ಸಾರಾಂಶ
ದೇವರ ಹಿಪ್ಪರಗಿ: ದೇವರ ಹುಂಡಿ, ಬೈಕ್ ಹಾಗೂ ಮನೆ ಕಳ್ಳತನ ಮಾಡುತ್ತಿದ್ದ ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ತಾಪುರ ತಾಲೂಕಿನ ಮಲಘಾಣ ಗ್ರಾಮದ ಅನಿಲಕುಮಾರ ಭೀಮರಾಯ ಬಾಗೋಡಿ(35), ಯಾದಗಿರಿ ತಾಲೂಕಿನ ಚಾಮನಾಳ ಗ್ರಾಮದ ವೆಂಕಟೇಶ ಭೀಮರಾಯ ನೀಡಗಿ(18) ಹಾಗೂ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಶರಣಯ್ಯ ಸ್ವಾಮಿ ಗೊಬ್ಬಿ (35) ಬಂಧಿತ ಆರೋಪಿಗಳು. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳ ಸುಮಾರು ₹4.15 ಲಕ್ಷ ಮೊತ್ತದ 10 ಬೈಕ್ ವಶಕ್ಕೆ ಪಡೆಯಲಾಗಿದೆ.ಈಚೆಗೆ ದೇವರಹಿಪ್ಪರಗಿ ಠಾಣೆ ವ್ಯಾಪ್ತಿಯಲ್ಲಿ ಬೈಕ್, ಮನೆ ಹಾಗೂ ದೇವಸ್ಥಾನ ಹುಂಡಿ ಕಳ್ಳತನ ಪ್ರಕರಣಗಳು ಹೆಚ್ಚಿದ್ದವು. ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಎಂ. ಮಾರಿಹಾಳ ಹಾಗೂ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಮತ್ತು ವಿಜಯಪುರ ಗ್ರಾಮೀಣ ವೃತ್ತದ ಡಿಎಸ್ಪಿ ಜಿ.ಎಚ್.ತಳಕಟ್ಟಿ ಅವರ ನೇತೃತ್ವದಲ್ಲಿ ವಿಜಯಪುರ ಗ್ರಾಮೀಣ ಸಿಪಿಐ ಆನಂದರಾವ್ ಎಸ್.ಎನ್ ಹಾಗೂ ದೇವರಹಿಪ್ಪರಗಿ ಪೊಲೀಸ್ ಠಾಣೆ ಪಿಎಸ್‌ಐ ತಿಪರಡ್ಡಿ, ಎಸ್.ಬಿ.ನಡುವಿನಕೇರಿ ಹಾಗೂ ಸಿಬ್ಬಂದಿ ಎಸ್.ಎಸ್. ಸಿನ್ನೂರ, ಎಂ.ಎಸ್. ಮುಜಾವರ, ಗುರು ಸಿಂಗೆ, ಆರ್.ಬಿ.ಕುಂಬಾರ, ಕೆ.ವೈ.ಕರಿಕಟ್ಟಿ, ಬಿ.ಎಸ್.ಮೇಡೆದಾರ, ವಿ.ಎಚ್.ಶಾಂತಗಿರಿ ಹಾಗೂ ಪೊಲೀಸ್ ಪೇದೆ ತೌಸೀಪ ಎಂ.ಪಿ.ಜಾವೀದ, ಎನ್.ವೈ.ಬಿ.ಭಜಂತ್ರಿ, ವಿ.ಎಲ್. ಕೆಳಗಿನಮನಿ, ಆರ್.ಎಲ್. ಬಿರಾದಾರ, ಎಸ್.ಎಸ್.ಬಿರಾದಾರ, ಸಂಜೀವ ಹೊಸಮನಿ ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು.
ಜ.11ರ ಬೆಳಗ್ಗೆ 5-30 ಗಂಟೆ ಸುಮಾರಿಗೆ ಪಟ್ಟಣದ ಮಡಿವಾಳ ಮಾಚಿದೇವರ ದೇವಸ್ಥಾನದ ಹತ್ತಿರ ಅನುಮಾನಾಸ್ಪದವಾಗಿ ಕಂಡುಬಂದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.