ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸ್ವಕ್ಷೇತ್ರದ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅತಿ ಹೆಚ್ಚು ಸದಸ್ಯರನ್ನು ಹೊಂದಿದ್ದರೂ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ.
35 ಸದಸ್ಯ ಬಲದ ಪಾಲಿಕೆಯಲ್ಲಿ ಕೇವಲ 10 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್, ಐವರು ಪಕ್ಷೇತರರು, ಜೆಡಿಎಸ್‌ನ ಒಬ್ಬರು ಹಾಗೂ ಎಐಎಂಐಎಂನ ಇಬ್ಬರು ಸದಸ್ಯರ ಬೆಂಬಲದೊಂದಿಗೆ ಮೇಯರ್ ಹಾಗೂ ಉಪಮೇಯರ್ ಸ್ಥಾನ ಗೆದ್ದಿದೆ.
17 ಸದಸ್ಯರ ಬಲವಿದ್ದರೂ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿಗೆ ಸಾಧ್ಯವಾಗಿಲ್ಲ. ಇದರಿಂದಾಗಿ ಯತ್ನಾಳ್‌ಗೆ ತವರಲ್ಲೇ ಮುಖಭಂಗವಾಗಿದೆ.2022ರ ಅಕ್ಟೋಬರ್‌ನಲ್ಲಿ ಪಾಲಿಕೆಗೆ ಚುನಾವಣೆ ನಡೆದಿತ್ತು.
ಮೀಸಲಾತಿ ವಿಚಾರವಾಗಿ ಪ್ರಕರಣ ನ್ಯಾಯಾಲಯದಲ್ಲಿದ್ದ ಕಾರಣ ಚುನಾವಣೆ ನಡೆದಿರಲಿಲ್ಲ. 14 ತಿಂಗಳ ನಂತರ ಮಂಗಳವಾರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.
ಪಾಲಿಕೆಯ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಕಾಂಗ್ರೆಸ್‌ನಿಂದ ಮೆಹೇಜಬಿನ್ ಹೊರ್ತಿ ಹಾಗೂ ಬಿಜೆಪಿಯಿಂದ ರಶ್ಮೀ ಕೋರಿ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ನ ಹೊರ್ತಿ 18 ಮತಗಳನ್ನು ಪಡೆದು ಜಯಶಾಲಿಯಾದರು.
ಉಪಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಕಾಂಗ್ರೆಸ್‌ನ ದಿನೇಶ ಹಳ್ಳಿ ಅವಿರೋಧವಾಗಿ ಆಯ್ಕೆಯಾದರು. 17 ಸದಸ್ಯರ ಬಲ ಹೊಂದಿರುವ ಬಿಜೆಪಿ, ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಿತ್ತು.
ಆದರೆ, ಸಚಿವ ಎಂ.ಬಿ.ಪಾಟೀಲ ಅವರ ತಂತ್ರಗಾರಿಕೆ ಫಲವಾಗಿ ಮಹಾನಗರ ಪಾಲಿಕೆಯಲ್ಲಿ ‘ಕೈ’ ದಿಗ್ವಿಜಯ ಸಾಧಿಸಿತು. ಐವರು ಪಕ್ಷೇತರರು, ಜೆಡಿಎಸ್‌ನ ಒಬ್ಬರು, ಎಐಎಂಐಎಂನ ಇಬ್ಬರು ಸದಸ್ಯರು ಕಾಂಗ್ರೆಸ್‌ನ್ನು ಬೆಂಬಲಿಸಿದರು.
ಬಿಜೆಪಿಯಿಂದ ಚುನಾವಣೆ ಬಹಿಷ್ಕಾರ: ಈ ಮಧ್ಯೆ, ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಮುಂದೂಡುವ ವಿಷಯವಾಗಿ ನೋಟಿಸ್ ಜಾರಿಯಾಗಿದ್ದರೂ ತರಾತುರಿಯಲ್ಲಿ ಪ್ರಾದೇಶಿಕ ಆಯುಕ್ತರು ಚುನಾವಣಾ ಪ್ರಕ್ರಿಯೆ ನಡೆಸಿದ್ದಾರೆ.
ಆ ಮೂಲಕ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಪಾಲಿಕೆಯ ಬಿಜೆಪಿ ಸದಸ್ಯರು ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸಂಸದ ರಮೇಶ ಜಿಗಜಿಣಗಿ ಅವರು ಚುನಾವಣಾ ಪ್ರಕ್ರಿಯೆಯನ್ನು ಬಹಿಷ್ಕರಿಸಿ ಹೊರನಡೆದರು. ಕಪ್ಪು ಬಟ್ಟೆ ಪ್ರದರ್ಶಿಸಿ, ‘ಪ್ರಾದೇಶಿಕ ಆಯುಕ್ತರಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.