ಸಾರಾಂಶ
ಓವರ್ ಲೋಡ್ ಹಾಕಿ ಅತಿವೆಗವಾಗಿ ಟಿಪ್ಪರ್ ಗಳು ಚಲಿಸೋದರಿಂದ ಈ ರೀತಿಯ ಘಟನೆಗಳು ಮರುಕಳಿಸುತ್ತಲೆ ಇವೆ. ಟಿಪ್ಪರ್ ಹಾವಳಿ ತಡೆಯೋಕೆ ಹೋದ್ರೆ ಆರ್ ಟಿ ಓ ಕಚೇರಿಗೆ ನುಗ್ಗಿ ದಾಂದಲೆ ಮಾಡ್ತಾರೆ. ನಾನು ಶಾಸಕನಾದ ಮೇಲೆ ಹೊಸ ಲಾರಿಗಳಿಗೆ ಅನುಮತಿ ನೀಡಿಲ್ಲ ಎನ್ನುತ್ತಾರೆ ಶಾಸಕ ಪ್ರದೀಪ್ ಈಶ್ವರ್.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಲ್ಲಿ ಸಾಗಣೆಯ ಟಿಪ್ಪರ್ ಹರಿದು ದ್ವಿಚಕ್ರ ವಾಹನ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರಿಂದ ಕುಪಿತರಾದ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ತಡೆದು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44 ರ ಚದುಲಪುರ ಗೇಟ್ ಬಳಿ ನಡೆದಿದೆ.ಮೃತ ವ್ಯಕ್ತಿಯನ್ನು ತಾಲೂಕಿನ ಕುಪ್ಪಹಳ್ಳಿ ಗ್ರಾಮದ 50 ವರ್ಷದ ಕೃಷ್ಣಪ್ಪ ಎಂದು ಗುರ್ತಿಸಲಾಗಿದೆ. ಈತ ಬೈಕ್‌ನಲ್ಲಿ ಊರಿನ ಕಡೆ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಟಿಪ್ಪರ್ ಚಕ್ರಕ್ಕೆ ಸಿಕ್ಕಿ ಸ್ಥಳದಲ್ಲಿಯೇ ಮೃತನಾಗಿದ್ದಾನೆ. ಟಿಪ್ಪರ್‌ಗಳ ಹಾವಳಿಯಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಆದರೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಸ್ಥಳಕ್ಕೆ ನಂದಿಗಿರಿಧಾಮ ಪೊಲೀಸರೊಂದಿಗೆ ಭೇಟಿ ನೀಡಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಐ.ಆರ್,ಖಾಸಿಂ, ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಈ ಘಟನೆ ಬಗ್ಗೆ ಪ್ರತಿಕ್ರಿಯೆಸಿರುವ ಶಾಸಕ ಪ್ರದೀಪ್ ಈಶ್ವರ್ ಓವರ್ ಲೋಡ್ ಹಾಕಿ ಅತಿವೆಗವಾಗಿ ಟಿಪ್ಪರ್ ಗಳು ಚಲಿಸೋದರಿಂದ ಈ ರೀತಿಯ ಘಟನೆಗಳು ಮರುಕಳಿಸುತ್ತಲೆ ಇವೆ. ಟಿಪ್ಪರ್ ಹಾವಳಿ ತಡೆಯೋಕೆ ಹೋದ್ರೆ ಆರ್ ಟಿ ಓ ಕಚೇರಿಗೆ ನುಗ್ಗಿ ದಾಂದಲೆ ಮಾಡ್ತಾರೆ. ನಾನು ಶಾಸಕನಾದ ಮೇಲೆ ಹೊಸ ಲಾರಿಗಳಿಗೆ ಅನುಮತಿ ನೀಡಿಲ್ಲ. ಈ ಸಮಸ್ಯೆಗೆ ಅಧಿವೇಶದಲ್ಲಿ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತೇನೆ ಎಂದರು.