ಸಾರಾಂಶ
ಗೋಕರ್ಣ: ಇಲ್ಲಿನ ಬಿಜ್ಜೂರಿನ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಹಬ್ಬ ಮಂಗಳವಾರ ಸಂಜೆ ಅದ್ಧೂರಿಯಾಗಿ ಸಂಪನ್ನಗೊಂಡಿತು.ಐದು ದಿನಗಳ ಕಾಲ ಊರ ಪರ್ಯಟನೆ ಮಾಡಿ ಸುಗ್ಗಿ ಕುಣಿತದ ಪ್ರದರ್ಶನ ನೀಡಿದ ತಂಡ ಮಂಗಳವಾರ ಸಂಜೆ ಊರ ಗೌಡರ ಮನೆಯಾದ ಮದಕನ ಮನೆಗೆ ಆಗಮಿಸಿ ಇಲ್ಲಿರುವ ದೇವರ ಸಾನ್ನಿಧ್ಯದಲ್ಲಿ ಸುಗ್ಗಿ ಕುಣಿತದ ಸೇವೆ ಸಲ್ಲಿಸಿ ಬಳಿಕ ಇಲ್ಲಿನ ದೇವರಿಗೆ ಹಾಗೂ ಕಳಸಕ್ಕೆ ಪೂಜೆ ನೆರವೇರಿಸಿದರು. ಈ ವರ್ಷದಲ್ಲಿ ಮಳೆ ಉತ್ತಮವಾಗಿ ಸುರಿಯಲಿ, ರೈತರ ಬೆಳೆದ ಬೆಳೆ, ಒಳ್ಳೆಯ ಇಳುವರಿ ಬರಲಿ ಹಾಗೂ ಗ್ರಾಮದಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯಲಿ ಎಂದು ಪ್ರಾರ್ಥಿಸಲಾಯಿತು. ಈ ವೇಳೆ ವಿವಿಧ ಸಮಾಜದ ಪ್ರಮುಖರು, ಗಣ್ಯರು ಪಾಲ್ಗೊಂಡಿದ್ದರು.
ಬಳಿಕ ಸುಗ್ಗಿ ತಂಡ ಹಾಗೂ ಕಳಶ ಆಲದಕೇರಿಯಲ್ಲಿರುವ ಕರಿಕಾಳ ಸನ್ನಿಧಿಗೆ ಆಗಮಿಸಿ ಇಲ್ಲಿರುವ ದೇವರಿಗೆ ಪೂಜೆ, ಸುಗ್ಗಿ ಕುಣಿತ ಸೇವೆ ನೆರವೇರಿದ ಬಳಿಕ ಎರಡು ಕಿ.ಮೀ. ದೂರದ ಮಾರ್ಗದಲ್ಲಿ ಸಮುದ್ರಕ್ಕೆ ಸಾಗಿತು.ಓಡುತ್ತಾ ಸಾಗುವ ಕಳಶೋತ್ಸವ ಹಾಗೂ ಸುಗ್ಗಿ ತಂಡದ ಜೊತೆ ಬೂದಿ ಎರಚುತ್ತಾ ಸಾಗುವುದು ವಿಶೇಷವಾಗಿದ್ದು, ಬೇಸಿಗೆ ಹಂಗಾಮ ಮುಗಿದು ಮಳೆಗಾಲದಲ್ಲಿ ಪ್ರಾರಂಭಿಸುವ ಕೃಷಿ ಚಟುವಟಿಕೆಯಲ್ಲಿನ ಬೆಳೆಗೆ ಯಾವುದೇ ರೋಗ-ರುಜಿನ ಬಾರದಿರಲಿ. ಗ್ರಾಮಕ್ಕೆ ಯಾವುದೇ ಅನಿಷ್ಟಗಳು ಬಾರದಿರಲಿ ಎಂದು ಪ್ರಾರ್ಥಿಸುವ ಸಂಪ್ರದಾಯಕ ಸಂದೇಶದ ಆಚರಣೆಯಾಗಿದ್ದು, ಅದರಂತೆ ಈ ವರ್ಷವೂ ನಡೆಯಿತು.
ಒಟ್ಟು ಐದು ದಿನ ನಡೆದ ಸುಗ್ಗಿ ಹಬ್ಬದಲ್ಲಿ ಮೊದಲ ದಿನ ರಾತ್ರಿ ತೋಟಗೇರಿ, ಎರಡನೇ ದಿನ ವೀರಶೈವ ಮಠ ಮೂರನೇ ದಿನ ತಾರಮಕ್ಕಿ ಕರಡಿಮನೆ, ನಾಲ್ಕನೇ ದಿನ ಕುಟ್ಲೆ ಗೌಡರ ಮನೆ ಹೀಗೆ ನಿಗದಿಪಡಿಸಿದ ಸ್ಥಳದಲ್ಲಿ ಉಳಿದು ಊರೆಲ್ಲ ತಿರುಗಾಟ ಮುಗಿಸಿದ ಸುಗ್ಗಿ ತಂಡ ಕಳಶೋತ್ಸವದೊಂದಿಗೆ ಸಮುದ್ರಕ್ಕೆ ತೆರಳಿ ಕರಿ ಸ್ನಾನ ಮಾಡಿದ ಬಳಿಕ ಇಷ್ಟು ದಿನ ಮನೆಯಿಂದ ಹೊರಗೆ ಇದ್ದ ಸುಗ್ಗಿ ತಂಡದ ಸದಸ್ಯರು ತಮ್ಮ ಮನೆಗಳಿಗೆ ತೆರಳಿ ಅಲ್ಲಿ ಮಾಡಿದ ಹಬ್ಬದ ವಿಶೇಷ ಖಾದ್ಯವಾದ ಕೊಟ್ಟೆ ರೊಟ್ಟಿ ಪಾಯಿಸದೊಂದಿಗೆ ಭೋಜನ ಸವಿದು ಕುಟುಂಬಸ್ಥರೊಂದಿಗೆ ಬೆರೆತು ಸಂಭ್ರಮಿಸಿದರು.ಇದರೊಂದಿಗೆ ಈ ವರ್ಷದ ಇಲ್ಲಿನ ಹಾಲಕ್ಕಿ ಒಕ್ಕಲಿಗ ಸಮಾಜದ ಬಹು ವಿಶಿಷ್ಟವಾದ ಧಾರ್ಮಿಕತೆ ಹಾಗೂ ಸಂಪ್ರದಾಯಿಕ ಸೊಗಡಿನ ಸುಗ್ಗಿ ಹಬ್ಬ ಸಂಪನ್ನಗೊಂಡಿತು. ಈ ಎಲ್ಲ ಕಾರ್ಯಕ್ರಮದಲ್ಲಿ ಹಾಲಕ್ಕಿ ಹಾಗೂ ಉಳಿದ ಸಮಾಜದವರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.