ಸಾರಾಂಶ
ಧಾರವಾಡ: ಅಯೋಧ್ಯೆಯಲ್ಲಿ ಜ. 22ರಂದು ಶ್ರೀರಾಮನ ಮಂದಿರ ಉದ್ಘಾಟನೆ ಹಾಗೂ ನಂತರದಲ್ಲಿ ಸಾರ್ವಜನಿಕರಿಗೆ ಶ್ರೀರಾಮನ ದರ್ಶನಕ್ಕೂ ಅವಕಾಶ ಕಲ್ಪಿಸಿದ ಹಿನ್ನಲೆಯಲ್ಲಿ ಧಾರವಾಡದಿಂದ ನಾಲ್ವರು ಯುವಕರು ತಮ್ಮ ಎರಡು ಬೈಕ್‌ಗಳ ಮೂಲಕ ಶ್ರೀರಾಮನ ದರ್ಶನದ ಸಾಹಸಕ್ಕೆ ಕೈ ಹಾಕಿದ್ದಾರೆ.
ಧಾರವಾಡದ ದರ್ಶನ ಪವಾರ್ ಹಾಗೂ ದರ್ಶನ್ ಭಾವೆ, ಬಾಲರಾಜ ದೊಡಮನಿ ಹಾಗೂ ಲಕ್ಷ್ಮಣ ಹಂಚಿನಮನಿ ಎಂಬುವರು ಶ್ರೀರಾಮನ ಮೇಲಿನ ಭಕ್ತಿ ಮೆರೆಯಲು ಮಂಗಳವಾರದಿಂದ ತಮ್ಮ ಪ್ರಯಾಣವನ್ನು ಶುರು ಮಾಡಿದ್ದು, ಸ್ನೇಹಿತರು ಶುಭ ಕೋರಿದರು.ಸುಮಾರು 2 ಸಾವಿರ ಕಿ.ಮೀ. ದೂರವಿರುವ ದೂರದ ಅಯುಧ್ಯೆಗೆ ಜೈ ಶ್ರೀರಾಮ ಎಂದು ಘೋಷಣೆ ಕೂಗುವ ಮೂಲಕ ಹೊರಟಿರುವ ಯುವಕರು ಜ. 21ರಂದು ಅಯೋಧ್ಯೆಗೆ ತಲುಪುವ ಯೋಜನೆ ಹೊಂದಿದ್ದಾರೆ. ರಾಯಲ್ಡ್ ಎನಫೀಲ್ಡ್ ಹಾಗೂ ಬೆನಾಲಿ ಎಂಬ ಬೈಕ್‌ಗಳ ಮೂಲಕ ಹೊರಟಿದ್ದಾರೆ. ಶ್ರೀರಾಮನ ಮಂದಿರ ಉದ್ಘಾಟನೆಯಾಗುತ್ತಿದ್ದು ಅವರ ಭಕ್ತರಾದ ತಾವು ದರ್ಶನ ಪಡೆಯಲು ಬೈಕ್ ಮೂಲಕ ಹೋಗಲು ಯೋಜಿಸಿ ಹೊರಟಿಸಿದ್ದೇವೆ. ಅಂದಾಜು ₹2 ಲಕ್ಷ ವೆಚ್ಚ ಬರಲಿದ್ದು, ದೇವರ ದರ್ಶನದ ಎದುರು ಹಣ ದೊಡ್ಡದಲ್ಲ. ಇದೊಂದು ಸದಾವಕಾಶ ಎಂದು ದರ್ಶನ ಬಾವೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಆರ್ಯ ವೈಶ್ಯ ಸಮಾಜದಿಂದ ರಾಮೋತ್ಸವ: ಲೋಕನಾಥ ಹೆಬಸೂರನವಲಗುಂದ: ಆಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ಮಂದಿರ ಹಾಗೂ ಪ್ರಾಣ ಪ್ರತಿಷ್ಠಾಪನೆ ನೇರವೇರುತ್ತಿರುವ ಸಂದರ್ಭದಲ್ಲಿ ನವಲಗುಂದದ ಆರ್ಯವೈಶ್ಯ ಸಮಾಜದ ವತಿಯಿಂದ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಛತ್ರ, ಚಾಮರಸಹಿತವಾಗಿ ಶೋಭಾಯಾತ್ರೆ, ಶ್ರೀರಾಮ ತಾರಕ ಹೋಮ, ಶ್ರೀರಾಮನಾಮ ಜಪ, ಪೂಜೆಗಳನ್ನು ಹಾಗೂ ಪ್ರಸಾದ ವಿತರಣೆ ಮಾಡಲಾಗುವುದು ಎಂದು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಲೋಕನಾಥ ಹೆಬಸೂರ ತಿಳಿಸಿದರು.