ಸಾರಾಂಶ
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯವು ನಡೆಸುತ್ತಿರುವ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ಇಂದಿನಿಂದ ಆ. 31ರವರೆಗೆ ಬಂಡೀಪುರದಿಂದ ಬೀದರ್‌ವರಗೆ ಹಮ್ಮಿಕೊಂಡಿರುವ ಮೂರು ದಿನಗಳ ಬೈಕ್ ಜಾಥಾಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಕೇಂದ್ರದ ಬಳಿ ಶುಕ್ರವಾರ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯವು ನಡೆಸುತ್ತಿರುವ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ಇಂದಿನಿಂದ ಆ. 31ರವರೆಗೆ ಬಂಡೀಪುರದಿಂದ ಬೀದರ್‌ವರಗೆ ಹಮ್ಮಿಕೊಂಡಿರುವ ಮೂರು ದಿನಗಳ ಬೈಕ್ ಜಾಥಾಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಕೇಂದ್ರದ ಬಳಿ ಶುಕ್ರವಾರ ಚಾಲನೆ ನೀಡಲಾಯಿತು.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರಾದ ಎಸ್. ಪ್ರಭಾಕರನ್ ಅವರು ಹಸಿರು ನಿಶಾನೆ ತೋರುವ ಮೂಲಕ ಬೈಕ್ ಜಾಥಾಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನಿಂದ ಮೂರು ದಿನಗಳವರೆಗೆ ಹಮ್ಮಿಕೊಳ್ಳಲಾಗಿರುವ ಬೈಕ್ ಜಾಥಾದಲ್ಲಿ 20 ಬೈಕ್ ಸವಾರರು ಪಾಲ್ಗೊಳ್ಳುತ್ತಿದ್ದು, ಸಾರ್ವಜನಿಕರಿಗೆ ಯುವಜನರಿಗೆ ಮದ್ಯ ಮಾದಕ ವಸ್ತುಗಳಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಲಿದ್ದಾರೆ. ಮಹತ್ವದ ಉದ್ದೇಶ ಹೊಂದಿರುವ ಬೈಕ್ ಜಾಗೃತಿ ಜಾಥಾ ಯಶಸ್ವಿಯಾಗಲಿ ಎಂದು ಹಾರೈಸಿದರು.ರಾಜ್ಯ ಎನ್.ಎಸ್.ಎಸ್. ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಮಾತನಾಡಿ, ನಶಾ ಮುಕ್ತ ಭಾರತ ಅಭಿಯಾನದ ಹಿನ್ನೆಲೆಯಲ್ಲಿ ಜಾಗೃತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅರಣ್ಯ ಇಲಾಖೆ, ಗೃಹ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಎನ್.ಎಸ್.ಎಸ್, ಎನ್.ಸಿ.ಸಿ. ಅವರ ಸಹಕಾರ ಸಹಭಾಗಿತ್ವದೊಂದಿಗೆ ಮೂರು ದಿನಗಳ ಕಾಲ ಬೈಕ್ ಜಾಥಾವನ್ನು ನಡೆಸಲಾಗುತ್ತಿದೆ ಎಂದರು.
ಬಂಡೀಪುರದಿಂದ ಆರಂಭಿಸಿ ಬೀದರ್ ವರೆಗೆ ಬೈಕ್ ಜಾಥಾ ಮಾಡಲಾಗುತ್ತಿದೆ. ಹೋಗುವ ದಾರಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಶಾಲಾ ಕಾಲೇಜುಗಳು, ಪ್ರಮುಖ ವೃತ್ತಗಳಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಗುತ್ತಿದೆ. ವಿಶೇಷವಾಗಿ ಯುವಜನರಿಗೆ ಮದ್ಯ ಮಾದಕ ವಸ್ತುಗಳ ವಿರುದ್ದ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ಡಾ. ಪ್ರತಾಪ್ ಲಿಂಗಯ್ಯ ತಿಳಿಸಿದರು. ಈ ಸಂದರ್ಭದಲ್ಲಿ ಇತರೆ ಇಲಾಖೆಗಳ ಅಧಿಕಾರಿಗಳು ಇದ್ದರು.