ಸಾರಾಂಶ
ಸ್ವಾತಂತ್ರ್ಯ ಹೋರಾಟಗಾರ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಮುಂದಾಳತ್ವದಲ್ಲಿ ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗೆದ್ದು ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ವಿಜಯ ಧ್ವಜ ಹಾರಿಸಿ, 13 ದಿನಗಳ ಕಾಲ ಆಡಳಿತ ನಡೆಸಿದ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ತುಳುನಾಡ ಅಮರ ಸುಳ್ಯ ಸಮರ 1837 ಸಂಸ್ಮರಣೆ ಸಲುವಾಗಿ ನಗರದ ಬಾವುಟಗುಡ್ಡೆಯ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯ ಮುಂಭಾಗ ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ, ಹುತಾತ್ಮರಿಗೆ ಗೌರವ ನಮನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮಂಗಳೂರುಬಾವುಟಗುಡ್ಡೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ಧ್ವಜಸ್ತಂಭವನ್ನು ನಿರ್ಮಾಣ ಮಾಡಲಾಗುವುದು. ಸುಮಾರು 100 ಅಡಿಗೂ ಹೆಚ್ಚಿನ ಎತ್ತರದ ಧ್ವಜಸ್ತಂಭ ನಿರ್ಮಾಣ ಮಾಡುವ ಮೂಲಕ ದೇಶಪ್ರೇಮ ಪ್ರೇರೇಪಿಸುವ ಕೆಲಸ ಮಾಡುತ್ತೇವೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಎಂದು ದಿನೇಶ್ ಗುಂಡೂ ರಾವ್ ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಮುಂದಾಳತ್ವದಲ್ಲಿ ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗೆದ್ದು ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ವಿಜಯ ಧ್ವಜ ಹಾರಿಸಿ, 13 ದಿನಗಳ ಕಾಲ ಆಡಳಿತ ನಡೆಸಿದ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ತುಳುನಾಡ ಅಮರ ಸುಳ್ಯ ಸಮರ 1837 ಸಂಸ್ಮರಣೆ ಸಲುವಾಗಿ ನಗರದ ಬಾವುಟಗುಡ್ಡೆಯ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯ ಮುಂಭಾಗ ಶನಿವಾರ ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಿ ಅವರು ಮಾತನಾಡಿದರು.ವೀರರ ಸ್ಮರಣೆ ಮಾಡುವ ಮೂಲಕ ನಮ್ಮ ದೇಶದ ಸಂಸ್ಕೃತಿ, ಪರಂಪರೆ ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ವೀರರ ತ್ಯಾಗ ಬಲಿದಾನವನ್ನು ಮರೆಯಬಾರದು ಎಂದರು.
ಅಧ್ಯಕ್ಷತೆ ವಹಿಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಕೆದಂಬಾಡಿ ರಾಮಯ್ಯ ಗೌಡರ ಹೋರಾಟವನ್ನು ಪಠ್ಯದ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಆಗಬೇಕು. ಇದುವೇ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮವಾಗಿದ್ದು, ಇತಿಹಾಸದಲ್ಲಿ ಇದನ್ನು ಸೇರಿಸಬೇಕು ಎಂದರು.ವಿಧಾನಪರಿಷತ್ತು ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದ ನೆನಪಿಗೆ ಇಲ್ಲಿ ಅತೀ ದೊಡ್ಡ ಧ್ವಜಸ್ತಂಭ ನಿರ್ಮಿಸಲಾಗುವುದು. ಕೆಲವೊಂದು ತಾಂತ್ರಿಕ ಕಾರಣದಿಂದ ಕೆಲಸ ವಿಳಂಬಗೊಂಡಿದ್ದು, ಸದ್ಯದಲ್ಲೇ ಆರಂಭಗೊಳ್ಳಲಿದೆ ಎಂದು ತಿಳಿಸಿದರು.ಕಾವೂರು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಗ್ಯಾರೆಂಟಿ ಅನುಷ್ಠಾನದ ಅಧ್ಯಕ್ಷ ಭರತ್ ಮುಂಡಾಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪಾಲಿಕೆ ಮಾಜಿ ಸದಸ್ಯರಾದ ಎ.ಸಿ.ವಿನಯರಾಜ್, ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್, ದ.ಕ. ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಕುಮಾರ್, ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸಮಿತಿ ಅಧ್ಯಕ್ಷ ಕಿರಣ್ ಗುಡ್ಲೆಗುತ್ತು, ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿಜೆಪ್ಪು, ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ ಡಿ.ಬಿ., ಪ್ರಮುಖರಾದ ಸುರೇಶ್ ಬಜಾಲ್, ಪೂರ್ಣಿಮಾ, ರಕ್ಷಿತ್ ಪುತ್ತಿಲ ಮತ್ತಿತರರಿದ್ದರು.ವಿಜಯ ದಿನಾಚರಣೆ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಮಂಗಳೂರು ಮತ್ತು ತುಳುನಾಡ ರಕ್ಷಣಾ ವೇದಿಕೆಯ ಮಂಗಳೂರು ಇದರ ಸಹಭಾಗಿತ್ವದಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.