ಸಾರಾಂಶ
ಜ.7ರಂದು ಬೆಳಗ್ಗೆ ಪಟ್ಟಣದ ಪ್ರವಾಸಿ ಮಂದಿರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಕನಿಷ್ಠ 200ಕ್ಕೂ ಹೆಚ್ಚು ದ್ವಿಚಕ್ರ ವಾಹನದ ಮುಖಾಂತರ ಸಾಮೂಹಿಕವಾಗಿ ಮಂಡ್ಯಕ್ಕೆ ತೆರಳಿ ಮಂಡ್ಯ ಬಂದ್‌ಗೆ ನಮ್ಮ ನೈತಿಕ ಬೆಂಬಲ ಸೂಚಿಸಲಾಗುವುದು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ಖಂಡಿಸಿ ಜ.7ರಂದು ಕರೆ ನೀಡಿರುವ ಮಂಡ್ಯ ಬಂದ್ ಬೆಂಬಲಿಸಿ ಮಳವಳ್ಳಿಯಲ್ಲಿ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಪೂರಿಗಾಲಿ ಜಯರಾಜ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದಡಿ ಗೃಹಸಚಿವರಾಗಿರುವ ಅಮಿತ್ ಶಾ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬಗ್ಗೆ ಮಾತನಾಡಿರುವುದು ಖಂಡನೀಯ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಜ.7ರಂದು ಬೆಳಗ್ಗೆ ಪಟ್ಟಣದ ಪ್ರವಾಸಿ ಮಂದಿರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಕನಿಷ್ಠ 200ಕ್ಕೂ ಹೆಚ್ಚು ದ್ವಿಚಕ್ರ ವಾಹನದ ಮುಖಾಂತರ ಸಾಮೂಹಿಕವಾಗಿ ಮಂಡ್ಯಕ್ಕೆ ತೆರಳಿ ಮಂಡ್ಯ ಬಂದ್‌ಗೆ ನಮ್ಮ ನೈತಿಕ ಬೆಂಬಲ ಸೂಚಿಸಲಾಗುವುದು. ತಾಲೂಕಿನ ಎಲ್ಲಾ ದಲಿತ-ಪ್ರಗತಿ ಪರ ಸಂಘಟನೆಗಳು ಹಾಗೂ ಅಂಬೇಡ್ಕರ್ ರವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ಅಮಿತ್ ಶಾ ಅವರು ಅಂಬೇಡ್ಕರ್ ಬರೆದಿರುವ ಸಂವಿಧಾನದಿಂದಲೇ ಅಧಿಕಾರ ಪಡೆದಿರುವುದನ್ನು ಮರೆತಿದ್ದಾರೆ. ಅಂಬೇಡ್ಕರ್ ಹಾಗೂ ಸಂವಿಧಾನ ಎರಡಕ್ಕೂ ಅಪಮಾನ ಮಾಡುವ ಜೊತೆಗೆ ಮೌಢ್ಯವನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೃಷ್ಣ, ನಂಜುಂಡಸ್ವಾಮಿ, ಅನಿಲ್‌ಕುಮಾರ್, ಮಲ್ಲಿಕಾರ್ಜುನಸ್ವಾಮಿ, ಪ್ರಸಾದ್, ಚೇತನ್‌ಕುಮಾರ್, ಮುದ್ದಯ್ಯ ಸೇರಿದಂತೆ ಇತರರು ಇದ್ದರು.