ಅಣಜಿ ಕೆರೆ ಏರಿ ಪೊದೆಯಲ್ಲಿ ಬೈಕ್, ಅಸ್ಥಿಪಂಜರ ಪತ್ತೆ!

| Published : Oct 23 2024, 12:36 AM IST

ಅಣಜಿ ಕೆರೆ ಏರಿ ಪೊದೆಯಲ್ಲಿ ಬೈಕ್, ಅಸ್ಥಿಪಂಜರ ಪತ್ತೆ!
Share this Article
  • FB
  • TW
  • Linkdin
  • Email

ಸಾರಾಂಶ

15 ದಿನಗಳ ಹಿಂದೆ ನಿಗೂಢ ಕಣ್ಮರೆಯಾಗಿದ್ದ ಎನ್ನಲಾದ ವ್ಯಕ್ತಿಯು ಅಸ್ಥಿಪಂಜರ ರೂಪದಲ್ಲಿ ಬೈಕ್ ಸಮೇತ ತಾಲೂಕಿನ ಅಣಜಿ ಕೆರೆ ಏರಿಯ ಬಳಿ ಪತ್ತೆಯಾದ ಘಟನೆ ಮಂಗಳವಾರ ಮಧ್ಯಾಹ್ನ ವರದಿಯಾಗಿದೆ.

-ಕಡ್ಲೇಬಾಳು ಗ್ರಾಮದ ತಿಪ್ಪೇಶನ ಶವ ಎಂಬುದಾಗಿ ಪ್ರಾಥಮಿಕ ಮಾಹಿತಿ - ಹಿರಿಯ ಕಾಂಗ್ರೆಸ್ ಮುಖಂಡ ಶ್ಯಾಗಲೆ ಹನುಮಂತಪ್ಪ, ಶಾಂತಮ್ಮ ಪುತ್ರ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

15 ದಿನಗಳ ಹಿಂದೆ ನಿಗೂಢ ಕಣ್ಮರೆಯಾಗಿದ್ದ ಎನ್ನಲಾದ ವ್ಯಕ್ತಿಯು ಅಸ್ಥಿಪಂಜರ ರೂಪದಲ್ಲಿ ಬೈಕ್ ಸಮೇತ ತಾಲೂಕಿನ ಅಣಜಿ ಕೆರೆ ಏರಿಯ ಬಳಿ ಪತ್ತೆಯಾದ ಘಟನೆ ಮಂಗಳವಾರ ಮಧ್ಯಾಹ್ನ ವರದಿಯಾಗಿದೆ.

ತಾಲೂಕಿನ ಕಡ್ಲೇಬಾಳು ಗ್ರಾಮದ ವಾಸಿ, ತಿಪ್ಪೇಶ (42) ಕಾಣೆಯಾಗಿದ್ದರು. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಡ್ಲೇಬಾಳು ಗ್ರಾಪಂ ಮಾಜಿ ಸದಸ್ಯೆ ಶಾಂತಮ್ಮ, ಶ್ಯಾಗಲೆ ಹನುಮಂತಪ್ಪ ಅವರ ಮಗ ತಿಪ್ಪೇಶ, ಮನೆಯಿಂದ ಕಾಣೆಯಾದ ದಿನದಿಂದ ಕುಟುಂಬಸ್ಥರು, ಸ್ನೇಹಿತರು ಸಾಕಷ್ಟು ಹುಡುಕಾಟ ನಡೆಸಿದ್ದರು. ಠಾಣೆಗೆ ದೂರು ನೀಡಿದ್ದರು.

ಕಾಫಿಸೀಮೆಗೆ ಕೂಲಿ ಕೆಲಸಕ್ಕೆ ಹೋಗಿರಬಹುದೆಂಬ ಆಶಾಭಾವನೆಯಲ್ಲಿ ಪೋಷಕರು ಇದ್ದರು. ಆದರೆ, ಅಣಜಿ ಕೆರೆ ಏರಿ ಮೇಲೆ ತಿಪ್ಪೇಶನ ಅಸ್ಥಿಪಂಜರ ಪತ್ತೆಯಾಗಿದೆ. ಇದು ಕುಟುಂಬವನ್ನು ದುಃಖದ ಕೂಪಕ್ಕೆ ನೂಕಿದೆ.

