ರಸ್ತೆ ಮಧ್ಯೆ ಗಲಾಟೆ ಮಾಡಿ ದಂಪತಿಗೆ ಬೈಕ್ ಸವಾರನೊಬ್ಬ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿರುವ ಘಟನೆ ಕಾಡುಗೊಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಸ್ತೆ ಮಧ್ಯೆ ಗಲಾಟೆ ಮಾಡಿ ದಂಪತಿಗೆ ಬೈಕ್ ಸವಾರನೊಬ್ಬ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿರುವ ಘಟನೆ ಕಾಡುಗೊಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಕಾಡುಗೊಡಿ ಪೊಲೀಸರು ಬೈಕ್ ಸವಾರನಿಗಾಗಿ ಶೋಧ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ದಂಪತಿ ಕಾರಿನಲ್ಲಿ ಹೋಗುವಾಗ ಯಾವುದೋ ಕಾರಣಕ್ಕೆ ಬೈಕ್ ಸವಾರನೊಂದಿಗೆ ಜಗಳ ಮಾಡಿಕೊಂಡಿದ್ದಾರೆ. ನಂತರ ನೆಕ್ಸಸ್ ಶಾಂತಿನಿಕೇತನ್ ಅಪಾರ್ಟ್‌ಮೆಂಟ್‌ನ ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿದ್ದಾಗ, ಬೈಕ್ ನಿಲ್ಲಿಸಿ ಬಂದ ಸವಾರ ನಡುರಸ್ತೆಯಲ್ಲಿಯೇ ದಂಪತಿಯೊಂದಿಗೆ ಗಲಾಟೆ ಮಾಡಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಸವಾರ ಸೊಂಟದ ಬಳಿ ಇಟ್ಟುಕೊಂಡಿದ್ದ ಮಾರಕಾಸ್ತ್ರವನ್ನು ತೋರಿಸಿ, ನಿಮ್ಮನ್ನು ಇಲ್ಲಿಯೇ ಮುಗಿಸುತ್ತೇನೆ ಎಂದು ಧಮ್ಕಿ ಹಾಕಿದ್ದಾನೆ. ಬೈಕ್ ಸವಾರನ ಹುಚ್ಚಾಟ ಕಾರಿನಲ್ಲಿದ್ದ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಆರೋಪಿ ಪತ್ತೆಗಾಗಿ ಎರಡು ತಂಡ ರಚಿಸಿದ್ದಾರೆ. ಬೈಕ್ ನೋಂದಣಿ ಸಂಖ್ಯೆ ಆಧರಿಸಿ ಸವಾರನಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.