ಪಟ್ಟಣದಲ್ಲಿ ಮಂಗಳವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜ. 18ರಿಂದ 22ರ ವರೆಗೆ ವಿವಿಧ ಪೂಜಾ ಹಾಗೂ ಭವ್ಯ ಮೂರ್ತಿಗಳ ಮೆರವಣಿಗೆ ಜರುಗಲಿದೆ. ಜ. 18ರಂದು ಪ್ರಭು ಶ್ರೀ ರಾಮ, ಲಕ್ಷ್ಮಣ, ಸೀತಾ ಹಾಗೂ ಆಂಜನೇಯ ಮೂರ್ತಿಗಳ ಭವ್ಯ ಮೆರವಣಿಗೆ ಹಾಗೂ ಸಂಜೆ ಗಣಪತಿ ದೇವಸ್ಥಾನದಿಂದ ಶ್ರೀ ರಾಮ ದೇವರ ದೇವಸ್ಥಾನದ ವರೆಗೆ ವಸ್ತ್ರ ಸಂಹಿತೆಯೊಂದಿಗೆ ಶ್ರೀರಾಮ ಜಪ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಜ. 19ರಂದು ಸಂಜೆ ಅಮ್ಮನವರ ಪಲ್ಲಕ್ಕಿ ಸೇವೆ ಶ್ರೀರಾಮ್ ಜಪ, ಶ್ರೀ ಸೀತಾರಾಮ ಕಲ್ಯಾಣ ಹಾಗೂ ಮಹಾಮಂಗಳಾರತಿ ನಡೆಯುತ್ತದೆ. ಜ. 20 ರಂದು ಸಂಜೆಪ್ರಭು ಶ್ರೀ ರಾಮನ ಹಾಡುಗಳು, ಶ್ರೀರಾಮ ಜಪ, ಹನುಮಾನ ಚಾಲೀಸಾ ಪಠಣ, ಮಕ್ಕಳಿಗೆ ರಾಮಾಯಣ ಕಥೆಯ ಚಿತ್ರಣ ಹಾಗೂ ಕಥೆಯ ವಿವರಣೆ ಸ್ಪರ್ಧೆ, ಮಹಾ ಮಂಗಳಾರತಿ ಆಯೋಜಿಲಾಗಿದೆ. ಜ. 21ರಂದು ಸಂಜೆ ಶ್ರೀ ರಾಮನ ರಥೋತ್ಸವ, ಉಯ್ಯಾಲೆ ಉತ್ಸವ, ಶ್ರೀರಾಮ ಜಪ, ಮಹಾ ಮಂಗಳಾರತಿ ನಡೆಯುವುದು. ಜ. 22ರಂದು ಬೆಳಗ್ಗೆ ಶ್ರೀರಾಮನಾಮ ಜಪ, ಸಂಕಲ್ಪ, ಪೂಣ್ಯಾಹವಾಚನ, ನವಗ್ರಹ ಪೂಜಾ, ಶ್ರೀನೇಮ ತಾರಕ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ. ಪ್ರತಿ ದಿನ ಕಾರ್ಯಕ್ರಮದ ನಂತರ ಮಹಾಪ್ರಸಾದ ಜರುಗಲಿದೆ ಎಂದು ಹೆಬಸೂರ್ ತಿಳಿಸಿದರು.ಈ ವೇಳೆ ಅಜಿತ ಆನೇಗುಂದಿ, ಶಂಕರ ಧಾರವಾಡ, ಎಸ್.ಎನ್. ಡಂಬಳ, ಮುರಳೀಧರ ಹಬಸೂರ, ಉಷಾರಾಣಿ ಧಾರವಾಡ, ಶ್ರೀದೇವಿ ಆನೇಗುಂದಿ, ಸರಸ್ವತಿ ಹರಿಹರ, ಡಿ.ಜಿ. ಹೆಬಸೂರ, ಮನೋಹರ ಇಂಗಳಹಳ್ಳಿ, ಈಶ್ವರ ಹೆಬಸೂರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.