ಪುಂಡರಿಂದ ಬೈಕ್ ವ್ಹೀಲಿಂಗ್, ಗಾಂಜಾ ಮಾರಾಟ: ರೈತ ಸಂಘದಿಂದ ನೇರ ಆರೋಪ

| Published : Mar 21 2024, 01:08 AM IST

ಪುಂಡರಿಂದ ಬೈಕ್ ವ್ಹೀಲಿಂಗ್, ಗಾಂಜಾ ಮಾರಾಟ: ರೈತ ಸಂಘದಿಂದ ನೇರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಪುಂಡರಿಂದ ಬೈಕ್ ವ್ಹೀಲಿಂಗ್, ಗಾಂಜಾ ಮಾರಾಟ ಸೇರಿದಂತೆ ವಿದ್ಯಾರ್ಥಿಗಳಿಗೆ ಹಾಗೂ ಅಪ್ರಾಪ್ತರಿಗೆ ರಸ್ತೆ ರಸ್ತೆಗಳಲ್ಲಿ ರ‍್ಯಾಗಿಂಗ್ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ನವ ಕರ್ನಾಟಕ ರಾಜ್ಯ ರೈತ ಸಂಘದಿಂದ ಅರಸೀಕೆರೆ ತಹಸೀಲ್ದಾರ್ ರುಕಿಯಾ ಬೇಗಂಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ತಹಸೀಲ್ದಾರ್ ರುಕಿಯಾ ಬೇಗಂಗೆ ಮನವಿ । ಪುಂಡರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಶಾಲಾ ಕಾಲೇಜುಗಳ ಬಳಿ ಪುಂಡರಿಂದ ಬೈಕ್ ವ್ಹೀಲಿಂಗ್, ಗಾಂಜಾ ಮಾರಾಟ ಸೇರಿದಂತೆ ವಿದ್ಯಾರ್ಥಿಗಳಿಗೆ ಹಾಗೂ ಅಪ್ರಾಪ್ತರಿಗೆ ರಸ್ತೆ ರಸ್ತೆಗಳಲ್ಲಿ ರ‍್ಯಾಗಿಂಗ್ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ನವ ಕರ್ನಾಟಕ ರಾಜ್ಯ ರೈತ ಸಂಘದಿಂದ ತಹಸೀಲ್ದಾರ್ ರುಕಿಯಾ ಬೇಗಂಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ನಗರದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ ನಂತರ ಜಿಲ್ಲಾ ಘಟಕದ ಅಧ್ಯಕ್ಷ ದಯಾನಂದ್ ಮಾತನಾಡಿ, ಅರಸೀಕೆರೆ ತಾಲೂಕಿನ ಗ್ರಾಮೀಣ ಪ್ರದೇಶಗಳು ಸೇರಿದಂತೆ ನಗರದಲ್ಲಿ ಕಾನೂನು ಸುವ್ಯವಸ್ಥೆ ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಿದೆ. ಶಾಲಾ ಕಾಲೇಜುಗಳ ಬಳಿ ಮತ್ತು ರಸ್ತೆ ರಸ್ತೆಗಳಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸದವರು ಈ ಕೃತ್ಯಗಳಲ್ಲಿ ಭಾಗವಹಿಸಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವುದಲ್ಲದೇ, ಅವರ ಮನೆಗಳ ಬಳಿ ಬೈಕ್ ವ್ಹೀಲಿಂಗ್ ಮಾಡುವ ಮೂಲಕ ಕಿರಿ ಕಿರಿ ಉಂಟು ಮಾಡಿ ಅಪಾಯವನ್ನು ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

