ಸಾರಾಂಶ
ಬೃಹತ್ ಮರವೊಂದು ಬುಡ ಸಮೇತ ಬೈಕ್ ಸವಾರರ ಮೇಲೆ ಬಿದ್ದ ಪರಿಣಾಮ ಯುವತಿ ಮೃತಪಟ್ಟು ಓರ್ವನಿಗೆ ಗಾಯವಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ಬೃಹತ್ ಮರವೊಂದು ಬುಡ ಸಮೇತ ಬೈಕ್ ಸವಾರರ ಮೇಲೆ ಬಿದ್ದ ಪರಿಣಾಮ ಯುವತಿ ಮೃತಪಟ್ಟು ಓರ್ವನಿಗೆ ಗಾಯವಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.ಹೆಬ್ಬಾಳ ನಿವಾಸಿ ಕೀರ್ತನಾ (24) ಮೃತ ಯುವತಿ. ಭಾನುವಾರ ಆಚಾರ್ಯ ಕಾಲೇಜು ಮೈದಾನದಲ್ಲಿ ನಡೆದ ಸ್ಯಾಂಡಲ್ವುಡ್ ಪ್ರೀಮಿಯರ್ ಲೀಗ್ ಪಂದ್ಯ ವೀಕ್ಷಿಸಿದ ಕೀರ್ತನಾ ಅವರು ಸ್ನೇಹಿತ ಭಾಸ್ಕರ್ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದರು. ಆಗ ಸೋಲಾದೇವನಹಳ್ಳಿ ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲಿ ಬೃಹತ್ ಗಾತ್ರದ ಅರಳಿ ಮರ ಉರುಳಿ ಬೈಕ್ ಸವಾರರ ಮೇಲೆ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮರಣೋತ್ತರ ಪರೀಕ್ಷೆಗಾಗಿ ಕೀರ್ತನಾ ಶವವನ್ನು ಸಪ್ತಗಿರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನೂ ಕೀರ್ತನಾ ಸ್ನೇಹಿತ ಭಾಸ್ಕರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರಳಿ ಮರವೂ ಹಳೆಯದಾಗಿದ್ದು, ಬುಡವೆಲ್ಲ ಟೊಳ್ಳಾಗಿತ್ತು. ಹಾಗಾಗಿ ಏಕಾಏಕಿ ಬೈಕ್ ಮೇಲೆ ಬಿದ್ದು ಅವಘಡ ಸಂಭವಿಸಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮರ ತೆರವು ಮಾಡಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.