ಕನ್ಯಾಕುಮಾರಿ - ಕಾಶ್ಮೀರದವರೆಗೆ ಬೈಕ್ ಪ್ರಯಾಣ

| Published : May 13 2024, 12:00 AM IST

ಸಾರಾಂಶ

ಕುದೂರು: ಕನ್ನಡ ಬಾಷೆಯೊಂದನ್ನು ಹೊರತು ಪಡಿಸಿ ಇತರೆ ಭಾಷೆಗಳ ಪರಿಚಯ ಇಲ್ಲ. ಊಟ ತಿಂಡಿ ಹೊಂದಿಕೆಯಾಗುತ್ತಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ಕಷ್ಟದ ಸಂದರ್ಭ ಎದುರಿಸುವಂತಾದರೂ ದೇಶವನ್ನು ನೋಡಲೇಬೇಕು ಎಂಬ ಮಹತ್ವಾಕಾಂಕ್ಷೆ ಬಂದ ಕಷ್ಟಗಳನ್ನೆಲ್ಲಾ ತಡೆದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮೋಟಾರ್ ಬೈಕ್‌ನಲ್ಲಿ ಪ್ರಯಾಣ ಮಾಡಿ ಬಂದ ಕುದೂರು ಗ್ರಾಮದ ಕೃಷ್ಣರವರ ಅನುಭವದ ಮಾತು.

ಕುದೂರು: ಕನ್ನಡ ಬಾಷೆಯೊಂದನ್ನು ಹೊರತು ಪಡಿಸಿ ಇತರೆ ಭಾಷೆಗಳ ಪರಿಚಯ ಇಲ್ಲ. ಊಟ ತಿಂಡಿ ಹೊಂದಿಕೆಯಾಗುತ್ತಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ಕಷ್ಟದ ಸಂದರ್ಭ ಎದುರಿಸುವಂತಾದರೂ ದೇಶವನ್ನು ನೋಡಲೇಬೇಕು ಎಂಬ ಮಹತ್ವಾಕಾಂಕ್ಷೆ ಬಂದ ಕಷ್ಟಗಳನ್ನೆಲ್ಲಾ ತಡೆದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮೋಟಾರ್ ಬೈಕ್‌ನಲ್ಲಿ ಪ್ರಯಾಣ ಮಾಡಿ ಬಂದ ಕುದೂರು ಗ್ರಾಮದ ಕೃಷ್ಣರವರ ಅನುಭವದ ಮಾತು.

ಕುದೂರು ಗ್ರಾಮದ ಕೃಷ್ಣ ವೃತ್ತಿಯಲ್ಲಿ ಕ್ಷೌರಿಕ. 57 ವರ್ಷವಾಗಿದ್ದರೂ ತರುಣರೂ ನಾಚುವಂತಹ ಉತ್ಸಾಹ. ತಮ್ಮ ಕಾಯಕದ ಜೊತೆಗೆ ಕಾರುಗಳನ್ನು ವಿವಿಧ ರೀತಿಯಲ್ಲಿ ವಿನ್ಯಾಸ ಮಾಡಿ ಸಂಭ್ರಮಿಸುತ್ತಾರೆ. ಕುದುರೆ ಸಾಕಾಣಿಕೆ ಹಾಗೂ ಈ ಹಿಂದಿನ ರಾಜಮಹಾರಾಜರಂತೆ ಸಾರೋಟನ್ನು ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬರುತ್ತಿದ್ದರೆ ರಸ್ತೆಯ ಅಕ್ಕಪಕ್ಕ ಜನರು ನಿಂತು ನೋಡಿ ಖುಷಿಪಡುತ್ತಾರೆ. ಇಂತಹ ಹವ್ಯಾಸಗಳನ್ನು ರೂಢಿಸಿಕೊಂಡಿರುವ ಕೃಷ್ಣ ಫೆಬ್ರವರಿ ಮಾಹೆಯಲ್ಲಿ ಅಯೋಧ್ಯೆಯಲ್ಲಿನ ರಾಮಮಂದಿರ ದೇವಾಲಯಕ್ಕೆ ಬೈಕ್‌ನಲ್ಲಿ ಹೋಗಿ ಬಂದಿದ್ದರು. ಆ ಬಳಿಕ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಬೈಕ್‌ನಲ್ಲಿ ಪ್ರಯಾಣ ಮಾಡಬೇಕು. ಸೌಹಾರ್ದ ಸಂದೇಶವನ್ನು ಸಾರುತ್ತಾ ಇಡೀ ಭಾರತವನ್ನು ಕಣ್ತುಂಬಿಕೊಳ್ಳಬೇಕೆಂದು 29 ದಿನಗಳಲ್ಲಿ 13 ಸಾವಿರ ಕಿಲೋ ಮೀಟರ್ ಸುತ್ತಿ ಬಂದಿದ್ದಾರೆ.

ಭಾರತವನ್ನು ನೋಡುವುದೆಂದರೆ ಕೇವಲ ಸ್ಥಳಗಳನ್ನು ಕಣ್ತುಂಬಿಕೊಂಡು ಬರುವುದಲ್ಲ. ಒಂದೊಂದು ಸ್ಥಳದ ಮಹಿಮೆಯನ್ನು ಅರ್ಥ ಮಾಡಿಕೊಂಡು ಅದರ ಅನುಭೂತಿಯನ್ನು ಅನುಭವಿಸಲು ಈ ಒಂದು ಜನ್ಮದಲ್ಲಿ ಸಾಧ್ಯವಾಗುವುದಿಲ್ಲ ಎಂದು ಹವ್ಯಾಸಿ ಪ್ರವಾಸಿಗ ಕೃಷ್ಣ ಅಭಿಪ್ರಾಯಪಟ್ಟರು.

