ಮಂಗಳೂರಿನ ಕಂಕನಾಡಿಯ ನಾಗುರಿಯಲ್ಲಿ ಬುಧವಾರ ಮನೆ ಕುಸಿತ ಘಟನೆಯಲ್ಲಿ ಮೃತಪಟ್ಟ ಬಿಹಾರ ಮೂಲದ ಇಬ್ಬರು ಮಕ್ಕಳ ಅಂತ್ಯಕ್ರಿಯೆಯನ್ನು ನಗರದ ಹಿಂದು ರುದ್ರಭೂಮಿಯಲ್ಲಿ ಗುರುವಾರ ನಡೆಸಲಾಯಿತು.

ಮಂಗಳೂರು: ಮಂಗಳೂರಿನ ಕಂಕನಾಡಿಯ ನಾಗುರಿಯಲ್ಲಿ ಬುಧವಾರ ಮನೆ ಕುಸಿತ ಘಟನೆಯಲ್ಲಿ ಮೃತಪಟ್ಟ ಬಿಹಾರ ಮೂಲದ ಇಬ್ಬರು ಮಕ್ಕಳ ಅಂತ್ಯಕ್ರಿಯೆಯನ್ನು ನಗರದ ಹಿಂದು ರುದ್ರಭೂಮಿಯಲ್ಲಿ ಗುರುವಾರ ನಡೆಸಲಾಯಿತು. ಈ ದುರಂತದಲ್ಲಿ ಬಿರಾದ ಮೂಲದ 8 ವರ್ಷದ ಅನಾಮಿಕ ಚೌರಾಸಿಯ ಹಾಗೂ 4 ವರ್ಷದ ಪರಿ (ತನು) ಮತ್ತು ಉಡುಪಿ ಮೂಲದ ಶಾಂತಾ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು. ಈ ಪೈಕಿ ಶಾಂತಾ ಅವರ ಮೃತದೇಹವನ್ನು ಅವರ ಊರಿಗೆ ಕಳುಹಿಸಲಾಗಿದೆ. ಮಕ್ಕಳಿಬ್ಬರ ಮೃತದೇಹವನ್ನು ಗುರುವಾರ ಮಧ್ಯಾಹ್ನ ನಂದಿಗುಡ್ಡೆಯ ರುದ್ರಭೂಮಿಗೆ ತರಲಾಯಿತು. ಬಳಿಕ ಅಲ್ಲಿ ವಿಧಿವಿಧಾನ ನೆರವೇರಿಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅಂತ್ಯಸಂಸ್ಕಾರಕ್ಕೂ ಮುನ್ನ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ತಮ್ಮ ಕಣ್ಣೆದುರೇ ಬೆಳೆದ ಮಕ್ಕಳ ಮೃತದೇಹ ಕಂಡು ನಾಗುರಿ ಜನತೆ ಶೋಕ ಸಾಗರದಲ್ಲಿ ಮುಳುಗಿತು. ಸ್ಥಳೀಯ ಕಂಕನಾಡಿ ನಗರ ಠಾಣೆಯ ಸಿಬ್ಬಂದಿ ಕೂಡ ಮೃತ ದೇಹಗಳಿಗೆ ಭಾವುಕ ನಮನ ಸಲ್ಲಿಸಿದರು.

ಈ ಮಕ್ಕಳಿಬ್ಬರ ಪೋಷಕರು ಬಿಹಾರ ಮೂಲದವರಾದರೂ ಕಳೆದ 20 ವರ್ಷಗಳ ಹಿಂದೆ ಇವರ ಪೋಷಕರು ಮಂಗಳೂರಿಗೆ ಆಗಮಿಸಿ ಇಲ್ಲಿಯೇ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈ ದುರಂತದಲ್ಲಿ ತಂದೆ-ತಾಯಿ ಇಬ್ಬರೂ ಮಕ್ಕಳನ್ನು ಕಳೆದುಕೊಂಡು ದುಃಖ ಸಾಗರದಲ್ಲಿ ಮುಳುಗುವಂತಾಗಿದೆ.

---------------