ಕೊಡಗು ವಿವಿ ರದ್ದುಗೊಳಿಸದಂತೆ ಬೈಕ್ ಜಾಥಾ, ಪತ್ರ ಚಳುವಳಿ

| Published : Mar 05 2025, 12:36 AM IST

ಕೊಡಗು ವಿವಿ ರದ್ದುಗೊಳಿಸದಂತೆ ಬೈಕ್ ಜಾಥಾ, ಪತ್ರ ಚಳುವಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರ ತನಕ ಬೈಕ್‌ ಜಾಥಾ ಮತ್ತು ಪತ್ರ ಚಳವಳಿ ನಡೆಸುವ ಮೂಲಕ ಕೊಡಗು ವಿವಿ ರದ್ದುಗೊಳಿಸದಂತೆ ಮುಖ್ಯಮಂತ್ರಿಗಳಿಗೆ ತಹಸೀಲ್ದಾರರ ಮೂಲಕ ಮನವಿ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕೊಡಗು ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಕೊಡಗು ಹಿತರಕ್ಷಣಾ ಬಳಗದ ಆಶ್ರಯದಲ್ಲಿ ಅಳುವಾರ ವಿವಿ ಯಿಂದ ಕುಶಾಲನಗರ ತನಕ ಬೈಕ್ ಜಾಥಾ ಮತ್ತು ಪತ್ರ ಚಳುವಳಿ ನಡೆಸುವ ಮೂಲಕ ಕೊಡಗು ವಿವಿ ರದ್ದುಗೊಳಿಸದಂತೆ ಮತ್ತು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಕೋರಿ‌ ಮುಖ್ಯಮಂತ್ರಿಗಳಿಗೆ ತಹಸೀಲ್ದಾರರ ಮೂಲಕ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೊಡಗು ವಿಶ್ವವಿದ್ಯಾಲಯ ಹಿತರಕ್ಷಣಾ ಬಳಗದ ಗೌರವ ಅಧ್ಯಕ್ಷರಾದ ವಿ.ಪಿ. ಶಶಿಧರ್, ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ, ಹಿಂದುಳಿದ, ಬುಡಕಟ್ಟು ಸಮುದಾಯಗಳು ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಕಡುಬಡತನದ ಕುಟುಂಬದಲ್ಲಿನ ವಿದ್ಯಾರ್ಥಿಗಳನ್ನೇ ಬಹುತೇಕ ಪ್ರಮಾಣದಲ್ಲಿ ಹೊಂದಿದೆ. ಪಶ್ಚಿಮ ಘಟ್ಟಗಳಿಂದ ಕೂಡಿದ ಗುಡ್ಡಗಾಡು ಪ್ರದೇಶದ ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಹಂಬಲವಿದ್ದರೂ ದೂರದ ನಗರಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಿಂದ 200 ಕಿ.ಮೀ. ದೂರದ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ 130 ಕಿ.ಮೀ. ದೂರದ ಮೈಸೂರು ವಿಶ್ವವಿದ್ಯಾನಿಲಯಗಳಿಗೆ ಅವಲಂಬಿಸಿ ಉನ್ನತ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಇದೆ. ಹಾಗಾಗಿಯೇ ಕೊಡಗು ಜಿಲ್ಲೆಯಲ್ಲಿ ಮಾತ್ರ ಉನ್ನತ ಶಿಕ್ಷಣದ ವಾರ್ಷಿಕ ನೋಂದಣಿ ಅನುಪಾತ ಇಲ್ಲಿಯವರೆಗೆ ಶೇ. 16 ಮಾತ್ರ ಇರುವುದು ಬಹು ಕಳವಳ ಪಡಬೇಕಾದ ವಿಚಾರವಾಗಿದೆ.

ಕೊಡಗು ವಿಶ್ವವಿದ್ಯಾಲಯವು ಸರ್ಕಾರದ ಯಾವುದೇ ರೀತಿಯ ಅನುದಾನವನ್ನು ಪಡೆಯದೇ ತನ್ನ ಆಂತರಿಕ ಸಂಪನ್ಮೂಲ ಕ್ರೋಡೀಕರಣ ಮಾಡಿಕೊಂಡು ಇದುವರೆಗೆ ಯಾವುದೇ ಸಮಸ್ಯೆ ಎದುರಾಗದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ವೇತನ ನೀಡುತ್ತಾ ಶೈಕ್ಷಣಿಕ ಮತ್ತು ಆಡಳಿತ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದೆ ಎಂದು ತಿಳಿಸಿದರು.

ಸರ್ಕಾರ ಈ ಸಂಬಂಧ ಚಿಂತನೆ ಹರಿಸಿ ಕೊಡಗು ವಿವಿಯನ್ನು ಉಳಿಸಿ ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಕೊಡಗು ವಿಶ್ವವಿದ್ಯಾಲಯದ ಹಿತರಕ್ಷಣಾ ಬಳಗ ಅಧ್ಯಕ್ಷ ಕೃಷ್ಣೇಗೌಡ ಅವರು, ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ಶೈಕ್ಷಣಿಕ ಏಳ್ಗೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕೊಡಗು ವಿಶ್ವವಿದ್ಯಾಲಯಕ್ಕೆ ವಿಶೇಷ ಪ್ರಾತಿನಿಧ್ಯ ಮತ್ತು ವಿಶೇಷ ಪ್ರಕರಣವೆಂದು ಪರಿಗಣಿಸಿ ಕೊಡಗು ವಿಶ್ವವಿದ್ಯಾಲಯವನ್ನು ಮುಂದುವರಿಸುವ ಮೂಲಕ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ತುರ್ತು ಮತ್ತು ಅವಶ್ಯಕ ಕ್ರಮ ತೆಗೆದುಕೊಳ್ಳುವಂತೆ ಕೋರಿದರು.

