ಸಾರಾಂಶ
ಮುಂದಿನ ದಿನಗಳಲ್ಲಿ ದ್ವಿಚಕ್ರ ವಾಹನ ಚಾಲಕರುಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ವಾಹನ ಚಾಲನೆಯಲ್ಲಿ ಮೊಬೈಲ್ ಬಳಸುವುದನ್ನು ನಿಲ್ಲಿಸಬೇಕು, ದ್ವಿಚಕ್ರ ವಾಹನದಲ್ಲಿ ಮೂರು ಜನ ಪ್ರಯಾಣ ನಿಷೇಧಿಸಲಾಗಿದೆ. ಇಲ್ಲವಾದಲ್ಲಿ ದಂಡ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ದ್ವಿಚಕ್ರ ವಾಹನ ಚಾಲಕರುಗಳಿಗೆ ಹೆಲ್ಮೆಟ್ ಕಡ್ಡಾಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪಟ್ಟಣದ ಪೊಲೀಸರು ಬೈಕ್ ಜಾಥಾ ನಡೆಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಕಾನೂನು ಮತ್ತು ಶಿಸ್ತು ವಿಭಾಗದ ಪಿಎಸ್ಐ ಮಂಜುನಾಥ್, ಸಂಚಾರಿ ಠಾಣೆ ಪಿಎಸ್ಐ ರಾಮಸ್ವಾಮಿ ನೇತೃತ್ವದಲ್ಲಿ ಎರಡು ಠಾಣೆಗಳ ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು. ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ಬೈಕ್ ಜಾಥಾ ನಡೆಸಿದ ಪೊಲೀಸರು ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿಕೊಳ್ಳಿ ಹಾಗೂ ದಂಡದಿಂದ ಮುಕ್ತರಾಗಿ ಎಂಬ ಘೋಷಣೆಯೊಂದಿಗೆ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಕಡ್ಡಾಯದ ಬಗ್ಗೆ ಅರಿವು ಮೂಡಿಸಿದರು.
ಮುಂದಿನ ದಿನಗಳಲ್ಲಿ ದ್ವಿಚಕ್ರ ವಾಹನ ಚಾಲಕರುಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ವಾಹನ ಚಾಲನೆಯಲ್ಲಿ ಮೊಬೈಲ್ ಬಳಸುವುದನ್ನು ನಿಲ್ಲಿಸಬೇಕು, ದ್ವಿಚಕ್ರ ವಾಹನದಲ್ಲಿ ಮೂರು ಜನ ಪ್ರಯಾಣ ನಿಷೇಧಿಸಲಾಗಿದೆ. ಇಲ್ಲವಾದಲ್ಲಿ ದಂಡ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಎಚ್ಚರಿಸಿದರು.ಮನೆ ಬಾಗಿಲು ಮುರಿದು ಚಿನ್ನಾಭರಣ, ನಗದು ಲೂಟಿ
ಮಳವಳ್ಳಿ:ಹಾಡಹಗಲೇ ಮನೆ ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಪಟ್ಟಣದ ಅಶೋಕ ನಗರದಲ್ಲಿ ನಡೆದಿದೆ.
ಬಡಾವಣೆಯ ಶ್ರೇಯಸ್ ಅವರು ತಮ್ಮ ಇನ್ನೊಂದು ಮನೆಗೆ ಕಾರ್ಯನಿಮಿತ್ತ ತೆರಳಿದ್ದ ವೇಳೆ ಕಳ್ಳರು ಬಾಗಿಲು ಮುರಿದು ಒಳನುಗ್ಗಿ ಬೀರುವಿನಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನಾಭರಣ ಹಾಗೂ 50 ಸಾವಿರ ರು. ದೋಚಿ ಪರಾರಿಯಾಗಿದ್ದಾರೆ.ಈ ಸಂಬಂಧ ಮನೆ ಮಾಲೀಕ ಶ್ರೇಯಸ್ ನೀಡಿರುವ ದೂರಿನ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.