ಗಾಂಜಾ ಮಾರಾಟ ಮಾಡುವ ಜಾಲದಲ್ಲಿ ಅಪ್ರಾಪ್ತ ವಯಸ್ಸಿನವರು ಹೆಚ್ಚಾಗಿದ್ದು, ಬೈಕ್ ವ್ಹೀಲಿಂಗ್ ಮಾಡುವುದರ ಮೂಲಕ ಸಂಚಾರ ಸುವ್ಯವಸ್ಥೆಗೆ ಸವಾಲಾಗಿರುವ ಇವರ ಮೇಲೆ ಕ್ರಮ ಸ್ಥಳೀಯ ಪೊಲೀಸ್‌ ಇಲಾಖೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇಂತಹ ಬೆಳವಣಿಗೆಗಳಿಂದ ಕಾನೂನುಬಾಹಿರ ಚಟುವಟಿಕೆಗಳು ನಡೆಯಲು ಇಲಾಖೆ ನಿರ್ಲಕ್ಷವೇ ಮೂಲ ಕಾರಣವಾಗಿದೆ. ನಗರದ ಹಾಸನ ರಸ್ತೆಯಲ್ಲಿ ಇತ್ತೀಚೆಗ ಗಾಂಜಾ ಸೇವಿಸಿದ್ದ ಹದಿನೈದು ವರ್ಷದ ಬಾಲಕ ಮಾಡಿದ ಅಪಘಾತ ಪ್ರಕರಣದಲ್ಲಿ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಅಪರಾಧ ಮಾಡದ ಎಷ್ಟೋ ರೈತರು ಮತ್ತು ಅಮಾಯಕರು ಇಂದು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. ಸಮಾಜಕ್ಕೆ ಕಂಟಕವಾಗಿರುವ ಇಂತಹ ಕೃತ್ಯಗಳಲ್ಲಿ ಭಾಗಿಯಾದವರ ಬಗ್ಗೆ ಮೃದು ಧೋರಣೆ ತಾಳಬಾರದು. ಈ ಎಲ್ಲ ಬೆಳವಣಿಗೆಗಳನ್ನು ತಹಸೀಲ್ದಾರ್, ಡಿವೈಎಸ್‌ಪಿ, ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷರು ಮತ್ತು ಸಬ್ ಇನ್‌ಸ್ಪೆಕ್ಟರ್‌ಗೆ ಮನವಿ ಪತ್ರದ ಮೂಲಕ ಗಮನಕ್ಕೆ ತರಲಾಗಿದೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಯುವ ರೈತ ಘಟಕದ ತಾಲೂಕು ಅಧ್ಯಕ್ಷ ಪ್ರದೀಪ್ ದುಮ್ಮೇನಹಳ್ಳಿ ಮಾತನಾಡಿ, ಬೆಳಿಗ್ಗೆಯಿಂದ ರಾತ್ರಿಯವರೆಗೂ ನಗರದ ಹೊರ ವಲಯ ಮತ್ತು ನಗರ ವ್ಯಾಪ್ತಿಯೊಳಗೆ ೮೦ ರಿಂದ ೧೦೦ ಕಿ.ಮೀ. ವೇಗದಲ್ಲಿ ಪುಂಡರು ದ್ವಿಚಕ್ರ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಇವರೆಲ್ಲರೂ ಮಾದಕ ವಸ್ತುಗಳನ್ನು ಸೇವಿಸಿ ವಾಹನಗಳನ್ನು ಚಲಾಯಿಸುತ್ತಿದ್ದು, ಇವರ ವಿರುದ್ದ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವುದು ವಿಪರ್ಯಾಸವಾಗಿದೆ. ಅಯಕಟ್ಟಿನ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಮತ್ತು ವೃತ್ತಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಸ್ವಯಂಪ್ರೇರಿತವಾಗಿ ದೂರುಗಳನ್ನು ದಾಖಲಿಸಿಕೊಳ್ಳಬಹುದಾಗಿದೆ. ಆದರೆ ಮೂಕ ಪ್ರೇಕ್ಷಕರಂತೆ ಇರುವ ಇವರ ಕರ್ತವ್ಯ ಲೋಪದಿಂದ ರಾಜಾರೋಷವಾಗಿ ಪುಂಡರು ಬೈಕ್ ವ್ಹೀಲಿಂಗ್ ಮಾಡುತ್ತ ಸಾರ್ವಜನಿಕ ವಲಯಕ್ಕೆ ದೊಡ್ಡ ತಲೆ ನೋವಾಗಿದ್ದಾರೆ. ಇವರ ಹಾವಳಿಗಳ ದೃಶ್ಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿರುವ ಸಿಸಿ ಕ್ಯಾಮರಗಳಲ್ಲಿ ನೋಡಬಹುದಾಗಿದ್ದು, ಸಾರ್ವಜನಿಕರೇ ಖುದ್ದು ವಾಹನಗಳ ಮಾಹಿತಿ ನೀಡಬೇಕು ಎಂಬ ಮಾತುಗಳು ವಿಪರ್ಯಾಸವಾಗಿವೆ. ಇಂತಹ ಪುಂಡರ ಹಾವಳಿ ನಿಯಂತ್ರಣಕ್ಕೆ ಸಂಘವು ಸಹ ಪೊಲೀಸ್ ಇಲಾಖೆ ಜತೆ ಕೈ ಜೊಡಿಸಲಿದ್ದು, ಸ್ವಾಸ್ಥ್ಯ ಸಮಾಜಕ್ಕಾಗಿ ಸಹಕಾರ ನೀಡಲಿದೆ ಎಂದರು.

ಮನವಿ ನೀಡುವ ವೇಳೆ ಡಿವೈಎಸ್‌ಪಿ ಲೋಕೇಶ್, ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಚಂದ್ರಶೇಖರ್, ಸಬ್ ಇನ್‌ಸ್ಪೆಕ್ಟರ್ ಲತಾ, ಸಿದ್ದೇಶ್ ಇದ್ದರು. ರೈತ ಮುಖಂಡರಾದ ಮಂಜುನಾಥ್, ಕಿರಣ್, ರವಿ, ಶಿವುಕುಮಾರ್ ಭಾಗವಹಿಸಿದ್ದರು.

ಅರಸೀಕೆರೆ ನಗರದಲ್ಲಿ ಬೈಕ್ ವ್ಹೀಲಿಂಗ್ ಹಾವಳಿ ವಿರುದ್ದ ರೈತ ಸಂಘದಿಂದ ಪ್ರತಿಭಟನೆ ಮಾಡಲಾಯಿತು..