ಕೊಡಗು ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಜ಼ಮೀರ್ ಅಹಮದ್, ಕೊಡಗು ವಿಶ್ವವಿದ್ಯಾಲಯದ ಸ್ಥಾಪನೆಯ ನಂತರ ವಿವಿಧ ಸಂಸ್ಥೆಗಳ ಒಡಂಬಡಿಕೆಯಿಂದ ಕೌಶಲ್ಯಾಧಾರಿತ ಶಿಕ್ಷಣ ಸಾಧ್ಯವಾಗಿದೆ. ಕೊಡಗು ವಿಶ್ವವಿದ್ಯಾಲಯವು ಪರಸ್ಪರ ಸಂಶೋಧನೆ, ಬೋಧನೆ, ಕೌಶಲ್ಯಭಿವೃದ್ಧಿ, ಔದ್ಯೋಗಿಕ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ, ತಂತ್ರಜ್ಞಾನ ವಿನಿಮಯ ಮಾಡಿಕೊಂಡು ಕೊಡಗು ವಿಶ್ವವಿದ್ಯಾಲಯದ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಲವಾರು ರೀತಿಯ ಕಾರ್ಯ ಚಟುವಟಿಕೆಗಳನ್ನು ಕೈಗೊಂಡಿದೆ.

ಕೊಡಗು ವಿಶ್ವವಿದ್ಯಾಲಯವು ಕೌಶ್ಯಲ್ಯಾಭಿವೃದ್ಧಿ ಅಕಾಡೆಮಿ, ಕೊಡಗು ಅಧ್ಯಾಪಕರ ಅಭಿವೃದ್ಧಿ ಅಕಾಡೆಮಿ, ವೃತ್ತಿ ಮತ್ತು ಸ್ಪರ್ಧಾ ಸಾಮರ್ಥ್ಯ ಅಭಿವೃದ್ಧಿ ಅಕಾಡೆಮಿ ಮೊದಲಾದ ವಿಭಾಗಗಳನ್ನು ಸ್ಥಾಪಿಸುವ ಮೂಲಕ ಸಮರ್ಪಕ ಅನುದಾನಗಳ ಹೊರತಾಗಿಯೂ ಕರ್ತವ್ಯದ ವಿಶೇಷವಾದ ಮುತುವರ್ಜಿ ಮತ್ತು ನಿರಂತರ ಪರಿಶ್ರಮದಿಂದ ಸಾಕಷ್ಟು ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಅಪಾರ ಜನಮನ್ನಣೆ ಪಡೆದಿದೆ. ಕೊಡಗು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಔದ್ಯೋಗಿಕ ಕ್ಷೇತ್ರಗಳಿಗೆ ಅಣಿಗೊಳಿಸಲು, ವಿದ್ಯಾರ್ಥಿಗಳಿಗೆ ಮೂಲ ಕೋರ್ಸ್‌ಗಳನ್ನು ಜೊತೆ ಜೊತೆಗೆ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿಶೇಷವಾಗಿ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ‘ಕೌಶಲ್ಯಾಧಾರಿತ ತರಬೇತಿ’ಯನ್ನು ಕೊಡಗು ವಿಶ್ವವಿದ್ಯಾಲಯವು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ‘ಕೌಶಲ್ಯಾಧಾರಿತ ಕೋರ್ಸ್ ಲೋಕಾರ್ಪಣೆ’ ಮಾಡಿದೆ. ಕೊಡಗು ಜಿಲ್ಲೆಯ ಇತಿಹಾಸದಲ್ಲೇ ಬಹು ಬೇಡಿಕೆಯ MBA ಮತ್ತುMCA 2025-26 ನೇ ಶೈಕ್ಷಣಿಕ ಸಾಲಿನಿಂದ ಆರಂಭಿಸಲು AICTE ಯಿಂದ ಅನುಮತಿ ಪಡೆದಿದ್ದು ಬಹು ದೊಡ್ಡ ಮೈಲಿಗಲ್ಲನ್ನು ಸಾಧಿಸಲು ಮುಂದಾಗಿರುವ ಪ್ರಸ್ತುತ ಸಮಯದಲ್ಲಿ ಈಗಿನ ಈ ಬೆಳವಣಿಗೆಯು ಬಹಳಷ್ಟು ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿದೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು.

ಕೊಡಗು ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಕೊಡಗು ಹಿತರಕ್ಷಣಾ ಬಳಗದ ವತಿಯಿಂದ ಬೈಕ್ ಜಾಥಾ ಮೂಲಕ ಕುಶಾಲನಗರ ಪಟ್ಟಣದ ತಹಸೀಲ್ದಾರರವರಿಗೆ ಮನವಿ ಸಲ್ಲಿಸಿ ತದನಂತರ ಅಂಚೆ ಕಚೇರಿ ಬಳಿ ತೆರಳಿ ಅಂಚೆಪೆಟ್ಟಿಗೆಗೆ ಕೊಡಗು ವಿವಿ ಉಳಿಸಿ ಅಭಿವೃದ್ಧಿಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳನ್ನು ಹಾಕಿದರು.