ಸಾರಾಂಶ
ಮಣ್ಣು ಮತ್ತು ನೀರಿನ ಸಂರಕ್ಷಣೆಯ ಕುರಿತ ಜಾಗೃತಿ ಜಾಥಾ ಯಲಕನೂರು ಗ್ರಾಮದಲ್ಲಿ ನಡೆಯಿತು. ಕಲಾ ತಂಡಗಳಿಂದ ಬೀದಿ ನಾಟಕ ನಡೆಯಿತು
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕೃಷಿ ಇಲಾಖೆ ಮತ್ತು ನೇರುಗಳಲೆ ಗ್ರಾಮ ಪಂಚಾಯಿತಿ ವತಿಯಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆಯ ಕುರಿತ ಜಾಗೃತಿ ಜಾಥಾ ಯಲಕನೂರು ಹೊಸಳ್ಳಿ ಗ್ರಾಮದಲ್ಲಿ ಈಚೆಗೆ ನಡೆಯಿತು.ಜಾಥಾವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಕುಮಾರ್ ಉದ್ಘಾಟಿಸಿದರು. ಜಲಾನಯನ ರಥದೊಂದಿಗೆ ಗ್ರಾಮದ ಮಹಿಳೆಯರು ಕಳಸಹೊತ್ತು ನಡೆದರು. ಕಲಾ ತಂಡಗಳಿಂದ ಬೀದಿ ನಾಟಕ ನಡೆಯಿತು.
ಆರೆಯೂರು ಗ್ರಾಮದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೋಮಶೇಖರ್ ಉದ್ಘಾಟಿಸಿದರು. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಒತ್ತು ಕೊಡುವ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಮಣ್ಣಿನ ಸವಕಳಿಯನ್ನು ತಡೆಗಟ್ಟಿ, ನೀರು ಇಂಗಿಸಿ ಅಂತರ್‌ಜಲ ಮರುಪೂರ್ಣಗೊಳಿಸಲು ಕಿಂಡಿ ಅಣೆಕಟ್ಟೆ, ಕೃಷಿಹೊಂಡ, ತೊಟ್ಟಿಲುಗುಂಡಿ ನಿರ್ಮಾಣದಂತಹ ಕಾಮಗಾರಿಗಳನ್ನು ಯಲಕನೂರು ಹೊಸಳ್ಳಿ ಗ್ರಾಮದಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದರು. ಮಳೆ ಆಶ್ರಿತ ತಾಲೂಕಿನಲ್ಲಿ ಈ ಸಂಯೋಜನೆ ಮಹತ್ತರ ಪಾತ್ರ ವಹಿಸುತ್ತದೆ. ಯೋಜನೆಯಡಿ ರೈತರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.ವೇದಿಕೆಯಲ್ಲಿ ಉಪ ಕೃಷಿ ನಿರ್ದೇಶಕರಾದ ಸೋಮಶೇಖರ್, ಸಹಾಯಕ ಕೃಷಿ ನಿರ್ದೇಶಕರಾದ ಕೆ.ಪಿ. ವೀರಣ್ಣ, ಕೃಷಿ ಅಧಿಕಾರಿ ಕೆ.ಕವಿತಾ ಮತ್ತಿತರರು ಇದ್ದರು.