ಸೂಳೆಕೆರೆ ಬಳಿ ಬೈಕ್ ವ್ಹೀಲಿಂಗ್: ಆರೋಪಿ ವಿರುದ್ಧ ಕೇಸ್‌ ದಾಖಲು

| Published : Feb 23 2025, 12:30 AM IST

ಸೂಳೆಕೆರೆ ಬಳಿ ಬೈಕ್ ವ್ಹೀಲಿಂಗ್: ಆರೋಪಿ ವಿರುದ್ಧ ಕೇಸ್‌ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಸೂಳೆಕೆರೆಯ ಶ್ರೀ ಸಿದ್ದೇಶ್ವರ ದೇವಸ್ಥಾನ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಬೈಕಿನಲ್ಲಿ ಹಿಂದೆ ಒಬ್ಬನ್ನು ಕೂರಿಸಿಕೊಂಡು, ಹೆಲ್ಮೆಟ್ ಧರಿಸದೇ, ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಾಲನೆ ಮಾಡುತ್ತಾ, ವ್ಹೀಲಿಂಗ್ ಮಾಡುತ್ತಿದ್ದ ಆರೋಪಿ ವಿರುದ್ಧ ಚನ್ನಗಿರಿ ತಾಲೂಕು ಬಸವಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- ಸೋಷಿಯಲ್ ಮೀಡಿಯಾಗೂ ವೀಡಿಯೋ ಹಾಕಿದ್ದ ಚನ್ನಗಿರಿ ಜಮೀರ್‌ । ಬಸವಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ಕ್ರಮ- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಸೂಳೆಕೆರೆಯ ಶ್ರೀ ಸಿದ್ದೇಶ್ವರ ದೇವಸ್ಥಾನ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಬೈಕಿನಲ್ಲಿ ಹಿಂದೆ ಒಬ್ಬನ್ನು ಕೂರಿಸಿಕೊಂಡು, ಹೆಲ್ಮೆಟ್ ಧರಿಸದೇ, ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಾಲನೆ ಮಾಡುತ್ತಾ, ವ್ಹೀಲಿಂಗ್ ಮಾಡುತ್ತಿದ್ದ ಆರೋಪಿ ವಿರುದ್ಧ ಚನ್ನಗಿರಿ ತಾಲೂಕು ಬಸವಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಚನ್ನಗಿರಿ ಪಟ್ಟಣದ ವಾಸಿ ಜಮೀರ್ ಅಲಿಯಾಸ್ ಪಾಪಾ ಎಂಬಾತ ಫೆ.11ರಂದು ದಾವಣಗೆರೆ-ಚನ್ನಗಿರಿ ರಸ್ತೆಯ ಸೂಳೆಕೆರೆ ಬಳಿ ಶ್ರೀ ಸಿದ್ದಪ್ಪ ದೇವಸ್ಥಾನ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಬೈಕ್‌ನಲ್ಲಿ ಸಾಗಿದ್ದಾನೆ. ಈ ವೇಳೆ ವೇಗವಾಗಿ ಬೈಕ್ ಚಾಲನೆ ಮಾಡುತ್ತಾ, ಮುಂದಿನ ಗಾಲಿಯನ್ನು ಮೇಲೆ ಹಾರಿಸಿಕೊಂಡು, ಹಿಂದಿನ ಒಂದೇ ಗಾಲಿಯಲ್ಲಿ ಬೈಕ್‌ ಚಾಲನೆ (ಬೈಕ್ ವ್ಹೀಲಿಂಗ್) ಮಾಡಿದ್ಧಾನೆ. ಅಲ್ಲದೇ, ಇತರೆ ವಾಹನ ಸವಾರರಿಗೆ, ಸಾರ್ವಜನಿಕರಿಗೆ ತೊಂದರೆ ಆಗುವಂತೆ ಬೈಕ್ ಸವಾರಿ ಮಾಡುತ್ತಿದ್ದ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದನು.

ಸೋಷಿಯಲ್ ಮೀಡಿಯಾದಲ್ಲಿದ್ದ ಈ ವೀಡಿಯೋ ಪರಿಶೀಲಿಸಿದಾಗ ಬೈಕ್ ಸವಾರ ಚನ್ನಗಿರಿ ಪಟ್ಟಣದ ಜಮೀರ್ ಅಲಿಯಾಸ್ ಪಾಪಾ ಎಂಬುದಾಗಿ ತಿಳಿದುಬಂದಿದೆ. ಸಂಚಾರ ನಿಯಮ ಉಲ್ಲಂಘನೆ ಹಾಗೂ ಅದರ ಫೋಟೋ, ವೀಡಿಯೋವನ್ನು ಪರಿಶೀಲಿಸಿ, ಆರೋಪಿ ಜಮೀರನನ್ನು ಪತ್ತೆ ಮಾಡಲಾಯಿತು. ಬಸವಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

- - -

ಬಾಕ್ಸ್‌ * ಪೊಲೀಸ್ ಇಲಾಖೆ ಖಡಕ್‌ ಎಚ್ಚರಿಕೆ ದಾವಣಗೆರೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಯುವಕರು ಹುಚ್ಚು ಕ್ರೇಜ್‌ಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳನ್ನು ಹಾಕಲು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ, ಸಾರ್ವಜನಿಕರಿಗೆ ತೊಂದರೆ ಆಗುವಂತೆ ಹಾಗೂ ತಮ್ಮ ಜೀವಕ್ಕೆ ಹಾನಿ ಆಗುವಂತೆಯೂ ವಾಹನ ಚಾಲನೆ ಮಾಡುವಂಥ ನಡೆಗಳು ಕಂಡುಬಂದಿವೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ಎಚ್ಚರಿಸಿದೆ.

ಅತಿ ವೇಗವಾಗಿ ವಾಹನ ಚಾಲನೆ ಮಾಡುವುದು, ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡುವುದು, ಡ್ರೈವಿಂಗ್ ಲೈಸೆನ್ಸ್ ಇಲ್ಲದೇ, ವಾಹನ ಚಾಲನೆ ಮಾಡುವುದು, ಸಂಚಾರ ನಿಯಮ ಪಾಲಿಸದೇ ಇರುವುದು, ಅತಿ ವೇಗ, ಅಜಾಗರೂಕತೆಯಿಂದ ಚಾಲನೆ ಮಾಡುವುದು, ವ್ಹೀಲಿಂಗ್ ಮಾಡುವುದು ಕಂಡುಬಂದರೆ ಅಂತಹ ಬೈಕ್ ಸವಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಖಡಕ್‌ ಎಚ್ಚರಿಕೆ ನೀಡಿದೆ.

- - -

-22ಕೆಡಿವಿಜಿ3.ಜೆಪಿಜಿ:

ಚನ್ನಗಿರಿಯ ಜಮೀರ್ ಅಲಿಯಾಸ್ ಪಾಪಾ ಸೂಳೆಕೆರೆಯ ದಾವಣಗೆರೆ-ಚನ್ನಗಿರಿ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ದೃಶ್ಯ.