ಸಾರಾಂಶ
ಬಿಆರ್‌ಟಿಎಸ್ ವಿರುದ್ಧ ಘೋಷಣೆ ಹಾಕಿದ ಸಾರ್ವಜನಿಕರು, ಪಾದಚಾರಿ, ಬೈಕ್ ಸವಾರರಿಗೆ ಈ ರಸ್ತೆಯಲ್ಲಿ ಸುರಕ್ಷತೆ ಕಲ್ಪಿಸಬೇಕು ಹಾಗೂ ಚಾಲಕರು ಸಾರ್ವಜನಿಕ ಪ್ರದೇಶದಲ್ಲಿ ನಿಧಾನವಾಗಿ ವಾಹನ ಚಲಾಯಿಸಬೇಕೆಂದು ಆಗ್ರಹ
ಧಾರವಾಡ: ಬಿಆರ್‌ಟಿಎಸ್‌ಗೆ ಪ್ರತ್ಯೇಕ ಕಾರಿಡಾರ್ ಇದ್ದರೂ ಸಹ ಇತ್ತೀಚೆಗೆ ಚಿಗರಿ ಬಸ್ಸುಗಳ ಅಪಘಾತ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಶುಕ್ರವಾರ ನವಲೂರ ಸಮೀಪದ ವನಶ್ರೀನಗರ ಕ್ರಾಸ್ ಬಳಿ ಚಿಗರಿ ಬಸ್ ಯುವಕನಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಈ ಘಟನೆಯಲ್ಲಿ ಇಟ್ಟಿಗಟ್ಟಿಯ ಶ್ರೀಕಾಂತ ಎಂಬುವರ ತಲೆ ಹಾಗೂ ಕಾಲಿಗೆ ತೀವ್ರವಾದ ಗಾಯಗಳಾಗಿದ್ದು, ಆತನನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಗರಿ ಬಸ್ ಚಾಲಕನ ಬೇಜಾವ್ದಾರಿಯಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಬಿಆರ್‌ಟಿಎಸ್ ವಿರುದ್ಧ ಘೋಷಣೆ ಹಾಕಿದ ಸಾರ್ವಜನಿಕರು, ಪಾದಚಾರಿ, ಬೈಕ್ ಸವಾರರಿಗೆ ಈ ರಸ್ತೆಯಲ್ಲಿ ಸುರಕ್ಷತೆ ಕಲ್ಪಿಸಬೇಕು ಹಾಗೂ ಚಾಲಕರು ಸಾರ್ವಜನಿಕ ಪ್ರದೇಶದಲ್ಲಿ ನಿಧಾನವಾಗಿ ವಾಹನ ಚಲಾಯಿಸಬೇಕೆಂದು ಆಗ್ರಹಿಸಿದರು.
ಬಿಆರ್‌ಟಿಎಸ್ ಅಧಿಕಾರಿಗಳು, ಸಂಚಾರ ಮತ್ತು ವಿದ್ಯಾಗಿರಿ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸಾರ್ವಜನಿಕರ ಬೇಡಿಕೆ ಈಡೇರಿಸುವುದಾಗಿ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದೆ ಪಡೆಯಬೇಕಾಯಿತು. ಘಟನೆಯಿಂದ ಕೆಲ ಹೊತ್ತು ರಸ್ತೆ ಸಂಚಾರದಲ್ಲಿ ಅಡಚಣೆ ಉಂಟಾಯಿತು.