ವಿಷಯ ತಿಳಿಯುತ್ತಿದ್ದಂತೆ ತಿಪ್ಪೇಶ ಅವರ ಬಂಧುಗಳು, ಸ್ನೇಹಿತರು, ಗ್ರಾಮಸ್ಥರು ಅಣಜಿ ಕೆರೆ ಬಳಿ ದೌಡಾಯಿಸಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ಗ್ರಾಮಾಂತರ ಡಿವೈಎಸ್‌ಪಿ ಬಿ.ಎಸ್. ಬಸವರಾಜ, ವೃತ್ತ ನಿರೀಕ್ಷಕ ಕಿರಣಕುಮಾರ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು. ಪ್ರಕರಣ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕುರಿಗಾಯಿಗಳ ಕಣ್ಣಿಗೆ ಬಿದ್ದ ಬೈಕ್‌ :

ಅಣಜಿ ಕೆರೆ ಏರಿ ಬದಿಯ ಕೆರೆ ಹೊನ್ನಮ್ಮ ದೇವಿ ದೇವಸ್ಥಾನ ಕಡೆ ಕುರಿ ಮೇಯಿಸಲು ಹೋಗಿದ್ದ ಕುರಿಗಾಯಿಗಳು ಅಲ್ಲಿ ಬೈಕ್‌ ಬಿದ್ದಿರುವುದು ಕಂಡಿದ್ದಾರೆ. ಬೈಕ್‌ ಸಮೀಪಕ್ಕೆ ಹೋಗಿ ನೋಡಿದಾಗ, ಬೈಕ್‌ ಪಕ್ಕ ಶವ ಸಂಪೂರ್ಣ ಕೊಳೆತು ಅಸ್ಥಿಪಂಜರ ಕಾಣುತ್ತಿರುವ ಬಗ್ಗೆ ತಕ್ಷಣವೇ ದಾರಿಹೋಕರು, ಗ್ರಾಮಸ್ಥರು, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ವಿಷಯ ತಿಳಿದ ಗ್ರಾಮಾಂತರ ವೃತ್ತ ನಿರೀಕ್ಷಕ ಕಿರಣಕುಮಾರ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿದರು. ಬೈಕ್ ನಂಬರ್ ಪರಿಶೀಲಿಸಿದಾಗ ಅದು ಕಡ್ಲೇಬಾಳು ವಿಳಾಸ ತೋರಿಸಿದೆ. ಗ್ರಾಮಸ್ಥರಿಗೆ ವಿಚಾರಿಸಿದಾಗ, ಕಡ್ಲೆಬಾಳು ಗ್ರಾಮದಿಂದ ತಿಪ್ಪೇಶ ನಾಪತ್ತೆಯಾಗಿದ್ದ ವಿಚಾರ ಗೊತ್ತಾಗಿದೆ.

ಪೊಲೀಸರು ಗ್ರಾಮಸ್ಥರನ್ನು ಕರೆಸಿಕೊಂಡು, ಶವವನ್ನು ಗುರುತಿಸಿದ್ದಾರೆ. ಸದ್ಯಕ್ಕೆ ಕಡ್ಡೇಬಾಳು ಗ್ರಾಮದ ತಿಪ್ಪೇಶ ಸಾವಿನ ವಿಚಾರ ನಿಗೂಢವಾಗಿದೆ. ಇದು ಅಪಘಾತದಿಂದ ಆದ ಸಾವೇ ಅಥವಾ ಯಾರಾದರೂ ಕೊಲೆ ಮಾಡಿ, ಶವ ಕೆರೆ ಬಳಿ ಹಾಕಿದ್ದಾರಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- - - -22ಕೆಡಿವಿಜಿ11: ದಾವಣಗೆರೆ ತಾಲೂಕು ಅಣಜಿ ಕೆರೆ ಏರಿ ಪೊದೆಯಲ್ಲಿ ಅಸ್ಥಿಪಂಜರ ಸಮೇತ ಪತ್ತೆಯಾದ ಬೈಕ್‌.