯ. ಈಗಿನ ಜೀವನ ಶೈಲಿ, ಒತ್ತಡದ ಬದುಕಿನಿಂದ ಮನುಷ್ಯರಿಗೆ ಅನಾರೋಗ್ಯ ಕಾಡುತ್ತದೆ. ಕೋವಿಡ್ ಬಳಿಕದ ಲಸಿಕೆಯಿಂದ ಹೃದಯಾಘಾತಗಳು ಸಂಭವಿಸುವ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ ಎಂದರು.
ಹಿರಿಯ ಹೃದಯ ತಜ್ಞ ಡಾ. ಹರೀಶ್, ಐಎಂಎ ಅಧ್ಯಕ್ಷ ಡಾ.ರಂಜನ್, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಮತ್ತಿತರರಿದ್ದರು. ವೆನ್ಲಾಕ್ ಆಸ್ಪತ್ರೆಯಲ್ಲಿ ಶೀಘ್ರ ಕ್ಯಾಥ್‌ಲ್ಯಾಬ್ ಸ್ಥಾಪನೆಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಶೀಘ್ರ ಕ್ಯಾಥ್‌ಲ್ಯಾಬ್ ಸ್ಥಾಪಿಸಲಾಗುತ್ತದೆ. ಹೊಸ ಸರ್ಜಿಕಲ್ ಬ್ಲಾಕ್ ಆವರಣದಲ್ಲೇ ಈ ಕ್ಯಾಥ್‌ಲ್ಯಾಬ್ ಕಾರ್ಯನಿರ್ವಹಿಸಲಿದೆ. ಇದಕ್ಕೆ ಬೇಕಾದ ಸಲಕರಣೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಈ ಲ್ಯಾಬ್ ಸುಸಜ್ಜಿತವಾಗಿ ಕಾರ್ಯನಿರ್ವಹಿಸಲಿದೆ. ಅದರ ನಿರ್ವಹಣೆ, ಆಪರೇಟಿಂಗ್ ವ್ಯವಸ್ಥೆಯನ್ನೂ ಕೆಎಂಸಿಯೇ ಮಾಡಲಿದೆ ಎಂದು ಡೀನ್ ಉನ್ನಿಕೃಷ್ಣನ್ ಸ್ಪಷ್ಡಪಡಿಸಿದರು.