ಭಾಷೆಯ ತೊಂದರೆ :

ನನಗೆ ಕನ್ನಡ ಭಾಷೆ ಒಂದನ್ನು ಬಿಟ್ಟರೆ ಬೇರೆ ಬರುವುದಿಲ್ಲ. ಕಾಶ್ಮೀರಕ್ಕೆ ಹೊಗುವ ಮುನ್ನ ವಿಪರೀತ ಚಳಿಯಿಂದಾಗಿ ನನಗೆ ಉಸಿರಾಡುವುದು ಕಷ್ಟವಾಗಿತ್ತು. ಆಗ ಅಲ್ಲಿನ ಜನ ಸಹಾಯ ಮಾಡಲು ಬಂದಾಗ ನನಗೆ ಭಾಷೆಯ ಕೊರತೆ ಇತ್ತು. ಆಗೆಲ್ಲಾ ನನ್ನ ಮಡದಿಗೆ ಫೋನ್ ಮಾಡಿ ಕೊಡುತ್ತಿದ್ದೆ. ನನ್ನ ಮಡದಿ ಹಿಂದಿ ಶಿಕ್ಷಕಿಯಾಗಿರುವ ಕಾರಣ ಚೆನ್ನಾಗಿ ಹಿಂದಿ ಬರುತ್ತಿತ್ತು. ಇದರಿಂದ ನನಗೆ ಕಷ್ಟವಾಗುತ್ತಿರಲಿಲ್ಲ.

ಊಟ ಸೇರದೇ ಹೋದಾಗ ತಂಪು ಪಾನೀಯಗಳನ್ನು ಕುಡಿದು ಪ್ರಯಾಣ ಮುಂದುವರೆಸುತ್ತಿದ್ದೆ. ಕನ್ನಡ ನಾಡಿನ ಹೋಟೆಲ್ ಸಿಕ್ಕಾಗ ಅತೀವ ಸಂತೋಷವಾಗುತ್ತಿತ್ತು. ದೆಹಲಿಯ ಬಳಿ ನನ್ನ ಬೈಕಿಗೂ, ಕಾರಿಗೂ ಸ್ವಲ್ಪ ಅಪಘಾತವಾಯಿತು. ಆದರೆ ನನ್ನ ಪ್ರಯಾಣದ ಉದ್ದೇಶ ಕೇಳಿದ ನಂತರ ತೊಂದರೆ ಕೊಡದೆ ಕಳಿಸಿದರು. ಪ್ರತಿನಿತ್ಯ 800 ಕಿಮೀವರೆಗೆ ಪ್ರಯಾಣ ಮಾಡುತ್ತಿದ್ದೆ.

ಭಾರತ ಖಂಡಿತ ಮುಂದುವರೆಯುತ್ತಿದೆ. ರಸ್ತೆಗಳಂತೂ ವ್ಯವಸ್ಥಿತವಾಗಿದೆ. ನಮ್ಮ ಮಕ್ಕಳಿಗೆ ಒಂದೊಳ್ಳೆ ಅನುಕೂಲ ಇರುವಂತಹ ದೇಶವಾಗುತ್ತದೆ ಎಂಬ ಭರವಸೆಯಿಂದ ಆನಂಕದಕ್ಕೆ ಕಣ್ಣೀರು ಬರುತ್ತದೆ ಎಂದು ಹೇಳಿದರು.

ಇಷ್ಟೊಂದು ಭಾಷೆಗಳು, ಒಂದು ಕಡೆಯಿದ್ದಂತೆ ಸಂಸ್ಕೃತಿ ಮತ್ತೊಂದು ಕಡೆಗಿಲ್ಲ. ಇಷ್ಟು ವ್ಯತ್ಯಾಸದ ನಡುವೆಯೂ ದೇಶ ಒಂದಾಗಿದೆ ಎಂದರೆ ಖಂಡಿತ ಭಾರತದ ನೆಲದಲ್ಲಿ ಅಧ್ಯಾತ್ಮ ಶಕ್ತಿ ತುಂಬಿದೆ ಎಂಬುದನ್ನು ಅನುಭವದ ಮೂಲಕ ತಿಳಿಯಬಹುದು. ಪುಣ್ಯ ಮಾಡಿದವರು ಮಾತ್ರ ಭಾರತದಲ್ಲಿ ಹುಟ್ಟಲು ಸಾಧ್ಯ ಎಂಬ ಮಾತು ನಿಜಕ್ಕೂ ಸತ್ಯವಾದದ್ದು ಎಂದು ಕೃಷ್ಣ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಕುದೂರು ಗ್ರಾಮಸ್ಥರು ನನ್ನ ಪ್ರಯಾಣದ ಅನುಭವ ಕೇಳಲು ದಿನವೂ ಹತ್ತಾರು ಜನರು ನನ್ನ ಸುತ್ತುವರೆಯುತ್ತಾರೆ. ಅದನ್ನು ಹೇಳಲು ನನಗೆ ಖಂಡಿತ ಖುಷಿಯಾಗುತ್ತದೆ.

12ಕೆಆರ್ ಎಂಎನ್ 3,4,5.ಜೆಪಿಜಿ

ಕುದೂರು ಗ್ರಾಮದ ಕೃಷ್ಣ ಅಖಂಡ ಭಾರತ ಪ್ರವಾಸವನ್ನು ಮೋಟಾರು ಬೈಕಿನಲ್ಲಿ 13 ಸಾವಿರ ಕಿ.ಮೀ. ದೂರ ಪ್ರಯಾಣ ಮಾಡಿದರು.