ಸಾರಾಂಶ
ನಗರಸಭೆಯಿಂದ ಈಗಾಗಲೇ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಹೊಸಪೇಟೆ: ಸದೃಢ ದೇಶ ನಿರ್ಮಿಸಲು ಜನಸಾಮಾನ್ಯರಿಗೆ ದೊರೆತ ಅಪೂರ್ವ ಅವಕಾಶವೇ ಮತದಾನ. ಈ ಅಮೂಲ್ಯ ಹಕ್ಕನ್ನು ಯಾರೂ ಕಳೆದುಕೊಳ್ಳದೆ, ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ಮತದಾರರು ತಮ್ಮ ಕರ್ತವ್ಯ ಮೆರೆಯಬೇಕು ಎಂದು ಪತಂಜಲಿ ಯೋಗ ಸಮಿತಿಯ ದಕ್ಷಿಣ ಭಾರತದ ಪ್ರಭಾರ ಭವರ್‌ಲಾಲ್ ಆರ್ಯ ಹೇಳಿದರು.
ಮತದಾನದ ಜಾಗೃತಿಗಾಗಿ ಜಿಲ್ಲಾಡಳಿತ, ನಗರಸಭೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಿಂದ ಬುಧವಾರ ಆರಂಭವಾದ ಯೋಗ ಸಾಧಕರ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶೇ.100ರಷ್ಟು ಮತದಾನವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಪ್ರಯತ್ನ ಅಗತ್ಯ. ಬಿಸಿಲು, ರಜೆ ಮುಂತಾದ ಯಾವ ಕಾರಣವನ್ನೂ ನೀಡದೆ, ಮೇ 7ರಂದು ಎಲ್ಲರೂ ಮತಗಟ್ಟೆಗೆ ತೆರಳಿ ತಮ್ಮ ಮತ ಚಲಾಯಿಸಬೇಕು ಎಂದರು.ನಗರಸಭೆ ಪೌರಾಯುಕ್ತ ಚಂದ್ರಪ್ಪ ಮಾತನಾಡಿ, ನಗರಸಭೆಯಿಂದ ಈಗಾಗಲೇ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಬೆಳಗ್ಗೆ ಯೋಗ ಶಿಬಿರದಲ್ಲಿ ಪಾಲ್ಗೊಂಡು ಬಳಿಕ ಜನರಿಗೆ ಮತದಾನದ ಅರಿವು ಮೂಡಿಸಲು ಯೋಗಪಟುಗಳು ದ್ವಿಚಕ್ರ ವಾಹನ ಏರಿ ಹೊರಟಿರುವುದು ಒಂದು ಮಾದರಿ ಕೆಲಸ. ಎಲ್ಲರೂ ಈ ಕಳಕಳಿಯನ್ನು ಅರ್ಥ ಮಾಡಿಕೊಂಡು ಮತದಾನಕ್ಕೆ ಮುಂದಾಗಬೇಕು ಎಂದರು.
ನಗರಸಭೆಯ ಪರಿಸರ ಎಂಜಿನಿಯರ್ ಆರತಿ, ಪತಂಜಲಿಯ ರಾಜ್ಯ ಯುವ ಪ್ರಭಾರ ಕಿರಣಕುಮಾರ್, ಬಳ್ಳಾರಿ ಪ್ರಭಾರಿ ರಾಜೇಶ್ ಕರ್ವಾ, ಯೋಗ ಸಾಧಕರಾದ ಬಾಲಚಂದ್ರ ಶರ್ಮಾ, ಶ್ರೀರಾಮ್, ಅನಂತ ಜೋಶಿ, ಪ್ರಕಾಶ್ ಕುಲಕರ್ಣಿ, ಅಶೋಕ ಚಿತ್ರಗಾರ್, ಮಂಗಳಮ್ಮ, ಚಂದ್ರಿಕಾ ನಗರದ ಬಹುತೇಕ ಎಲ್ಲ ಯೋಗ ಕೇಂದ್ರಗಳ ಸಂಚಾಲಕರು, ಸಾಧಕರು ಇದ್ದರು.ರ‍್ಯಾಲಿ:
ನಗರದ ಸ್ವಾತಂತ್ರ್ಯ ಉದ್ಯಾನದಿಂದ ಆರಂಭವಾದ ಮತದಾನ ಜಾಗೃತಿ ಬೈಕ್ ರ‍್ಯಾಲಿ, ಕನಕದಾಸ ವೃತ್ತ, ಪಟೇಲ್ ನಗರ, ಅಂಬೇಡ್ಕರ್ ವೃತ್ತ, ರಾಮಾ ಟಾಕೀಸ್, ಅಶ್ವತ್ಥ ನಾರಾಯಣ ಕಟ್ಟೆ, ಚಿತ್ರಕೇರಿ, ಉಕ್ಕಡ ಕೇರಿ, ಆಕಾಶವಾಣಿ, ಈಶ್ವರನಗರ ಮಾರ್ಗವಾಗಿ ಬಳ್ಳಾರಿ ರಸ್ತೆ, ಬಸ್ ಡಿಪೋ, ಸಿದ್ಧಲಿಂಗಪ್ಪ ಚೌಕಿ ಮುಂದಿನಿಂದ ಮೀರ್ ಆಲಂ ಟಾಕೀಸ್, ಮೂರಂಗಡಿ ಸರ್ಕಲ್, ದೊಡ್ಡ ಮಸೀದಿ ಮೂಲಕ ನಗರಸಭೆ ಆವರಣದಲ್ಲಿ ಕೊನೆಗೊಂಡಿತು.ವಿಶೇಷ ಯೋಗ:
ಬೈಕ್ ರ‍್ಯಾಲಿಗೆ ಮೊದಲಾಗಿ ಬೆಳಗ್ಗೆ 5.15ರಿಂದ 6.45ರವರೆಗೆ ಭವರ್‌ಲಾಲ್ ಆರ್ಯ ಅವರಿಂದ ವಿಶೇಷ ಯೋಗ ತರಬೇತಿ ನಡೆಯಿತು. ವಯಸ್ಕರಿಗೆ ಸಾಮಾನ್ಯವಾಗಿ ಯೋಗಿಕ್ ಜಾಗಿಂಗ್ ಕಷ್ಟವಾಗುತ್ತದೆ. ಅದನ್ನು ಸುಲಭವಾಗಿ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ಲಯಬದ್ಧವಾದ ತಾಳಕ್ಕೆ ತಕ್ಕಂತೆ ದೇಹವನ್ನು ದಂಡಿಸುವ ವಿಧಾನ ತೋರಿಸಿದರು. ಪದ್ಮಾಸನದ ಸ್ಥಿತಿಯಲ್ಲಿ ಸುಲಭವಾಗಿ ಮಾಡಬಹುದಾದ ಹಾಗೂ ದೈಹಿಕ, ಮಾನಸಿಕ ದೃಢತೆಗೆ ಕಾರಣವಾಗುವ ಆಸನಗಳ ಮಹತ್ವವನ್ನು ತಿಳಿಸಿಕೊಟ್ಟರು.